ಮಕ್ಕಳ ಅಂಕಪಟ್ಟಿ ಪೋಷಕರ ಗುರುತಿನ ಚೀಟಿ ಆಗಬಾರದು: ಮೋದಿ
ನವದೆಹಲಿ, ಜನವರಿ 29: ಓದುವ ಮಕ್ಕಳ ಮೇಲೆ ಪೋಷಕರು ಅತಿಯಾದ ಒತ್ತಡ ಹಾಕುವುದು ಸಲ್ಲದು, ಮಕ್ಕಳ ಅಂಕಪಟ್ಟಿ ಪೋಷಕರ ಗುರುತಿನ ಚೀಟಿ ಆಗುವುದು ಬೇಡ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.
ನವದೆಹಲಿಯಲ್ಲಿ 'ಪರೀಕ್ಷಾ ಪೆ ಚರ್ಚಾ' ಕಾರ್ಯಕ್ರಮದಲ್ಲಿ ಅವರು, ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರನ್ನು ಉದ್ದೇಶಿಸಿ ಮಾತನಾಡಿದರು. ವಿದ್ಯಾರ್ಥಿಗಳು ಮತ್ತು ಶಿಕ್ಷಕರೊಂದಿಗೆ ಸಂವಾದ ಸಹ ನಡೆಸಿದರು.
ಪೋಷಕರು ತಮ್ಮ ಈಡೇರಿಸಲಾಗದಿದ್ದ ಕನಸುಗಳನ್ನು ಮಕ್ಕಳ ಮೇಲೆ ಹೇರುವುದು ಬೇಡ ಎಂದು ಕಿವಿ ಮಾತು ಹೇಳಿದರು. ಪೋಷಕರ ಅಧಿಕವಾದ ಒತ್ತಡ ವಿದ್ಯಾರ್ಥಿಗಳನ್ನು ಕ್ರೀಯಾಶೀಲತೆಯಿಂದ ದೂರತಳ್ಳುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ತಂತ್ರಜ್ಞಾನ ವಿದ್ಯಾರ್ಥಿಗಳ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಮೋದಿ, ತಂತ್ರಜ್ಞಾನವು ವಿದ್ಯಾರ್ಥಿಗಳ ಯೋಚನಾಲಹರಿಯನ್ನು ವಿಸ್ತರಿಸಬೇಕೇ ವಿನಃ ಅದನ್ನು ಕುಗ್ಗಿಸಬಾರದು, ತಂತ್ರಜ್ಞಾನವು ವಿದ್ಯಾರ್ಥಿಗಳ ಮೇಲೆ ಧನಾತ್ಮಕ ಪರಿಣಾಮ ಬೀರುವಂತೆ ಮಾಡುವ ಜವಾಬ್ದಾರಿ ಶಿಕ್ಷಕರು ಮತ್ತು ಪೋಷಕರ ಮೇಲೆ ಇದೆ ಎಂದರು.
ಪರೀಕ್ಷಾ ಒತ್ತಡದ ಬಗ್ಗೆ ಮಾತನಾಡಿದ ಅವರು, ಜೀವನದಲ್ಲಿ ಪರೀಕ್ಷೆಗಳಿವೆಯೇ ಹೊರತು ಪರೀಕ್ಷೆಯೇ ಜೀವನವಲ್ಲ. ವಿದ್ಯಾರ್ಥಿಗಳು ಶಿಕ್ಷಣದ ಮೂಲಕ ಜೀವನ ರೂಪಿಸಿಕೊಳ್ಳಬೇಕು ಪರೀಕ್ಷೆಗಳ ಮೂಲಕ ಅಲ್ಲ. ಹಾಗೆಂದು ಪರೀಕ್ಷೆಗಳನ್ನು ಲಘುವಾಗಿ ಪರಿಗಣಿಸುವಂತಿಲ್ಲ ಅವು ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಬಹು ಅವಶ್ಯಕ ಎಂದು ಹೇಳಿದರು.












Click it and Unblock the Notifications