ಸುಪ್ರೀಂನಲ್ಲೂ ಜಯಾ ಜಾಮೀನು ಅರ್ಜಿ ಮುಂದೂಡಿಕೆ
ನವದೆಹಲಿ, ಅ.13: ಅಕ್ರಮ ಆಸ್ತಿ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟಿನಿಂದ ಜಾಮೀನು ಪಡೆಯುವಲ್ಲಿ ವಿಫಲವಾದ ಜಯಲಲಿತಾ ಅವರಿಗೆ ಸುಪ್ರೀಂಕೋರ್ಟಿನಲ್ಲೂ ಕೊಂಚ ಹಿನ್ನೆಡೆ ಅನುಭವಿಸಿದ್ದಾರೆ. ಸೋಮವಾರ ವಿಚಾರಣೆಗೆ ಬಂದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎಚ್. ಎಲ್ ದತ್ತು ಅವರಿದ್ದ ನ್ಯಾಯಪೀಠ ಶುಕ್ರವಾರಕ್ಕೆ ಮುಂದೂಡಿದೆ.
ಸುಮಾರು 14 ದಿನಗಳಿಂದ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರು ಶುಕ್ರವಾರ(ಅ.17)ದ ತನಕ ಕಾಯಬೇಕಾಗಿದೆ.

ಸುಪ್ರೀಂಕೋರ್ಟಿನಲ್ಲಿ ನಿರೀಕ್ಷೆಯಂತೆ ಜಯಾ ಪರ ರಾಮ್ ಜೇಠ್ಮಲಾನಿ ವಾದ ಮಂಡಿಸಲಿಲ್ಲ. ನ್ಯಾಯವಾದಿ ಹರೀಶ್ ಸಾಳ್ವೆ ಅವರು ಕಾಣಿಸಲಿಲ್ಲ. ಬದಲಿಗೆ ಕಾವೇರಿ ವಿವಾದ ಕೇಸಿನಲ್ಲಿ ಜಯಾ ವಿರುದ್ಧ ವಾದಿಸಿದ್ದ ಫಾಲಿ ನಾರಿಮನ್ ಅವರು ಸುಪ್ರೀಂಕೋರ್ಟಿನಲ್ಲಿ ಸೋಮವಾರ ಜಯಾ ಅವರ ಜಾಮೀನು ಅರ್ಜಿಯನ್ನು ಹಾಕಿದರು. [ಅಕ್ರಮ ಆಸ್ತಿ ಗಳಿಕೆ ಕೇಸ್: ಟೈಮ್ ಲೈನ್ ]
ಜಯಾ ಅವರ ಜಾಮೀನು ಅರ್ಜಿಯನ್ನು ಸ್ವೀಕರಿಸಿದ ನ್ಯಾಯಪೀಠ ಅರ್ಜಿಯ ವಿಚಾರಣೆ ಕುರಿತಂತೆ ಈ ಕ್ಷಣಕ್ಕೆ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡದೆ, ವಿಚಾರಣೆಯನ್ನು ಶುಕ್ರವಾರ ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಜಯಾ ಪರ ವಕೀಲ ಫಾಲಿ ನಾರಿಮನ್ ಗೆ ಹೇಳಿದ್ದಾರೆ.
ಜಯಾ ಪರ ಅರ್ಜಿ ಮಂಡನೆ ಹಾಗೂ ವಾದ ಮಾಡಬೇಕಿದ್ದ ಹರೀಶ್ ಸಾಳ್ವೆ ಅವರು ವಿದೇಶಿ ಪ್ರವಾಸದಲ್ಲಿರುವುದರಿಂದ ಅವರ ಬದಲಿಗೆ ಫಾಲಿ ನಾರಿಮನ್ ಅರ್ಜಿ ಹಾಕಿದರು.
'ಭ್ರಷ್ಟಾಚಾರ ಪ್ರಕರಣ ತುಂಬಾ ಗಂಭೀರವಾಗಿದ್ದು, ಈ ಸಂದರ್ಭದಲ್ಲಿ ಷರತ್ತುಬದ್ಧ ಜಾಮೀನು ಮಂಜೂರು ಮಾಡಲು ಸಾಧ್ಯವಿಲ್ಲ' ಎಂದು ಕಾರಣ ಹೇಳಿ ಕರ್ನಾಟಕ ಹೈಕೋರ್ಟ್ ನ್ಯಾ. ಎ.ವಿ ಚಂದ್ರಶೇಖರ್ ಅವರು ಅ.7ರಂದು ಅಕ್ರಮ ಅಸ್ತಿ ಪ್ರಕರಣದಲ್ಲಿ ಜಯಲಲಿತಾ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದರು. ಜೊತೆಗೆ ಈ ಪ್ರಕರಣದಲ್ಲಿ ಸೆಷನ್ಸ್ ಕೋರ್ಟ್ ನೀಡಿರುವ ಶಿಕ್ಷೆ ಪ್ರಮಾಣ ಆದೇಶ ರದ್ದು ಮಾಡಲು ನಿರಾಕರಿಸಿದರು. [ಜಯಾಗೆ ಜಾಮೀನಿಲ್ಲ ಏಕೆ?]
ಜಗನ್ ಮೋಹನ್ ರೆಡ್ಡಿ ಕೇಸ್, ಅಸಾರಾಮ್ ಬಾಪು ಕೇಸ್ ನಂತರ ಜಯಾ ಕೇಸಿನಲ್ಲಿ ಜಾಮೀನು ಕೊಡಿಸಲು ಸಾಧ್ಯವಾಗದ ಕಾರಣ ಹಿರಿಯ ನ್ಯಾಯವಾದಿ ರಾಮ್ ಜೇಠ್ಮಲಾನಿ ಅವರು ಸುಪ್ರೀಂಕೋರ್ಟಿನಲ್ಲಿ ಜಯಾ ಪರ ವಾದಿಸಲು ಮುಂದಾಗಿಲ್ಲ. ಹೀಗಾಗಿ ಈ ಹಿಂದೆ ಜಯಾ ಪರ ವಾದಿಸಿದ್ದ ಹರೀಶ್ ಸಾಳ್ವೆ ಅವರನ್ನೇ ಕರೆ ತರಲಾಗುತ್ತದೆ ಎನ್ನಲಾಗಿತ್ತು. ಅದರೆ, ನ್ಯಾ ಫಾಲಿ ನಾರಿಮನ್ ವಾದ ಮಂಡಿಸುವುದು ಖಾತ್ರಿಯಾಗಿದೆ. [ಸೋಲೊಪ್ಪಿಕೊಂಡ ರಾಮ್?]












Click it and Unblock the Notifications