NEET UG 2022 Result: ಕರ್ನಾಟಕದ ಹೃಷಿಕೇಶ್‌ಗೆ 3ನೇ ಸ್ಥಾನ
ಬೆಂಗಳೂರು ಸೆಪ್ಟಂಬರ್ 08: ರಾಷ್ಟ್ರೀಯ ಅರ್ಹತಾ ಪರೀಕ್ಷೆ (ನೀಟ್-ಯುಜಿ) 2022 ಫಲಿತಾಂಶ ಪ್ರಕಟಗೊಂಡಿದ್ದು, ಇದರಲ್ಲಿ ಕರ್ನಾಟಕದ ಹೃಷಿಕೇಶ್ ನಾಗಭೂಷಣ್ ಗಂಗುಲೆ 3ನೇ ಸ್ಥಾನ ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಮೊದಲ ಸ್ಥಾನ ರಾಜಸ್ಥಾನದ ಪಾಲಾಗಿದೆ.
ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯು (ಎನ್‌ಟಿಎ) ಬುಧವಾರ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್-ಯುಜಿ) ಫಲಿತಾಂಶ ಪ್ರಕಟಿಸಿದೆ. ಕರ್ನಾಟಕದ ಇಬ್ಬರು ವಿದ್ಯಾರ್ಥಿಗಳು ಅಗ್ರಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಕಳೆದ ಜುಲೈ 17ರಂದು ಭಾರತದ ಒಟ್ಟು 546 ನಗರಗಳಲ್ಲಿ 3,570 ಕೇಂದ್ರಗಳಲ್ಲಿ 2022ನೇ ಸಾಲಿನ ರಾಷ್ಟ್ರೀಯ ಅರ್ಹತೆ ಪ್ರವೇಶ ಪರೀಕ್ಷೆ ನೀಟ್-(ಯುಜಿ) ನಡೆಸಲಾಗಿತ್ತು. ಈ ವೇಳೆ ಒಟ್ಟು 17.64 ಲಕ್ಷ ಅಭ್ಯರ್ಥಿಗಳ ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡಿದ್ದರು. ಇದರಲ್ಲಿ ರಾಜಸ್ಥಾನದ ತನಿಷ್ಕಾ ಎಂಬುವವರು ಮೊದಲ ಸ್ಥಾನಕ್ಕೆ ಪಾತ್ರರಾಗಿದ್ದಾರೆ. ಇನ್ನು ದೆಹಲಿಯ ವತ್ಸ ಆಶಿಶ್ ಬಾತ್ರಾ 2ನೇ ಸ್ಥಾನ ಮತ್ತು ಕರ್ನಾಟಕದ ಹೃಷಿಕೇಶ್ ನಾಗಭೂಷಣ್ ಗಂಗುಲೆ 3ನೇ ಸ್ಥಾನ ಪಡೆದಿದ್ದಾರೆ.

ಟಾಪ್ 50ರ ಪಟ್ಟಿಯಲ್ಲಿ 18 ಮಹಿಳೆ, 32 ಪುರಷರು:
ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ ಬರೆದ ಉತ್ತೀರ್ಣಗೊಂಡ ದೇಶಾದ್ಯಂತದ ಟಾಪ್ 50 ಅಭ್ಯರ್ಥಿಗಳ ಪಟ್ಟಿಯಲ್ಲಿ 18 ಮಂದಿ ಮಹಿಳೆಯರು ಸೇರಿದ್ದಾರೆ. 32 ಪುರುಷ ಅಭ್ಯರ್ಥಿಗಳು ಅಗ್ರ 50ರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ಇನ್ನೂ ಅಗ್ರ 10ರ ಪಟ್ಟಿಯಲ್ಲಿ ಕರ್ನಾಟಕದ ರುಚಾ ಪವಾಶೆ 720ಅಂಕಗಳಿಗೆ 715, ತೆಲಂಗಾಣದ ಎರ್ರಬೆಲ್ಲಿ ಸಿದ್ಧಾರ್ಥ್ ರಾವ್ 711, ಮಹಾರಾಷ್ಟ್ರದ ರಿಷಿ ವಿನಯ್ ಬಾಲ್ಸೆ 710, ಪಂಜಾಬ್‌ನ ಅರ್ಪಿತ್ ನಾರಂಗ್ ಅವರು 710, ಕೃಷ್ಣ ಎಸ್‌ಆರ್ 710 ಅಂಕ ಪಡೆದಿದ್ದಾರೆ. ಗುಜರಾತ್‌ನಿಂದ ಝೀಲ್ ವಿಪುಲ್ ವ್ಯಾಸ್ 710 ಹಾಗೂ ಜಮ್ಮು ಮತ್ತು ಕಾಶ್ಮೀರದಿಂದ ಹಾಜಿಕ್ ಪರ್ವೀಜ್ ಲೋನ್ ಅವರು 710 ಅಂಕ ಗಳಿಸಿದ್ದಾರೆ.

