ನಿರ್ಭಯ ಪ್ರಕರಣ; ಸಾವು ತಪ್ಪಿಸಿಕೊಳ್ಳಲು ಅಪರಾಧಿಗಳ ಕೊನೆ ಪ್ರಯತ್ನ
ನವದೆಹಲಿ, ಮಾರ್ಚ್ 16 : ನಿರ್ಭಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಅಪರಾಧಿಗಳು ಅಂತರಾಷ್ಟ್ರೀಯ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಮಾರ್ಚ್ 20ರಂದು ಬೆಳಗ್ಗೆ 5.30 ಎಲ್ಲಾ ಅಪರಾಧಿಗಳಿಗೆ ಗಲ್ಲು ಶಿಕ್ಷೆ ಜಾರಿಗೊಳಿಸಲು ಡೆತ್ ವಾರೆಂಟ್ ಜಾರಿಯಾಗಿದೆ.
ಸೋಮವಾರ ವಕೀಲ ಎಂ. ಎಲ್. ಶರ್ಮಾ ಮೂಲಕ ಎಲ್ಲರೂ ಅಂತರಾಷ್ಟ್ರೀಯ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಗಲ್ಲು ಶಿಕ್ಷೆ ಜಾರಿಗೆ ಹೊರಡಿಸಿರುವ ಡೆತ್ ವಾರೆಂಟ್‌ಗೆ ತಡೆ ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.
ಪ್ರಕರಣದ ಅಪರಾಧಿ ಮುಕೇಶ್ ಸಿಂಗ್ ಹೊಸ ಕ್ಯುರೆಟೀವ್ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕು ಎಂದು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಸೋಮವಾರ ವಜಾಗೊಳಿಸಿತ್ತು. ಇದರಿಂದಾಗಿ ಅಪರಾಧಿಗಳ ಮುಂದಿದ್ದ ಎಲ್ಲಾ ಹಾದಿಗಳು ಮುಚ್ಚಿ ಹೋಗಿದ್ದವು.
ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಎಲ್ಲಾ ನಾಲ್ವರು ಅಪರಾಧಿಗಳ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ವಜಾಗೊಳಿಸಿದ್ದಾರೆ. ದೆಹಲಿ ನ್ಯಾಯಾಲಯ ಎಲ್ಲಾ ಅಪರಾಧಿಗಳನ್ನು ಮಾರ್ಚ್ 20ರಂದು ಗಲ್ಲಿಗೇರಿಸಲು ಡೆತ್ ವಾರೆಂಟ್ ಜಾರಿಗೊಳಿಸಿದೆ.

ನಾಲ್ವರು ಅಪರಾಧಿಗಳಿಗೆ ಗಲ್ಲು
ನಿರ್ಭಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಒಟ್ಟು 6 ಅಪರಾಧಿಗಳು ಇದ್ದರು. ಬಾಲಾಪರಾಧಿ ಎಂಬ ಕಾರಣಕ್ಕೆ ಒಬ್ಬನ ಬಿಡುಗಡೆಯಾಗಿದೆ. ಒಬ್ಬ ಜೈಲಿನಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದ. ಈಗ ಉಳಿದಿರುವ ಅಕ್ಷಯ್ ಠಾಕೂರ್ (31), ಪವನ್ ಗುಪ್ತ (25), ವಿನಯ್ ಶರ್ಮಾ (26) ಮತ್ತು ಮುಕೇಶ್ ಸಿಂಗ್ (32)ಗೆ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ.

ಷಡ್ಯಂತ್ರದ ಬಗ್ಗೆ ತನಿಖೆ ಯಾಗಲಿ
ಅಂತರಾಷ್ಟ್ರೀಯ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವ ನಾಲ್ವರು ಮಾರ್ಚ್ 20ರಂದು ಜಾರಿಯಾಗಿರುವ ಡೆತ್ ವಾರೆಂಟ್‌ಗೆ ತಡೆ ನೀಡಬೇಕು. ತಮ್ಮ ವಿರುದ್ಧ ಆಗಿರುವ ಷಡ್ಯಂತ್ರದ ಬಗ್ಗೆ ಸಿಬಿಐ ತನಿಖೆಯಾಗಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ. ದೆಹಲಿ ಮತ್ತು ಕೇಂದ್ರ ಸರ್ಕಾರದಿಂದ ನಮಗೆ ಮೋಸವಾಗಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

4ನೇ ಡೆತ್ ವಾರೆಂಟ್ ಜಾರಿಯಾಗಿದೆ
ನಿರ್ಭಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಅಪರಾಧಿಗಳು ಗಲ್ಲು ತಪ್ಪಿಸಿಕೊಳ್ಳಲು ಅಂತರಾಷ್ಟ್ರೀಯ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಮಾರ್ಚ್ 5ರಂದು ಪಟಿಯಾಲಾ ಹೌಸ್ ಕೋರ್ಟ್ ಎಲ್ಲರನ್ನೂ ಮಾರ್ಚ್ 20ರ ಮುಂಜಾನೆ 5.30ಕ್ಕೆ ಗಲ್ಲಿಗೇರಿಸಲು ಡೆತ್ ವಾರೆಂಟ್ ನೀಡಿದೆ. ಪ್ರಕರಣದಲ್ಲಿ ಜಾರಿಯಾಗುತ್ತಿರುವ 4ನೇ ಡೆತ್ ವಾರೆಂಟ್ ಇದು.

ಕ್ಷಮಾದಾನ ಅರ್ಜಿ ವಜಾಗೊಂಡಿದೆ
ಅಪರಾಧಿಗಳ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿಗಳು ತಿರಸ್ಕಾರ ಮಾಡಿದ ಬಳಿಕ ಗಲ್ಲಿಗೇರಿಸುವ 14 ದಿನ ಮೊದಲು ನೋಟಿಸ್ ನೀಡಬೇಕು. ಈಗ ಎಲ್ಲಾ ಅಪರಾಧಿಗಳ ಕ್ಷಮಾದಾನ ಅರ್ಜಿ ವಜಾಗೊಂಡಿದೆ. ಮಾರ್ಚ್ 20ರಂದು ಗಲ್ಲು ಶಿಕ್ಷೆ ಜಾರಿಯಾಗಲಿದೆಯೇ? ಕಾದು ನೋಡಬೇಕು.












Click it and Unblock the Notifications