Winter Session Day 11 Roundup: ಕಲಾಪದ ಪ್ರಮುಖಾಂಶಗಳು
ನವದೆಹಲಿ, ಡಿಸೆಂಬರ್ 13: ಹತ್ತನೇ ತರಗತಿಯ ಸಿಬಿಎಸ್‌ಇ ಪರೀಕ್ಷೆಯಲ್ಲಿ ಸ್ತ್ರೀದ್ವೇಷದ ಪ್ರಶ್ನೆಗಳನ್ನು ಉಲ್ಲೇಖ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ದೇಶದ ಶಿಕ್ಷಣ ಮತ್ತು ಪರೀಕ್ಷೆಗಳ ಗುಣಮಟ್ಟವನ್ನು ಈ ಪ್ರಶ್ನೆಗಳು ಬಿಂಬಿಸುತ್ತವೆ ಎಂದು ಲೋಕಸಭೆಯಲ್ಲಿ ಹೇಳಿದ್ದಾರೆ.
ಲೋಕಸಭೆಯ ಶೂನ್ಯವೇಳೆಯಲ್ಲಿ ಈ ಬಗ್ಗೆ ಪ್ರಶ್ನೆ ಮಾಡಿದ ಅವರು, ನಿಸ್ಸಂಶಯವಾಗಿ ಇದು ಸ್ತ್ರೀದ್ವೇಷ. ಸಂಬಂಧಿತ ವಿಷಯವನ್ನು ಪಠ್ಯದಿಂದ ತಕ್ಷಣವೇ ಹಿಂಪಡೆಯುವುದು ಮಾತ್ರವಲ್ಲದೇ ಕೇಂದ್ರ ಸರ್ಕಾರ ಈ ಬಗ್ಗೆ ಕ್ಷಮೆಯಾಚಿಸಬೇಕು ಮತ್ತು ಘಟನೆಯ ಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಿದರು.
ಮಹಿಳೆಯರಿಗೆ ನೀಡುವ ವಿಮೋಚನೆ ಮಕ್ಕಳ ಮೇಲಿನ ಪಾಲಕರ ಅಧಿಕಾರ ನಾಶ ಮಾಡುತ್ತದೆ ಎಂಬುದನ್ನು ಜನರು ಗ್ರಹಿಸಿಕೊಳ್ಳಲು ಹಿಂದೆ ಬಿದ್ದಿದ್ದರು. ಪುರುಷನನ್ನು ಅವನ ಸ್ಥಾನದಿಂದ ಕೆಳಗಿಳಿಸುವಲ್ಲಿ ಮಹಿಳೆಯರು ತಮ್ಮನ್ನು ತಾವು ಕಳೆದುಕೊಂಡರು. ಆದರೆ, ಮಹಿಳೆಯರು ತಮ್ಮ ಪತಿಯ ಮಾರ್ಗವನ್ನು ಅನುಸರಿಸುವ ಮೂಲಕ ಮಾತ್ರ ವಿಧೇಯತೆ ಗಳಿಸಬಹುದು ಎಂದು ಪ್ರಶ್ನೆಪತ್ರಿಕೆಯಲ್ಲಿ ಉಲ್ಲೇಖಿಸಲಾಗಿದೆ. ಈ ವಿಷಯವನ್ನು ಕಾಂಗ್ರೆಸ್ ನಾಯಕಿ ಸೋನಿಯಾ ಸದನದಲ್ಲಿ ಒತ್ತಿ ಹೇಳಿದರು.

ಇದೇ ವೇಳೆ ಕಾಂಗ್ರೆಸ್ ಐಯುಎಂಎಲ್, ಎನ್‌ಸಿಪಿ ಮತ್ತು ನ್ಯಾಷನಲ್ ಕಾನ್ಫರೆನ್ಸ್‌ನ ಸಂಸದರು ಈ ವಿಷಯದ ಬಗ್ಗೆ ಸರ್ಕಾರದಿಂದ ಸ್ಪಷ್ಟೀಕರಣಕ್ಕೆ ಒತ್ತಾಯಿಸಿ ಸಭಾತ್ಯಾಗ ಮಾಡಿದರು. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಶಿಕ್ಷಣತಜ್ಞರ ಕಳವಳಗಳಿಗೆ ನಾನು ನನ್ನ ಧ್ವನಿಯನ್ನು ಸೇರಿಸುತ್ತೇನೆ ಮತ್ತು ಸಿಬಿಎಸ್ಸಿ ನಡೆಸುವ ಪ್ರಮುಖ ಪರೀಕ್ಷೆಯಲ್ಲಿ ಸ್ತ್ರೀದ್ವೇಷದ ವಿಷಯಗಳ ಬಗ್ಗೆ ನಾನು ಬಲವಾದ ಆಕ್ಷೇಪಣೆಗಳನ್ನು ಎತ್ತುತ್ತೇನೆ ಎಂದು ಸೋನಿಯಾ ಗಾಂಧಿ ಹರಿಹಾಯ್ದರು.
