Breaking: ರಾಷ್ಟ್ರೀಯ ಭಾಷೆ ಸಂಸ್ಕೃತ: ಅರ್ಜಿ ವಜಾಗೊಳಿಸಿದ ಸುಪ್ರೀಂ
ನವದೆಹಲಿ, ಸೆ.02: ಸಂಸ್ಕೃತವನ್ನು ರಾಷ್ಟ್ರೀಯ ಭಾಷೆಯನ್ನಾಗಿ ಘೋಷಿಸಬೇಕೆಂಬ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ.
ಭಾಷೆಗೆ 'ರಾಷ್ಟ್ರೀಯ' ಸ್ಥಾನಮಾನ ನೀಡುವುದು ಸಂವಿಧಾನದಕ್ಕೆ ತಿದ್ದುಪಡಿ ತರುವ ಪ್ರಮುಖ ನೀತಿ ನಿರ್ಧಾರವಾಗಿದೆ, ಅದು ನ್ಯಾಯಾಲಯದ ಆದೇಶವಲ್ಲ ಎಂದು ಹೇಳಿರುವ ಸುಪ್ರೀಂ ಕೋರ್ಟ್, ಸಂಸ್ಕೃತವನ್ನು ರಾಷ್ಟ್ರೀಯ ಭಾಷೆಯಾಗಿ ಘೋಷಿಸುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಶುಕ್ರವಾರ ವಜಾಗೊಳಿಸಿದೆ.
"ಇದು ನೀತಿ ನಿರ್ಧಾರದ ಕ್ಷೇತ್ರದಲ್ಲಿದೆ. ಮೇಲೆ ಹೇಳಿದ ಹಾಗೆ ಭಾರತದ ಸಂವಿಧಾನಕ್ಕೆ ತಿದ್ದುಪಡಿ ತರಬೇಕಾಗುತ್ತದೆ. ಒಂದು ಭಾಷೆಯನ್ನು ರಾಷ್ಟ್ರೀಯ ಭಾಷೆಯನ್ನಾಗಿ ಘೋಷಿಸಲು ಸಂಸತ್ತಿಗೆ ಯಾವುದೇ ಆದೇಶ ನೀಡಲಾಗುವುದಿಲ್ಲ " ಎಂದು ನ್ಯಾಯಮೂರ್ತಿಗಳಾದ ಎಂಆರ್ ಶಾ ಮತ್ತು ಕೃಷ್ಣ ಮುರಾರಿ ಅವರ ಸುಪ್ರೀಂ ಕೋರ್ಟ್ ಪೀಠ ಹೇಳಿದೆ.

ನಿವೃತ್ತ ಅಧಿಕಾರಿ ಮತ್ತು ವಕೀಲರಾದ ಡಿಜಿ ವಂಝಾರಾ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ.
''ಭಾರತದ ಎಷ್ಟು ನಗರಗಳಲ್ಲಿ ಸಂಸ್ಕೃತ ಮಾತನಾಡುತ್ತಾರೆ? ಇದು ಪಾಲಿಸಿ ಡಿಸಿಷನ್ ವಿಷಯ. ನಿರ್ದಿಷ್ಟ ನೀತಿ ನಿರ್ಧಾರ ತೆಗೆದುಕೊಳ್ಳಲು ನಾವು ಕೇಂದ್ರಕ್ಕೆ ಆದೇಶ ನೀಡಲು ಸಾಧ್ಯವಿಲ್ಲ'' ಎಂದು ಅರ್ಜಿದಾರನ್ನು ಪೀಠ ಟೀಕಿಸಿದೆ.
ಕೇಂದ್ರ ಸರಕಾರದಿಂದ ಈ ಬಗ್ಗೆ ಚರ್ಚೆಯಾಗಬೇಕು ಮತ್ತು ನ್ಯಾಯಾಲಯದ ಸೂಚನೆಯು ಸರಕಾರದ ಮಟ್ಟದಲ್ಲಿ ಈ ಚರ್ಚೆಯನ್ನು ಉತ್ತೇಜಿಸಲು ಬಹಳ ಸಹಾಯಕ ಎಂದು ವಕೀಲ ವಂಝಾರಾ ಹೇಳಿದರು.
