ಚುನಾವಣೆ ಹಳಿಯ ಮೇಲೆ ಓಡುವ ಖರ್ಗೆ ರೈಲು

ಖರ್ಗೆ ಅವರಿಗೆ ಇದು ಚೊಚ್ಚಲ ರೈಲ್ವೆ ಬಜೆಟ್ ಆಗಿದ್ದರೂ ಪೂರ್ಣ ಪ್ರಮಾಣದ್ದಲ್ಲ; ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಧ್ಯಂತರ ಬಜೆಟ್ (ಅಥವಾ ಲೇಖಾನುದಾನ) ಮಂಡಿಸಲಿದ್ದಾರೆ. ಜೂನ್ ತಿಂಗಳಲ್ಲಿ ಹೊಸ ಸರಕಾರ ರಚನೆಯಾಗಿ ರೈಲ್ವೆ ಖಾತೆಗೆ ಹೊಸ ಸಚಿವರು ಬಂದ ಮೇಲಷ್ಟೇ ಪೂರ್ಣ ಪ್ರಮಾಣದ ಬಜೆಟ್ ಮಂಡನೆಯಾಗಲಿದೆ.
ರೈಲ್ವೆ ಇಲಾಖೆ ಆದಾಯ ಗಣನೀಯವಾಗಿ ತಗ್ಗಿದ್ದರೂ ತಮ್ಮ ಮಧ್ಯಂತರ ಬಜೆಟ್ ಆಗಿರುವುದರಿಂದ ಲೋಕಸಭಾ ಚುನಾವಣೆ ಮುನ್ನೆಲೆಯಲ್ಲಿ ಸಚಿವ ಖರ್ಗೆ ಅವರು ಪ್ರಯಾಣ ದರ ಏರಿಸುವ ದುಸ್ಸಾಹಸಕ್ಕೆ ಕೈ ಹಾಕುವುದಿಲ್ಲ.
ಆದರೆ ಹೊಸ ಲೈನ್, ಹೆಚ್ಚು ಟ್ರೈನುಗಳು ಹಾಕುವುದಾಗಿ ಧಾರಾಣವಾಗಿ ರೈಲು ಬಿಡಬಹುದು. ಜತೆಗೆ ಪ್ರಯಾಣಿಕರನ್ನು ಮೆಚ್ಚಿಸಲು ಒಂದಷ್ಟು ಸೌಕರ್ಯಗಳನ್ನು ಘೋಷಿಸಬಹುದು. ರೈಲ್ವೆ ಆದಾಯ ಕುಸಿಯುತ್ತಿದ್ದರೂ ಪ್ರಗತಿ ಪರ ಬಜೆಟ್ ಮಂಡಿಸುವ ಜಾಣ್ಮೆ ತೋರಬಹುದು. ಸರಕು ಸಾಗಣೆ ಆದಾಯ 850 ಕೋಟಿ ರೂ ಕುಸಿದಿದ್ದರೆ ಪ್ರಯಾಣಿಕರಿಂದ ಬರುವ ಆದಾಯವು ಸುಮಾರು 4,000 ಕೋಟಿ ಕೋತಾ ಆಗಿದೆ.
ರೈಲ್ವೆ ಹಳಿಗಳು ಒಟ್ಟು 65,000 ಕಿಮೀ ಉದ್ದವಿದೆ. ಆದರೆ ಅವುಗಳ ಪೈಕಿ ಕೇವಲ 24,000 ಕಿಮೀ ಮಾರ್ಗ ಮಾತ್ರವೇ ವಿದ್ಯುತ್ ಚಾಲಿತ ಮಾರ್ಗವಾಗಿದೆ. ಉಳಿದವು ಡೀಸೆಲ್ ಮೇಲೆಯೇ ಓಡುತ್ತಿವೆ. ಹಾಗಾಗಿ ವಿದ್ಯುದ್ದೀಕರಣವೂ ಅಗತ್ಯವಾಗಿದೆ. ಅದರಲ್ಲೂ ಡೀಸೆಲ್ ಬೆಲೆ ಒಂದೇ ಸಮನೆ ಏರುತ್ತಿರುವುದರಿಂದ ರೈಲ್ವೆ ಸಂಚಾರ ವಿದ್ಯುದ್ದೀಕರಣ ಆಗಬೇಕಾದ ಜರೂರತ್ತು ಬಹಳಷ್ಟಿದೆ.
ಸಚಿವ ಖರ್ಗೆ ಅವರು ಕಳೆದ 10 ವರ್ಷಗಳಲ್ಲಿ ಯುಪಿಎ ಆಡಳಿತದಲ್ಲಿನ ರೈಲ್ವೆ ಇಲಾಖೆಯ ಸಾಧನೆಗಳನ್ನು ಒತ್ತಿ ಹೇಳಬಹುದು. ಅಗ್ನಿ ಅನಾಹುತಗಳು ಹೆಚ್ಚಾಗಿ ಘಟಿಸುತ್ತಿರುವುದರಿಂದ ಅಗ್ನಿ ನಿರೋಧಕ ಸುರಕ್ಷತೆ ಬಗ್ಗೆ ವಿಶೇಷ ಯೋಜನೆಗಳೇನಾದರೂ ಇದ್ದರೆ ಪ್ರಕಟಿಸಬಹುದು.












Click it and Unblock the Notifications