ಲೋಕಸಭೆಯಲ್ಲೂ ಆಪರೇಷನ್ ಕಮಲ ಆಡಿಯೋ ಪ್ರತಿಧ್ವನಿ, ಕಲಾಪ ಬಲಿ
ಬೆಂಗಳೂರು, ಫೆಬ್ರವರಿ 11: ಆಪರೇಷನ್ ಕಮಲದ ಆಡಿಯೋ ಬಗ್ಗೆ ವಿಧಾನಸಭೆಯಲ್ಲಿ ಸುಧೀರ್ಘ ಮತ್ತು ಶಾಂತಿಯುತ ಚರ್ಚೆ ನಡೆದಿದೆ ಆದರೆ ಲೋಕಸಭೆಯಲ್ಲಿ ಇದು ಗದ್ದಲಕ್ಕೆ ಕಾರಣವಾಗಿದೆ.
ಬಿಜೆಪಿಯು ಆಪರೇಷನ್ ಕಮಲ ಮಾಡಲು ಯತ್ನಿಸಿದೆ. ಭಾರಿ ಮೊತ್ತದ ಹಣದ ಆಮೀಷ ಒಡ್ಡುತ್ತಿದೆ ಎಂದು ಸಂಸತ್ ಪ್ರಾರಂಭವಾಗುತ್ತಿದ್ದಂತೆ ಸಂಸತ್‌ನಲ್ಲಿ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಮತ್ತು ಜೆಡಿಎಸ್ ವರಿಷ್ಠ ದೇವೇಗೌಡ ಅವರು ಪ್ರಶ್ನೆ ಎತ್ತಿದ್ದರು.
ಖರ್ಗೆ ಹಾಗೂ ದೇವೇಗೌಡ ಅವರ ಆರೋಪಕ್ಕೆ ಕಾಂಗ್ರೆಸ್ ಸದಸ್ಯರು ಸೇರಿ ವಿರೋಧ ಪಕ್ಷದ ಸದಸ್ಯರು ದನಿಗೂಡಿಸಿದರು. ಈ ಆರೋಪದಿಂದಾಗಿ ಸಂಸತ್‌ನಲ್ಲಿ ಗದ್ದಲ ಏರ್ಪಟ್ಟಿತು.

ಖರ್ಗೆ ಹಾಗೂ ದೇವೇಗೌಡ ಅವರ ಆರೋಪಕ್ಕೆ ಉತ್ತರಿಸಿದ ಕೇಂದ್ರ ಬಿಜೆಪಿ ಸಚಿವ ಸದಾನಂದ ಗೌಡ ಅವರು, ರೆಸಾರ್ಟ್ ರಾಜಕೀಯಕ್ಕೆ ಕಾಂಗ್ರೆಸ್ ಕೋಟ್ಯಂತರ ಹಣ ಖರ್ಚು ಮಾಡಿದೆ ಅದರ ಬಗ್ಗೆ ತನಿಖೆ ಆಗಲಿ ಎಂದರು. ಆಡಿಯೋ ಕ್ಲಿಪ್ ಬಗ್ಗೆ ಮಾತನಾಡಿದ ಅವರು, ಆಡಿಯೋ ಅಸಲಿಯೋ ನಕಲಿಯೋ ಎಂದು ಪರಿಶೀಲನೆ ಆಗಬೇಕಿದೆ ಎಂದು ಹೇಳಿದರು.

ಲೋಕಸಭೆಯಲ್ಲಿ ಗದ್ದಲ ಹೆಚ್ಚಾದ ಕಾರಣ ಕಲಾಪ ಮುಂದೂಡಲಾಯಿತು. ರಾಜ್ಯಸಭೆಯಲ್ಲಿಯೂ ಸಹ ಕಲಾಪ ಆರಂಭವಾದ ಕೆಲವೇ ನಿಮಿಷಗಳಲ್ಲಿ ಗದ್ದಲ ಹೆಚ್ಚಾದ ಕಾರಣ ಕಲಾಪ ಮುಂದೂಡಲಾಯಿತು. ಕಲಾಪವು ಮಂಗಳವಾರ ಬೆಳಿಗ್ಗೆ ಸೇರಲಿದೆ.












Click it and Unblock the Notifications