ಇನ್ನು, ಸುಪ್ರೀಂ ಕೋರ್ಟ್ ಪೀಠವು ಹಗುರವಾದ ಧಾಟಿಯಲ್ಲಿ ಅರ್ಜಿದಾರರನ್ನು ಕೇಳಿತು, ''ನೀವು ಸಂಸ್ಕೃತ ಮಾತನಾಡುತ್ತೀರಾ? ನೀವು ಸಂಸ್ಕೃತದಲ್ಲಿ ಒಂದು ಸಾಲನ್ನು ಓದಬಹುದೇ ಅಥವಾ ನಿಮ್ಮ ರಿಟ್ ಅರ್ಜಿಯಲ್ಲಿರುವ ಪ್ರಾರ್ಥನೆಯನ್ನು ಸಂಸ್ಕೃತಕ್ಕೆ ಅನುವಾದಿಸಬಹುದೇ?'' ಎಂದಿದೆ.
ಇದಕ್ಕೆ ವಂಝಾರಾ ಅವರು ಸಂಸ್ಕೃತ ಶ್ಲೋಕವನ್ನು ಹಂಚಿಕೊಂಡಿದ್ದಾರೆ. ಆದರೆ, ಪೀಠವು, "ಇದು ನಮಗೆಲ್ಲರಿಗೂ ತಿಳಿದಿದೆ" ಎಂದು ಉತ್ತರಿಸಿದೆ.
ವಂಝಾರ ಅವರು ಬ್ರಿಟಿಷ್ ರಾಜ್ ಅವಧಿಯಲ್ಲಿ ಕಲ್ಕತ್ತಾದ ಹಿಂದಿನ ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶರನ್ನು ಉಲ್ಲೇಖಿಸಿ ಸರ್ ವಿಲಿಯಂ ಜೋನ್ಸ್ ಅವರು ಅಧ್ಯಯನ ಮಾಡಿದ 22 ಭಾಷೆಗಳಲ್ಲಿ ಸಂಸ್ಕೃತವು ಸ್ಪಷ್ಟವಾಗಿ ಮಾತೃಭಾಷೆಯಾಗಿದೆ ಎಂದು ವಾದಿಸಿದರು.
"ಹಿಂದಿ ಮತ್ತು ಇತರ ರಾಜ್ಯ ಭಾಷೆಗಳಲ್ಲಿ ಹಲವಾರು ಪದಗಳು ಸಂಸ್ಕೃತದಿಂದ ಬಂದಿವೆ ಎಂದು ನಮಗೆ ತಿಳಿದಿದೆ. ಆದರೆ ಈ ಭಾಷೆಯನ್ನು ರಾಷ್ಟ್ರೀಯ ಭಾಷೆಯನ್ನಾಗಿ ಘೋಷಿಸಲು ಇದು ಪ್ರಮುಖ ಕಾರಣವಾಗುವುದಿಲ್ಲ. ನಮಗೆ ಭಾಷೆಯನ್ನು ರಾಷ್ಟ್ರೀಯ ಭಾಷೆಯನ್ನಾಗಿ ಘೋಷಿಸುವುದು ತುಂಬಾ ಕಷ್ಟ" ಎಂದರು.
ಆರ್ಟಿಕಲ್ 32 ರ ಅಡಿಯಲ್ಲಿ, ಉನ್ನತ ನ್ಯಾಯಾಲಯವು ಸಾಕಷ್ಟು ವ್ಯಾಪ್ತಿಯನ್ನು ಹೊಂದಿದೆ. ಈ ವಿಷಯದ ಬಗ್ಗೆ ಕೇಂದ್ರದ ಅಭಿಪ್ರಾಯವನ್ನು ಪಡೆಯುವ ಮೂಲಕ ರಾಷ್ಟ್ರೀಯ ಭಾಷೆಯನ್ನಾಗಿ ಘೋಷಿಸುವ ದಿಕ್ಕಿನಲ್ಲಿ ಮುಂದುವರೆಯಬಹುದು ಎಂದು ಅರ್ಜಿದಾರರು ವಾದಿಸಿದರು.
ಆದರೆ, "ಈ ಚರ್ಚೆ ಸಂಸತ್ತಿನಲ್ಲಿ ನಡೆಯಬೇಕು" ಎಂದು ಪೀಠ ಉತ್ತರಿಸಿ ಅರ್ಜಿಯನ್ನು ವಜಾಗೊಳಿಸಿದೆ.












Click it and Unblock the Notifications