ರಾಜ್ಯಸಭೆ ಕಲಾಪದಿಂದ ಹೊರನಡೆದ ಕಾಂಗ್ರೆಸ್: ಜತೆಗೆ 12 ರಾಜ್ಯಸಭಾ ಸಂಸದರ ಅಮಾನತು ಹಿಂಪಡೆಯುವಂತೆ ಇಂದು ಕೂಡ ಪ್ರತಿ ಭಟನೆ ಮುಂದುವರೆಯಿತು. ಸಂಸದರ ಅಮಾನತು ಆದೇಶವನ್ನು ಹಿಂಪಡೆಯದ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್ ರಾಜ್ಯಸಭೆ ಕಲಾಪದಿಂದ ಸೋಮವಾರ ಸಭಾತ್ಯಾಗ ಮಾಡಿತು.
ಇದಕ್ಕೂ ಮುನ್ನ ವಿರೋಧಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, 12 ಸಂಸದರ ಅಮಾನತು ಆದೇಶ ಹಿಂಪಡೆಯುವುದನ್ನು ಪರಿಗಣಿಸದೆ ಸರ್ಕಾರವು ವಿರೋಧ ಪಕ್ಷಗಳನ್ನು ಸದನಕ್ಕೆ ಅಡ್ಡಿಪಡಿಸಲು ಪ್ರೇರೇಪಿಸುತ್ತಿದೆ ಎಂದು ಆರೋಪಿಸಿದರು.
''ನಾವು ಏನು ಮಾಡಬೇಕು, ಮಾಡಬಾರದು ಎಂಬುದನ್ನು ಸರ್ಕಾರವು ನಿರ್ದೇಶಿಸಲು ಸಾಧ್ಯವಿಲ್ಲ, ನೀವು ಸದನದ ಉಸ್ತುವಾರಿಯಾಗಿರುವುದರಿಂದ 12 ಸದಸ್ಯರ ಅಮಾನತು ಆದೇಶವನ್ನು ರದ್ದುಗೊಳಿಸಬೇಕೆಂದು ನಾವು ಮನವಿ ಮಾಡುತ್ತೇವೆ. ಸದನಕ್ಕೆ ಅಡ್ಡಿಪಡಿಸಲು ಪ್ರತಿಪಕ್ಷಗಳನ್ನು ಪ್ರೇರೇಪಿಸುವುದೇ ಸರ್ಕಾರದ ಉದ್ದೇಶವಾಗಿದೆ, ಹಾಗಾಗಿಯೇ ನಾವು ಸಭಾತ್ಯಾಗ ಮಾಡಲು ನಿರ್ಧರಿಸಿದ್ದೇವೆ'' ಎಂದರು.
ಇದಕ್ಕೂ ಮುನ್ನ ಆನಂದ್ ಶರ್ಮಾ ಮಾತನಾಡಿ, ''ಸದನದ ನಾಯಕರು ಇಲ್ಲೇ ಇದ್ದಾರೆ, ಅಮಾನತು ಆದೇಶವನ್ನು ರದ್ದುಪಡಿಸಬೇಕೆಂದು ನಾವು ಮನವಿ ಮಾಡುತ್ತೇವೆ'' ಎಂದು ಹೇಳಿದರು.
