ದೆಹಲಿ ಚುನಾವಣೆಗೆ ಪ್ರಚಾರ ನಡೆಸಿದ ಶೋಭಾ ಕರಂದ್ಲಾಜೆ
ನವದೆಹಲಿ, ಫೆ.2 : ನವದೆಹಲಿಯ ವಿಧಾನಸಭೆ ಚುನಾವಣೆಗೆ ಕೆಲವು ದಿನಗಳು ಮಾತ್ರ ಬಾಕಿ ಉಳಿದಿವೆ. ಕರ್ನಾಟಕದ ಬಿಜೆಪಿ ನಾಯಕರು ದೆಹಲಿಯ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಸಂಸದೆ ಶೋಭಾ ಕರಂದ್ಲಾಜೆ ಅವರು ದೆಹಲಿಯಲ್ಲಿರುವ ಕನ್ನಡಿಗರನ್ನು ಭೇಟಿ ಮಾಡಿ, ಮತಯಾಚನೆ ಮಾಡಿದ್ದಾರೆ.
ನವದೆಹಲಿಯಲ್ಲಿ ಭಾನುವಾರ ಆರ್.ಕೆ.ಪುರಂನಲ್ಲಿನ ಕನ್ನಡಿಗರ ನಿವಾಸಗಳಿಗೆ ಭೇಟಿ ನೀಡಿ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಿದರು. ಪ್ರತಿಯೊಬ್ಬರ ಮನೆಗೂ ಖುದ್ದಾಗಿ ಭೇಟಿ ನೀಡಿದ ಸಂಸದೆ ಪಕ್ಷದ ಅಭ್ಯರ್ಥಿಗಳಿಗೆ ಮತ ನೀಡುವಂತೆ ಮನವಿ ಮಾಡಿದರು.

ಆರ್.ಕೆ.ಪುರಂನಲ್ಲಿ ಕರ್ನಾಟಕ ಭವನದ ನೌಕರರ ಸರ್ಕಾರಿ ನಿವಾಸಗಳಿವೆ. 250ಕ್ಕೂ ಹೆಚ್ಚು ಕನ್ನಡಿಗ ಮತದಾರರಿದ್ದಾರೆ. ಆದ್ದರಿಂದ ಶೋಭಾ ಕರಂದ್ಲಾಜೆ ಸ್ಥಳೀಯ ನಾಯಕರ ಜೊತೆ ಮನೆ-ಮನೆಗೂ ಭೇಟಿ ನೀಡಿ ಪ್ರಚಾರ ನಡೆಸಿದರು. [ದೆಹಲಿ ಚುನಾವಣೆ : ಬಿಜೆಪಿಯಲ್ಲಾದ 10 ಪ್ರಮುಖ ಬೆಳವಣಿಗೆ]
ಈ ಬಗ್ಗೆ ಮಾತನಾಡಿದ ಶೋಭಾ ಕರಂದ್ಲಾಜೆ ಅವರು, ನವದೆಹಲಿಯಲ್ಲಿರುವ ಎಲ್ಲಾ ಕನ್ನಡಿಗ ಮತದಾರರನ್ನು ಭೇಟಿ ಮಾಡಿ ಮತಯಾಚಿಸುವುದಾಗಿ ಹೇಳಿದರು. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ದೆಹಲಿಯಲ್ಲಿ ಅಧಿಕಾರ ಹಿಡಿಯುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. [ಕಿರಣ್ ಬೇಡಿ ದೆಹಲಿ ಸಿಎಂ ಅಭ್ಯರ್ಥಿ]
ಫೆಬ್ರವರಿ 7ರಂದು 70 ಸದಸ್ಯ ಬಲದ ದೆಹಲಿ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಫೆಬ್ರವರಿ 10ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. ಬಿಜೆಪಿ ದೆಹಲಿಯಲ್ಲಿ ಅಧಿಕಾರ ಪಡೆಯಲು ಕಾರ್ಯತಂತ್ರ ರೂಪಿಸಿದ್ದು, ಮಾಜಿ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಣೆ ಮಾಡಿದೆ.
ಬಿಜೆಪಿ ಮಾತ್ರವಲ್ಲ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದ ಕರ್ನಾಟಕ ಘಟಕದ ಹಲವು ಕಾರ್ಯಕರ್ತರು ದೆಹಲಿ ಚುನಾವಣೆ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.












Click it and Unblock the Notifications