ವೈದ್ಯರಿಗೆ ವಿರಾಮ ನೀಡುವ ಬಗ್ಗೆ ಆಲೋಚಿಸಿ: ಕೇಂದ್ರಕ್ಕೆ ಸುಪ್ರೀಂಕೋರ್ಟ್ ಸಲಹೆ
ನವದೆಹಲಿ, ಡಿಸೆಂಬರ್ 15: ಕಳೆದ ಏಳೆಂಟು ತಿಂಗಳಿನಿಂದ ಸತತವಾಗಿ ಕೋವಿಡ್ 19 ಕರ್ತವ್ಯದಲ್ಲಿ ತೊಡಗಿರುವ ವೈದ್ಯರಿಗೆ ಕೆಲವು ಸಮಯ ವಿರಾಮ ನೀಡುವ ಬಗ್ಗೆ ಪರಿಗಣಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಮಂಗಳವಾರ ಹೇಳಿದೆ.
ಎಡೆಬಿಡದೆ ಕೆಲಸ ಮಾಡುತ್ತಿರುವುದು ವೈದ್ಯರ ಮಾನಸಿಕ ಆರೋಗ್ಯಕ್ಕೆ ಮೇಲೆ ಕೆಟ್ಟ ಪರಿಣಾಮ ಬೀರಬಹುದು ಎಂದು ಸುಪ್ರೀಂಕೋರ್ಟ್ ಹೇಳಿದೆ.
ಕೋವಿಡ್-19 ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡುವುದು ಮತ್ತು ಆಸ್ಪತ್ರೆಗಳಲ್ಲಿ ಮೃತದೇಹಗಳನ್ನು ಗೌರವಯುತವಾಗಿ ನಿರ್ವಹಿಸುವುದಕ್ಕೆ ಸಂಬಂಧಿಸಿದಂತೆ ಸ್ವಯಂ ಪ್ರೇರಿತ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಆರ್ಎಸ್ ರೆಡ್ಡಿ ಮತ್ತು ಎಂಆರ್ ಶಾ ಅವರನ್ನು ಒಳಗೊಂಡ ನ್ಯಾಯಪೀಠ, ವೈದ್ಯರಿಗೆ ಕೆಲ ಸಮಯ ವಿರಾಮ ನೀಡುವ ಸಲಹೆಯನ್ನು ಪರಿಗಣಿಸುವಂತೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ಸೂಚಿಸಿತು.

ಕೋವಿಡ್ 19 ಕರ್ತವ್ಯದಲ್ಲಿ ನಿರತರಾಗಿರುವ ಆರೋಗ್ಯ ಕಾರ್ಯಕರ್ತರಿಗೆ ಕೆಲವು ಕಾಲ ವಿರಾಮ ನೀಡುವ ಸಂಬಂಧ ನ್ಯಾಯಪೀಠ ನೀಡಿದ ಸಲಹೆಯನ್ನು ಸರ್ಕಾರ ಪರಿಗಣಿಸಲಿದೆ ಎಂದು ತುಷಾರ್ ಮೆಹ್ತಾ ಭರವಸೆ ನೀಡಿದರು.
'ಕಳೆದ ಏಳೆಂಟು ತಿಂಗಳಿನಿಂದ ವೈದ್ಯರಿಗೆ ಯಾವುದೇ ವಿಶ್ರಾಂತಿ ನೀಡಿಲ್ಲ. ಅವರು ಸತತವಾಗಿ ಕೆಲಸ ಮಾಡುತ್ತಿದ್ದಾರೆ. ನೀವು ಸೂಚನೆಯನ್ನು ಪರಿಗಣಿಸಿ ಅವರಿಗೆ ಕೆಲವು ಸಮಯ ವಿರಾಮ ನೀಡುವ ಬಗ್ಗೆ ಯೋಚಿಸಿ. ಇದು ಅವರಿಗೆ ತುಂಬಾ ನೋವಿನ ಸಂಗತಿ. ಅಲ್ಲದೆ ಅದು ಅವರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿರಬಹುದು' ಎಂದು ನ್ಯಾಯಪೀಠ ಹೇಳಿತು.












Click it and Unblock the Notifications