ಅಕ್ರಮ ಸಾಗಾಣಿಕೆಗೆ ಹಣಕಾಸು ಒದಗಿಸುವವರ ಶಿಕ್ಷೆಗೆ ಸಂಬಂಧಿಸಿದ ಪ್ರಮುಖ ನಿಬಂಧನೆಯನ್ನು ನಿಷ್ಕ್ರಿಯಗೊಳಿಸಿರುವ ಅಸ್ತಿತ್ವದಲ್ಲಿರುವ ಮಾದಕ ವಸ್ತುಗಳು ಹಾಗೂ ಅಮಲು ಪದಾರ್ಥಗಳ ನಿಯಂತ್ರಣ ಕಾಯ್ದೆಯಲ್ಲಿನ ಕರಡು ದೋಷವನ್ನು ಸರಿಪಡಿಸಲು ಕೇಂದ್ರ ಸರ್ಕಾರ ಸೋಮವಾರ ಮಂಡಿಸಿದ ಮಸೂದೆಗೆ ವಿಪಕ್ಷ ಆಕ್ಷೇಪ ವ್ಯಕ್ತಪಡಿಸಿದೆ. ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಬಿಜು ಜನತಾ ದಳ ಮತ್ತು ರೆವಲ್ಯೂಷನರಿ ಸೋಷ್ಯಲಿಸ್ಟ್ ಪಕ್ಷ ಸೇರಿದಂತೆ ವಿಪಕ್ಷದ ಸಂಸದರು ಮಸೂದೆಗೆ ತಿದ್ದುಪಡಿಗಳನ್ನು ಹಿಂತೆಗೆದುಕೊಳ್ಳಲು ಮತ್ತು ಪುನರ್‌ರಚಿಸಲು ಸರ್ಕಾರವನ್ನು ಕೇಳಿದರು.
ಇದು ನಾಗರಿಕರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ವಿಪಕ್ಷದ ಸಂಸದರು ಹೇಳಿದ್ದಾರೆ. ಮಸೂದೆಯು ಸರ್ಕಾರದ "ಕೆಟ್ಟ ಕರಡು ರಚನೆಯ ಉದಾಹರಣೆ" , ಇದು ಪ್ರತಿಪಕ್ಷಗಳ ಆಕ್ಷೇಪಣೆಗಳಿಗೆ "ಪ್ರತಿಕ್ರಿಯಾತ್ಮಕವಾಗಿಲ್ಲ ಅಥವಾ ಸಂವೇದನಾಶೀಲವಾಗಿಲ್ಲ" ಎಂದು ಅವರು ಆರೋಪಿಸಿದರು.
ಸೋಮವಾರ ಹಣಕಾಸು ಖಾತೆಯ ರಾಜ್ಯ ಸಚಿವ ಭಾಗವತ್ ಕರದ್ ಅವರು ಲೋಕಸಭೆಯಲ್ಲಿ ಮಾದಕ ವಸ್ತುಗಳು ಹಾಗೂ ಅಮಲು ಪದಾರ್ಥಗಳ ನಿಯಂತ್ರಣ (ತಿದ್ದುಪಡಿ) ಮಸೂದೆ, 2021 ಅನ್ನು ಮಂಡಿಸಿದರು. ಇದು ಈ ವರ್ಷ ಸೆಪ್ಟೆಂಬರ್ 30 ರಂದು ಘೋಷಿಸಲಾದ ಸುಗ್ರೀವಾಜ್ಞೆಯನ್ನು ಬದಲಿಸಲು ಪ್ರಯತ್ನಿಸುತ್ತದೆ.
ಈ ಮಸೂದೆ ಕೆಲವು ಅಕ್ರಮ ಚಟುವಟಿಕೆಗಳಿಗೆ ಹಣಕಾಸು ಒದಗಿಸುವುದು - ಉದಾಹರಣೆಗೆ ಗಾಂಜಾವನ್ನು ಬೆಳೆಸುವುದು, ಮಾದಕ ದ್ರವ್ಯಗಳನ್ನು ತಯಾರಿಸುವುದು ಮತ್ತು ಆ ಕ್ರಿಯೆಗಳಲ್ಲಿ ತೊಡಗಿರುವ ವ್ಯಕ್ತಿಗಳಿಗೆ ಆಶ್ರಯ ನೀಡುವುದು ಅಪರಾಧ ಎಂದು ಹೇಳುತ್ತದೆ. ತಪ್ಪಿತಸ್ಥರೆಂದು ಸಾಬೀತಾದ ವ್ಯಕ್ತಿಗಳಿಗೆ ಕನಿಷ್ಠ ಹತ್ತು ವರ್ಷಗಳ ಕಠಿಣ ಜೈಲು ಶಿಕ್ಷೆ (20 ವರ್ಷಗಳವರೆಗೆ ವಿಸ್ತರಿಸಬಹುದಾದ) ಮತ್ತು ಕನಿಷ್ಠ 1 ಲಕ್ಷ ರೂ. ದಂಡ ವಿಧಿಸಲಾಗುತ್ತದೆ.
41,177 ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಹುದ್ದೆ ಖಾಲಿ ಇವೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.












Click it and Unblock the Notifications