'ಆಪ್ತ' ಸಿಬ್ಬಂದಿಗೆ ಬ್ರೇಕ್: ಸ್ವಜನ ಪಕ್ಷಪಾತಕ್ಕೆ ಪಕ್ಷವಾತ
ನವದೆಹಲಿ, ಮೇ 28: 'ಕಡಿಮೆ ಸರಕಾರ; ಗರಿಷ್ಠ ಆಡಳಿತ' ಮಂತ್ರ ಜಪಿಸುತ್ತಾ ಅಧಿಕಾರಕ್ಕೆ ಬಂದಿರುವ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ತನ್ನ ಮಾತಿಗೆ ಬದ್ಧವಾಗಿದೆ ಎಂದೆನಿಸುತ್ತಿದೆ. ಮೋದಿ ಅವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ.
ಮನೆಯೇ ಮೊದಲ ಪಾಠಶಾಲೆ ಎಂಬಂತೆ ತಮ್ಮ ಮಂತ್ರಿಮಂಡಲಕ್ಕೆ ಹೆಚ್ಚು ಮಂತ್ರಿಗಳನ್ನು ತುಂಬಿಕೊಂಡು ಜಂಬೋ ಸರ್ಕಸ್ ಮಾಡದೆ ಕಡಿಮೆ ಸಚಿವರನ್ನು ನೇಮಕ ಮಾಡಿಕೊಂಡಿದ್ದಾರೆ. ಎಷ್ಟೇ ಸಂಪುಟ ವಿಸ್ತರಣೆ ಎಂದರೂ ಅಬ್ಬಬ್ಬಾ ಅಂದರೆ ಇನ್ನೊಂದು ನಾಲ್ಕೈದು ಮಂತ್ರಿಗಳು ಮಾತ್ರ ಹೊಸದಾಗಿ ಪ್ರಮಾಣ ವಚನ ಸ್ವೀಕರಿಸಬಹುದಷ್ಟೇ. ಹಾಗಾಗಿ ಮಂತ್ರಿ ಮಂಡಲವು ಕೇಂದ್ರದ ಬೊಕ್ಕಸಕ್ಕೆ ಹೆಚ್ಚು ಹೊರೆಯಾಗಲಾರದರು. ಮತ್ತು ಸಾಕಷ್ಟು ಅಳೆದು ಸುರಿದೂ ಸಮರ್ಥರಿಗೇ ಮಣೆ ಹಾಕಿರುವುದರಿಂದ ಗರಿಷ್ಠ ಆಡಳಿತವನ್ನೂ ನಿರೀಕ್ಷಿಸಬಹುದಾಗಿದೆ.
'ಕಡಿಮೆ ಸರಕಾರ; ಗರಿಷ್ಠ ಆಡಳಿತ' ಮಂತ್ರವನ್ನು ಮಂತ್ರಿಗಳ ಸಂಖ್ಯೆ ಸೀಮಿತಗೊಳಿಸುವುದಕ್ಕೇ ಅನ್ವಯಿಸದೆ, ತದನಂತರ ಮಂತ್ರಿಗಳು ತಮ್ಮ ಇಷ್ಟಾನುಸಾರ ಆಪ್ತ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುವುದಕ್ಕೂ ಪ್ರಧಾನಿ ಮೋದಿ ಕಡಿವಾಣ ಹಾಕಿದ್ದಾರೆ.
ಸಚಿವರ ಆಪ್ತ ಸಿಬ್ಬಂದಿಯಾಗಿ ಸಂಬಂಧಿಕರು: ನೋ ಎಂದ ಮೋದಿ (ಸಚಿವರಯಾದಿ ಇಲ್ಲಿದೆ)

ಈ ವಿಷಯದಲ್ಲಿ, ಮೋದಿ ಅವರು ಈಗಾಗಲೇ ತಾವು ಯಶಸ್ಸು ಕಂಡಿರುವ 'ಗುಜರಾತ್ ಮಾದರಿ'ಯನ್ನೇ ಅಳವಡಿಸಿಕೊಂಡಿದ್ದಾರೆ. ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಸಚಿವಾಲಯವು ಸೋಮವಾರವೇ ಹೊರಡಿಸಿರುವ ಆದೇಶದ ಪ್ರಕಾರ ಸಚಿವರುಗಳು ತಮ್ಮ ಆಪ್ತ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುವುದಕ್ಕೆ ನಿರ್ದಿಷ್ಟ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಅದರಂತೆ ಸಾಮಾನ್ಯ ಅವಕಾಶದಡಿ (general poll) ಮಾತ್ರವೇ ಕಾರ್ಯದರ್ಶಿಗಳು ಮತ್ತು ಆಪ್ತ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಬೇಕು.