ನೀಟ್ ಪರೀಕ್ಷೆಗೆ ಹಾಜರಾದ ಒಟ್ಟು 7,63,545 ಪುರುಷ ಅಭ್ಯರ್ಥಿಗಳಲ್ಲಿ 4,29,160ರಷ್ಟು ಮಂದಿ ಉತ್ತೀರ್ಣರಾಗಿದ್ದಾರೆ. ಅದೇ ರೀತಿ ಪರೀಕ್ಷೆ ಬರೆದ ಒಟ್ಟು 10,01,015 ಮಹಿಳಾ ಅಭ್ಯರ್ಥಿಗಳ ಪೈಕಿ 5,63,902 ವಿದ್ಯಾರ್ತಿನಿಯರು ನೀಟ್ ಯುಜಿ- 2022 ಪರೀಕ್ಷೆ ಪಾಸಾಗಿದ್ದಾರೆ ಎಂದು ತಿಳಿದು ಬಂದಿದೆ.
ಸಮಾನ ಅಂಕದ ವಿದ್ಯಾರ್ಥಿಗಳಿಗೆ ಟೈ ಬ್ರೇಕರ್ ನಿಯಮ ಅನ್ವಯ
ಒಟ್ಟು ಅಂಕಗಳಲ್ಲಿ ಒಂದೇ ಸಮನಾಗಿ ಅಂಕಗಳನ್ನು ಗಳಿಸಿದ ಅಭ್ಯರ್ಥಿಗಳಿಗೆ ಟೈ ಬ್ರೇಕರ್ ನಿಯಮದ ಪ್ರಕಾರ ಶ್ರೇಣಿಗಳನ್ನು ನೀಡಲಾಗುತ್ತದೆ. ಅಲ್ಲಿ ಜೀವಶಾಸ್ತ್ರದಲ್ಲಿ ಹೆಚ್ಚಿನ ಅಂಕಗಳನ್ನು ಹೊಂದಿರುವ ಅಭ್ಯರ್ಥಿಯು ಉಳಿದವರಿಗಿಂತ ಹೆಚ್ಚಿನ ಸ್ಥಾನವನ್ನು ಪಡೆಯುತ್ತಾನೆ. ಜೀವಶಾಸ್ತ್ರದಲ್ಲಿ ಒಂದೇ ರೀತಿಯ ಅಂಕಗಳು, ಭೌತಶಾಸ್ತ್ರ ನಂತರ ರಸಾಯನಶಾಸ್ತ್ರಕ್ಕೆ ಅದೇ ನಿಯಮವನ್ನು ಅನ್ವಯಿಸಲಾಗುತ್ತದೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.
ಇದೇ ಮೊದಲ ಬಾರಿಗೆ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಯನ್ನು ಅಬುಧಾಬಿ, ಬ್ಯಾಂಕಾಕ್, ಕೊಲಂಬೊ, ದೋಹಾ, ಕಠ್ಮಂಡು, ಕೌಲಾಲಂಪುರ್, ಲಾಗೋಸ್, ಮನಾಮಾ, ಮಸ್ಕತ್, ರಿಯಾದ್, ಶಾರ್ಜಾ, ಸಿಂಗಾಪುರ್ ಜೊತೆಗೆ ದುಬೈ ಮತ್ತು ಕುವೈತ್ ನಗರಗಳಲ್ಲೂ ಸಹ ಪರೀಕ್ಷೆ ನಡೆಸಲಾಗಿದೆ. ಪರೀಕ್ಷೆಯು ಅಸ್ಸಾಮಿ, ಬಂಗಾಳಿ, ಇಂಗ್ಲಿಷ್, ಗುಜರಾತಿ, ಹಿಂದಿ, ಕನ್ನಡ, ಮಲಯಾಳಂ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು ಮತ್ತು ಉರ್ದು ಸೇರಿ ಒಟ್ಟು 13 ಭಾಷೆಗಳಲ್ಲಿ ನಡೆದಿದೆ ಎಂದು ಅವರು ತಿಳಿಸಿದ್ದಾರೆ.












Click it and Unblock the Notifications