ನಿರ್ಭಯ ಪ್ರಕರಣ; ಕ್ಷಮಾದಾನ ಅರ್ಜಿ ಸಲ್ಲಿಸಿದ ಅಪರಾಧಿ ಮುಕೇಶ್
ನವದೆಹಲಿ, ಜನವರಿ 14 : ನಿರ್ಭಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಅಪರಾಧಿ ಮುಕೇಶ್ ಸಿಂಗ್ ಕ್ಷಮಾದಾನ ಅರ್ಜಿ ಸಲ್ಲಿಸಿದ್ದಾನೆ. ಗಲ್ಲು ಶಿಕ್ಷೆಗೆ ಗುರಿಯಾಗಿರುವ ಅಪರಾಧಿ ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿ ಮಂಗಳವಾರ ವಜಾಗೊಂಡಿತ್ತು.
ಮಂಗಳವಾರ ರಾತ್ರಿ ಮುಕೇಶ್ ಸಿಂಗ್ ರಾಷ್ಟ್ರಪತಿ ರಾಮನಾಥ್ ಕೋವಿಂದ್‌ಗೆ ಕ್ಷಮಾದಾನ ಅರ್ಜಿಯನ್ನು ಸಲ್ಲಿಸಿದ್ದಾನೆ. ನಮ್ಮ ದೇಶದ ಸಂವಿಧಾನದಲ್ಲಿ ಕ್ಷಮಾದಾನ ಅರ್ಜಿ ಒಬ್ಬ ಆರೋಪಿಗೆ ಇರುವ ಕಡೆಯ ಅವಕಾಶವಾಗಿದೆ.

ಮುಕೇಶ್ ಸಿಂಗ್ ದೆಹಲಿಯ ತಿಹಾರ್ ಜೈಲಿನಲ್ಲಿದ್ದಾನೆ. ನಿರ್ಭಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಗಲ್ಲು ಶಿಕ್ಷೆ ವಿಧಿಸಿರುವ ತೀರ್ಪನ್ನು ಪ್ರಶ್ನಿಸಿ ಆತ ಸುಪ್ರೀಂಕೋರ್ಟ್‌ಗೆ ಕ್ಯುರೇಟಿವ್ ಅರ್ಜಿ ಸಲ್ಲಿಸಿದ್ದ. ಮಂಗಳವಾರ ನ್ಯಾಯಾಲಯ ವಜಾಗೊಂಡಿತ್ತು.
ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಅಪರಾಧಿಗೆ ಕ್ಯುರೇಟಿವ್ ಅರ್ಜಿ ಕೊನೆಯ ಅವಕಾಶವಾಗಿದೆ. ಈಗ ಅರ್ಜಿ ತಿರಸ್ಕಾರವಾಗಿದ್ದು, ಅಂತಿಮವಾಗಿ ರಾಷ್ಟ್ರಪತಿಗಳಿಗೆ ಕ್ಷಮಾದಾನ ಅರ್ಜಿಯನ್ನು ಸಲ್ಲಿಸಲಾಗಿದೆ. ಅರ್ಜಿ ತಿರಸ್ಕಾರವಾದರೆ ಗಲ್ಲು ಶಿಕ್ಷೆ ಖಾಯಂ ಆಗಲಿದೆ.
ನಿರ್ಭಯ ಪ್ರಕರಣದಲ್ಲಿ ಮುಕೇಶ್ ಸಿಂಗ್ (32), ಪವನ್ ಗುಪ್ತಾ (25), ವಿನಯ್ ಕುಮಾರ್ ಶರ್ಮಾ (26), ಅಕ್ಷಯ್ ಕುಮಾರ್ ಸಿಂಗ್ (31) ಅಪರಾಧಿಗಳು. ಎಲ್ಲಾ ಅಪರಾಧಿಗಳನ್ನು ಜನವರಿ 22ರ ಬೆಳಗ್ಗೆ 7ಗಂಟೆಗೆ ಗಲ್ಲಿಗೇರಿಸಲು ಪಟಿಯಾಲಾ ಹೌಸ್ ಕೋರ್ಟ್ ಡೆತ್ ವಾರೆಂಟ್ ಜಾರಿಗೊಳಿಸಿದೆ.
2017ರಲ್ಲಿ ಸುಪ್ರೀಂಕೋರ್ಟ್ ನಿರ್ಭಯ ಪ್ರಕರಣದ ಎಲ್ಲಾ ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆ ನೀಡಿದ್ದ ದೆಹಲಿ ಹೈಕೋರ್ಟ್ ತೀರ್ಪನ್ನು ಎತ್ತಿ ಹಿಡಿದಿತ್ತು. ಪ್ರಕರಣದ ಒಬ್ಬ ಅಪರಾಧಿ ರಾಮ್ ಸಿಂಗ್ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ. ಮತ್ತೊಬ್ಬ ಬಾಲಾಪರಾಧಿ ಆದ ಕಾರಣ ಬಿಡುಗಡೆಗೊಂಡಿದ್ದು, ನಾಲ್ವರು ಗಲ್ಲು ಶಿಕ್ಷೆಗೆ ಗುರಿಯಾಗಿದ್ದಾರೆ.












Click it and Unblock the Notifications