ಸುಗ್ರೀವಾಜ್ಞೆ ವಿವಾದ : ಪ್ರಧಾನಿ-ರಾಹುಲ್ ಭೇಟಿ
ನವದೆಹಲಿ, ಅ.2 : ಸುಗ್ರೀವಾಜ್ಞೆ ವಿವಾದ ಅಂತಿಮ ಹಂತಕ್ಕೆ ತಲುಪಿದೆ. ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂದಿ ಪರಸ್ಪರ ಭೇಟಿ ಮಾಡಿ ಈ ಕುರಿತು ಚರ್ಚೆ ನಡೆಸಿದ್ದಾರೆ. ಸುಗ್ರೀವಾಜ್ಞೆ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲು ಕಾಂಗ್ರೆಸ್ ಕೋರ್ ಕಮಿಟಿ ಸಭೆ ನಡೆಯುತ್ತಿದೆ.
ಬುಧವಾರ ಬೆಳಗ್ಗೆ ದೆಹಲಿಯ ರೇಸ್ ಕೋರ್ಸ್ ರಸ್ತೆಯಲ್ಲಿನ ಪ್ರಧಾನಿ ನಿವಾಸಕ್ಕೆ ತೆರಳಿದ ರಾಹುಲ್ ಗಾಂಧಿ, ಸುಮಾರು ಇಪ್ಪತ್ತು ನಿಮಿಷಗಳ ಕಾಲ ಚರ್ಚೆ ನಡೆಸಿದರು. ಈ ವೇಳೆ ಪ್ರಧಾನಿ ಮನಮೋಹನ್ ಸಿಂಗ್, ಕಳಂಕಿತರ ರಕ್ಷಣೆಗೆ ಸುಗ್ರೀವಾಜ್ಞೆ ಜಾರಿಗೆ ತಂದ ಕ್ರಮದ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚಿಸುವುದಾಗಿ ಹೇಳಿದ್ದಾರೆ.

ಪ್ರಧಾನಿ ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ಎರಡು ಅಥವಾ ಅದಕ್ಕಿಂತ ಹೆಚ್ಚು ವರ್ಷ ಕಾಲ ಕ್ರಿಮಿನಲ್ ಪ್ರಕರಣಗಳಲ್ಲಿ ಜೈಲು ಶಿಕ್ಷೆಗೆ ಒಳಗಾದ ಸಂಸದ, ಶಾಸಕರ ಶಾಸನ ಸಭಾ ಸದಸ್ಯತ್ವವನ್ನು ಅನರ್ಹಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.
ಸರ್ಕಾರ ಸುಗ್ರೀವಾಜ್ಞೆ ಜಾರಿಗೆ ತರುವ ಮೂಲಕ ಕಳಂಕಿತರನ್ನು ರಕ್ಷಿಸುತ್ತಿದೆ ಎಂಬ ಸಂದೇಶ ಜನರಿಗೆ ರವಾನೆಯಾಗಬಾರದು. ಆದ್ದರಿಂದ ಸುಗ್ರೀವಾಜ್ಞೆಯನ್ನು ವಿರೋಧಿಸುತ್ತಿರುವುದಾಗಿ ಹೇಳಿದರು. (ಸುಗ್ರೀವಾಜ್ಞೆ ಬಗ್ಗೆ ಕಿಡಿಕಾರಿದ ರಾಹುಲ್ ಗಾಂಧಿ)
ಪ್ರಧಾನಿ ಅವರಿಗೆ ನಾನು ಅವಮಾನ ಮಾಡಿಲ್ಲ. ಜನರ ಭಾವನೆಗಳನ್ನು ಅವರಿಗೆ ತಿಳಿಸಿದ್ದೇನೆ. ಕೇಂದ್ರ ಸರ್ಕಾರ ಸುಗ್ರೀವಾಜ್ಞೆಯನ್ನು ವಾಪಸ್ ಪಡೆಯಬೇಕು ಎಂದು ಮನವಿ ಮಾಡಿದ್ದೇನೆ ಎಂದು ರಾಹುಲ್ ಗಾಂಧಿ ತಿಳಿಸಿದರು.
ಪ್ರಧಾನಿ ನಿವಾಸದಲ್ಲಿ ಸುಗ್ರೀವಾಜ್ಞೆ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚಿಸಲು ಪಕ್ಷದ ಕೋರ್ ಕಮಿಟಿ ಸಭೆ ಆರಂಭವಾಗಿದ್ದು, ನಂತರ ಪ್ರಧಾನಿ ಮನಮೋಹನ್ ಸಿಂಗ್, ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರನ್ನು ಭೇಟಿ ಮಾಡಲಿದ್ದಾರೆ.












Click it and Unblock the Notifications