ನಾನ್ ಗೆಜೆಟೆಡ್ ಸರ್ಕಾರಿ ಹುದ್ದೆ ಅಕಾಂಕ್ಷಿಗಳಿಗೆ ಶುಭ ಸುದ್ದಿ!
ನವದೆಹಲಿ, ಅ.26: ನಾನ್ ಗೆಜೆಟೆಡ್ ಸರ್ಕಾರಿ ಹುದ್ದೆ ಅಕಾಂಕ್ಷಿಗಳಿಗೆ ಕೇಂದ್ರ ಸರ್ಕಾರ ಶುಭ ಸುದ್ದಿ ನೀಡಿದೆ. ಪ್ರಧಾನಿ ಮೋದಿ ಅವರು ಸ್ವಾತಂತ್ರೋತ್ಸವ ದಿನಾಚರಣೆಯ ಭಾಷಣದಲ್ಲಿ ನೀಡಿದ್ದ ಭರವಸೆಯನ್ನು ಕೊನೆಗೂ ಜಾರಿಗೊಳಿಸುತ್ತಿದ್ದಾರೆ. ಮುಂಬರುವ ಜನವರಿ 1 ರಿಂದ ಕೇಂದ್ರ ಸರ್ಕಾರದ ಕೆಳಗಿನ ಹಂತದ ಹುದ್ದೆಗಳಾದ ಗ್ರೂಪ್ ಡಿ, ಸಿ ಮತ್ತು ಬಿ ಹುದ್ದೆಗಳಿಗೆ ಸಂದರ್ಶನಗಳು ನಡೆಯುವುದಿಲ್ಲ.
ಮೋದಿ ಅವರು ತಮ್ಮ 13ನೇ 'ಮನ್ ಕಿ ಬಾತ್' ರೇಡಿಯೋ ಭಾಷಣದಲ್ಲಿ ಈ ವಿಷಯವನ್ನು ಪ್ರಕಟಿಸಿದರು. ಕೆಳಹಂತದ ಹುದ್ದೆಗಳಿಗೆ ಸಂಬಂಧಿಸಿದಂತೆ ನೇಮಕಾತಿಗೆ ಸಂದರ್ಶನ ರದ್ದು ಪಡಿಸುವ ಪ್ರಕ್ರಿಯೆಯನ್ನು ಸರ್ಕಾರ ಪೂರ್ಣಗೊಳಿಸಿದೆ. 2016ರ ಜನವರಿ 1ರಿಂದ ಜಾರಿಗೆ ಬರಲಿದೆ ಎಂದರು.

ಭ್ರಷ್ಟಾಚಾರ ತಡೆಗೆ ಕ್ರಮ: ಕೆಳಹಂತದ ಹುದ್ದೆಗಳಿಗೆ ಸಂದರ್ಶನ ಪ್ರಕ್ರಿಯೆಯಲ್ಲಿ ಸಾಕಷ್ಟು ಅವ್ಯವಹಾರ ನಡೆಯುವ ಬಗ್ಗೆ ದೂರುಗಳು ಕೇಳಿ ಬಂದಿತ್ತು. ದಲ್ಲಾಳಿಗಳನ್ನು ದೂರವಿರಿಸಲು ಈ ಪ್ರಕ್ರಿಯೆಯನ್ನೇ ತೆಗೆದು ಹಾಕುವಂತೆ ಮನವಿ ಕೇಳಿ ಬಂದಿತ್ತು. ಉದ್ಯೋಗದ ಹೆಸರಿನಲ್ಲಿ ಬಡವರನ್ನು ಸುಲಿಗೆ ಮಾಡುವ ಕ್ರಮಕ್ಕೆ ಕಡಿವಾಣ ಹಾಕಲು ಸರ್ಕಾರ ನಿರ್ಧರಿಸಿದ್ದು, ಸಂದರ್ಶನ ಪ್ರಕ್ರಿಯೆಯನ್ನು ತೆಗೆದು ಹಾಕಲಾಗಿದೆ ಎಂದರು.
ಜ್ಯೂನಿಯರ್ ಲೆವಲ್ ಹುದ್ದೆಗಳಿಗೆ ವೈಯಕ್ತಿಕ ಹಾಗೂ ಕೌಶಲ್ಯ ಸಂದರ್ಶನದ ಅಗತ್ಯವಿಲ್ಲ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ ಎಂದರು.












Click it and Unblock the Notifications