ಅಂದರೆ ಪ್ರಧಾನಿ ಕಚೇರಿಗೆ ಹೊಂದಿಕೊಂಡಂತಿರುವ ಸಂಪುಟದ ನೇಮಕಾತಿ ಸಮಿತಿಯ ಮೂಲಕ, ವಿಶೇಷ ಆದ್ಯತೆ ನೀಡದೆ, ಸಾಮಾನ್ಯ ಅವಕಾಶದಡಿ ಸಚಿವಾಲಯಗಳಿಗೆ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುವುದು ನೂತನ ಸಚಿವರಿಗೆ ಅನಿವಾರ್ಯವಾಗಲಿದೆ. ಅಷ್ಟರಮಟ್ಟಿಗೆ ನರೇಂದ್ರ ಮೋದಿ ಸ್ವಚ್ಛ ಆಡಳಿತ ನೀಡಲು ಬದ್ಧತೆ ತೋರಿದ್ದಾರೆ. ನಮೋ, ನಮಃ!
Nepotism- ಸ್ವಜನ ಪಕ್ಷಪಾತ, ಬಂಧು ಪಕ್ಷಪಾತಕ್ಕೆ ಪಕ್ಷವಾತ: (ಭವ್ಯ ಭಾರತ ಕಂಡ ಹದಿನಾಲ್ಕು ಪ್ರಧಾನಮಂತ್ರಿಗಳು)
ಇದುವರೆಗೆ ಇಂತಹ ಸಿಬ್ಬಂದಿಯು ಇತರೆ ಸರಕಾರಿ ನೌಕರರಂತೆ ಅರ್ಹತೆ ಇರುತ್ತದೋ ಇಲ್ಲವೋ, ಸಚಿವರ ಆಪ್ತರು ಎಂಬ ಒಂದೇ ಅರ್ಹತೆಯ ಮೇರೆಗೆ ಪುಷ್ಕಳ ಹುದ್ದೆಗೆ ನೇಮಕವಾಗಿಬಿಡುತ್ತಿದ್ದರು. ಹಿಂದೆ ಅನೇಕ ಸಚಿವರು ಮಗ, ಮಗಳು, ದೊಡ್ಡಪ್ಪ-ಚಿಕ್ಕಪ್ಪ ಮಕ್ಕಳು, ಸ್ವಂತ ಸೋದರ/ ಸೋದರಿಯರನ್ನೆ ನೇಮಕ ಮಾಡಿಕೊಂಡುಬಿಡುತ್ತಿದ್ದರು. ಗಮನಿಸಿ, ಇದರ ಹೊರತಾಗಿ ಸಚಿವರ ಶಿಫಾರಸ್ಸು ಮೇರೆಗೆ ಸಚಿವಾಲಯಗಳಲ್ಲಿ ತಮ್ಮ ಅತ್ಯಾಪ್ತರನ್ನು ಆಯಕಟ್ಟಿನ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುವುದು ಬೇರೆ.
ನಿಮಗೆ ಇಲ್ಲೊಂದು ಉದಾಹರಣೆಯನ್ನು ಕೊಡಲೇಬೇಕು. ಅದು ಯಾರಪ್ಪಾ ಅಂದರೆ ಯುಪಿಎ-2ರಲ್ಲಿ ಪವನ್ ಕುಮಾರ್ ಬನ್ಸಾಲ್ ಎಂಬ ರೈಲ್ವೆ ಸಚಿವರು ಇದ್ದರಲ್ಲ. ಅವರು ತಮ್ಮ ಅಳಿಯ ವಿತುಲ್ ಕುಮಾರ್ ಅವರನ್ನು ತಮ್ಮ ವಿಶೇಷ ಕರ್ತವ್ಯಾಧಿಕಾರಿಯನ್ನಾಗಿ (OSD), ಸೊಸೆ ರಾಹುಲ್ ಭಂಡಾರಿ ಅವರನ್ನು ತಮ್ಮ ಆಪ್ತ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿಕೊಂಡಿದ್ದರು.
ಅದೂ ಸಾಲದು ಅಂತ ಮತ್ತೊಬ್ಬ ಸಂಬಂಧಿ ವಿಜಯ್ ಸಿಂಗ್ಲಾರನ್ನು ಕೂಡ ಸಚಿವಾಲಯದಲ್ಲಿ ನೇಮಿಸಿಕೊಂಡಿದ್ದರು. ಕೊನೆಗೆ ಇದೇ ವಿಜಯ್ ಸಿಂಗ್ಲಾ ಲಂಚ ಹೊಡೆದು ಇಲಾಖೆಯಲ್ಲಿ ನೇಮಕಾತಿಗಳನ್ನು ನಡೆಸಿ, ಬಂಧನಕ್ಕೊಳಗಾದರು ಎಂಬುದು ಗಮನಾರ್ಹ.












Click it and Unblock the Notifications