ಅಧ್ಯಕ್ಷೆಯಾಗೊಲ್ಲ ಎಂದ ಪ್ರಿಯಾಂಕಾ ಗಾಂಧಿ, ಪಟ್ಟಿಯಲ್ಲಿ 7 ಹೆಸರು?
ನವದೆಹಲಿ, ಜುಲೈ 25: ಕಾಂಗ್ರೆಸ್ ಪಕ್ಷಕ್ಕೆ ಮುಂದಿನ ಅಧ್ಯಕ್ಷರಾಗಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಆಯ್ಕೆಯಾಗಬೇಕು ಎಂಬ ಅವರ ಅಭಿಮಾನಿಗಳ, ಹಿತೈಷಿಗಳ ಆಸೆಗೆ ಭ್ರಮನಿರಸನವಾಗಿದೆ. ತಾವು ಕಾಂಗ್ರೆಸ್ ನ ಅತ್ಯುನ್ನತ ಹುದ್ದೆಯಲ್ಲಿ ಕೂರುವುದಿಲ್ಲ ಎಂದು ಸ್ವತಃ ಪ್ರಿಯಾಂಕಾ ಗಾಂಧಿ ವಾದ್ರಾ ಸ್ಪಷ್ಟಪಡಿಸಿದ್ದಾರೆ.
47 ವರ್ಷ ವಯಸ್ಸಿನ ಪ್ರಿಯಾಂಕಾ ಗಾಂಧಿ ವಾದ್ರಾ ಅವರೇ ಪಕ್ಷಾಧ್ಯಕ್ಷರಾಗಲೀ, ಗಾಂಧಿ ಕುಟುಂಬದ ಹೊರಗಿವರು ಆ ಸ್ಥಾನದಲ್ಲಿ ಕೂತರೆ ಪಕ್ಷದಲ್ಲಿ ಒಗ್ಗಟ್ಟಿನ ಕೊರತೆಯಾಗಬಹುದು, ಪಕ್ಷ ಛಿದ್ರವಾಗಬಹುದು ಎಂಬ ಅಭಿಪ್ರಾಯವನ್ನು ನಟ್ವರ್ ಸಿಂಗ್, ಅನಿಲ್ ಶಾಸ್ತ್ರಿ ಸೇರಿದಂತೆ ಕಾಂಗ್ರೆಸ್ ನ ಹಲವು ಮುಖಂಡರು ಹೊರಹಾಕಿದ್ದರು.
ಆದರೆ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಕಳಪೆ ಪ್ರದರ್ಶನದ ನಂತರ ನಾಯಕತ್ವದ ಬಗ್ಗೆ ಪರೋಕ್ಷವಾಗಿ ಎದ್ದ ಆರೋಪದಿಂದ ಬೇಸತ್ತು ರಾಹುಲ್ ಗಾಂಧಿ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಜೊತೆಗೆ, ಗಾಂಧಿ-ನೆಹರು ಕುಟುಂಬದಿಂದ ಈ ಸ್ಥಾನಕ್ಕೆ ಯಾರನ್ನೂ ಆರಿಸಬೇಡಿ. ಸಹೋದರಿ ಪ್ರಿಯಾಂಕಾ ಅವರನ್ನೂ ಈ ಸ್ಥಾನಕ್ಕೆ ಸೂಚಿಸಬೇಡಿ ಎಂದು ಆಗಲೇ ರಾಹುಲ್ ಗಾಂಧಿ ಹೇಳಿದ್ದರು. ಕಾಂಗ್ರೆಸ್ ಗೆ ಗಾಂಧಿ-ನೆಹರು ಕುಟುಂಬದ ಅಗತ್ಯ ಎಷ್ಟು ಎಂಬುದನ್ನು ಮನವರಿಕೆ ಮಾಡಿಸಲು ರಾಹುಲ್ ಗಾಂಧಿ ಈ ನಿರ್ಧಾರ ತೆಗೆದುಕೊಂಡಿದ್ದಿರಬಹುದು.

ಆದರೆ ಇದೀಗ ಪ್ರಿಯಾಂಕಾ ಗಾಂಧಿ ಆ ಸ್ಥಾನವನ್ನು ಒಲ್ಲೆ ಎಂದ ಮೇಲೆ ಪಕ್ಷಾಧ್ಯಕ್ಷ ಸ್ಥಾನದ ರೇಸ್ ನಲ್ಲಿರುವವರ ಪಟ್ಟಿ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಈ ಪಟ್ಟಿಯಲ್ಲಿ ಕರ್ನಾಟಕದವರೇ ಆದ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರು ಅಗ್ರಪಂಕ್ತಿಯಲ್ಲಿದೆ.
ಜೊತೆಗೆ ಸುಶೀಲ್ ಕುಮಾರ್ ಶಿಂಧೆ, ದಿಗ್ವಿಜಯ್ ಸಿಂಗ್, ಕುಲಾರಿ ಸೆಲ್ಜಾ, ಮುಕುಲ್ ವಾಸ್ನಿಕ್, ಸಚಿನ್ ಪೈಲಟ್ ಮತ್ತು ಜ್ಯೋತಿರಾದಿತ್ಯ ಸಿಂದಿಯಾ ಸೇರಿದಂತೆ ಒಟ್ಟು ಏಳು ಜನರ ಹೆಸರು ಪಟ್ಟಿಯಲ್ಲಿದ್ದು, ಪಕ್ಷಾಧ್ಯಕ್ಷರು ಯಾರಾಗಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ.












Click it and Unblock the Notifications