100 ಮಿಲಿಯನ್ ಭಾರತೀಯರಿಗೆ ಪತ್ರ ಬರೆಯಲಿದ್ದಾರೆ ಮೋದಿ! ಯಾಕೆ ಗೊತ್ತಾ?
ನವದೆಹಲಿ, ಅಕ್ಟೋಬರ್ 26: ಪ್ರಧಾನಿ ನರೇಂದ್ರ ಮೋದಿ ಅವರು 100 ದಶಲಕ್ಷದಷ್ಟು ಭಾರತೀಯರಿಗೆ ಪತ್ರ ಬರೆಯಲಿದ್ದಾರೆ. ಯಾರಿಗೆ ಗೊತ್ತು, ಇನ್ನು ಕೆಲವು ದಿನಗಳಲ್ಲಿ ನಿಮಗೂ ಮೋದಿಯವರ ಪತ್ರ ಬಂದೀತು!
ಎನ್ ಡಿಎ ಸರ್ಕಾರ ಪರಿಚಯಿಸಿದ ಆಯುಷ್ಮಾನ್ ಭಾರತ ಎಂಬ ಆರೋಗ್ಯ ವಿಮಾ ಯೋಜನೆಯ ಬಗ್ಗೆ ಇಂದಿಗೂ ಎಷ್ಟೋ ಜನರಿಗೆ ಅರಿವಿಲ್ಲ. ಆದ್ದರಿಂದ ಈ ಯೋಜನೆಯ ಫಲಾನುಭವಿಗಳಿಗೆ ಇದರ ಬಳಕೆ ಮತ್ತು ಅದರಿಂದಾಗುವ ಉಪಯೋಗದ ಬಗ್ಗೆ ಮಾಹಿತಿ ನೀಡುವ ಸಲುವಾಗಿ ಮೋದಿಯವರೇ ಖುದ್ದು ಪತ್ರಬರೆಯಲಿದ್ದಾರೆ.
ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ ಎಂದೂ ಕರೆಯಲ್ಪಡುವ ಈ ಯೋಜನೆ ಮೋದಿ ಕೇರ್ ಎಂದೇ ಪ್ರಸಿದ್ಧಿ ಪಡೆದಿದೆ. ಇದು ಸುಮಾರು 10 ಕೋಟಿ ಭಾರತೀಯ ಬಡ ಕುಟುಂಬಗಳಿಗೆ ವಾರ್ಷಿಕ ತಲಾ 5 ಲಕ್ಷ ರೂ.ವರೆಗಿನ ಆರೋಗ್ಯ ವಿಮೆ ಒದಗಿಸಲಿದೆ.

* ಈ ಯೋಜನೆಯು 10 ಕೋಟಿಗೂ ಅಧಿಕ ಬಡ ಕುಟುಂಬಗಳಿಗೆ ವಾರ್ಷಿಕ 5 ಲಕ್ಷ ರೂ. ವರೆಗೆ ಆರೋಗ್ಯ ವಿಮೆ ಒದಗಿಸುತ್ತಿದೆ.
* ಈ ಯೋಜನೆಗೆ ಕುಟುಂಬದ ಸದಸ್ಯರ ಮಿತಿಯಿಲ್ಲ.
* ಎಸ್ ಇಸಿಸಿ (Socio Economic and Caste Census) ಅಡಿಯಲ್ಲಿ ಬರುವ ಎಲ್ಲರೂ ಈ ಯೋಜನೆಗೆ ಸಹಜವಾಗಿಯೇ ಫಲಾನುಭವಿಗಳಾಗಿರುತ್ತಾರೆ.
* ಕುಟುಂಬದ ಯಾವುದೇ ವ್ಯಕ್ತಿ ಆಸ್ಪತ್ರೆಗೆ ದಾಖಲಾದರೆ ರೋಗಿಯ ಕುಟುಂಬ ಹಣವನ್ನು ಪಾವತಿಸುವ ಅಗತ್ಯವಿಲ್ಲ. ಇದು ನಗದು ರಹಿತ (ಕ್ಯಾಶ್ ಲೆಸ್) ಯೋಜನೆಯಾಗಿದ್ದು, ಸರ್ಕಾರವೇ ನೇರವಾಗಿ ಆಸ್ಪತ್ರೆಗೆ ಹಣ ಪಾವತಿಸಲಿದೆ.
* ಆಸ್ಪತ್ರೆಗೆ ದಾಖಲಾಗುವ ಮೊದಲ(ಸ್ಕ್ಯಾನಿಂಗ್, ಎಕ್ಸ್ ರೇ ಇತ್ಯಾದಿ ತಪಾಸಣೆ) ಮತ್ತು ದಾಖಲಾದ ನಂತರದ ಖರ್ಚು ವೆಚ್ಚಗಳೂ ಇದರಲ್ಲಿ ಸೇರಿವೆ.
* ಸರ್ಕಾರದಿಂದ ನೀಡಲಾದ ಯಾವುದೇ ಗುರುತಿನ ಚೀಟಿಯಿಂದ ಈ ಸೌಲಭ್ಯ ಪಡೆಯುವುದಕ್ಕೆ ಸಾಧ್ಯವಿರುವುದರಿಂದ, ಫಲಾನುಭವಿಗಳು ಪರಿತಪಿಸುವ ಅಗತ್ಯವಿರುವುದಿಲ್ಲ.












Click it and Unblock the Notifications