ವಾಜಪೇಯಿ ಕುಶಲ ವಿಚಾರಿಸಿದ ಮೋದಿ ಮತ್ತು ರಾಹುಲ್ ಗಾಂಧಿ
ನವ ದೆಹಲಿ, ಜೂನ್ 11: ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭೇಟಿ ಆದರು.
ಹಠಾತ್ತನೆ ವಾಜಪೇಯಿ ಅವರ ಆರೋಗ್ಯದಲ್ಲಿ ಏರುಪೇರಾದ ಕಾರಣ ವಾಜಪೇಯಿ ಅವರನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಂಜೆ ವೇಳೆ ಆಸ್ಪತ್ರೆಗೆ ಆಗಮಿಸಿದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ವಾಜಪೇಯಿ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.
ಆ ನಂತರ ಆಸ್ಪತ್ರೆಗೆ ಬಂದ ಪ್ರಧಾನಿ ನರೇಂದ್ರ ಮೋದಿ ಅವರು, ವಾಜಪೇಯಿ ಅವರನ್ನು ಭೇಟಿಯಾಗಿ ಕುಶಲ ವಿಚಾರಿಸಿದರು. ವಾಜಪೇಯಿ ಅವರ ಪರಮಾಪ್ತರಾಗಿದ್ದ ಎಲ್.ಕೆ.ಅಡ್ವಾಣಿ ಅವರು ಹಾಗೂ ಗೃಹ ಮಂತ್ರಿ ರಾಜನಾಥ ಸಿಂಗ್ ಅವರು ಕೂಡಾ ಆಸ್ಪತ್ರೆಗೆ ಭೇಟಿ ನೀಡಿ ಕುಶಲ ವಿಚಾರಿಸಿದ್ದಾರೆ.

ಮಾಜಿ ಪ್ರಧಾನಿ ವಾಜಪೇಯಿ ಅವರಿಗೆ ಈಗ 93 ವರ್ಷ ವಯಸ್ಸಾಗಿದ್ದು, ಅವರು ಸಕ್ರಿಯ ರಾಜಕಾರಣದಿಂದ ಹಿಂದೆ ಸರಿದು ಹಲವು ವರ್ಷಗಳೇ ಆಗಿವೆ.
2009ರಲ್ಲಿ ಅವರು ಪಾರ್ಶ್ವವಾಯುವಿಗೆ ತುತ್ತಾದ ಬಳಿಕ ಮಾತನಾಡುವುದು ಸಹ ಅಸಾಧ್ಯವಾಗಿದೆ. ಸದಾ ಗಾಲಿಕುರ್ಚಿಯಲ್ಲಿಯೇ ಸಹಾಯಕರ ನೆರವಿನಿಂದ ಓಡಾಡುವ ಸ್ಥಿತಿಗೆ ತಲುಪಿರುವ ವಾಜಪೇಯಿ ಅವರು, ತಮ್ಮ ಆತ್ಮೀಯರನ್ನು ಸಹ ಗುರುತಿಸುವಲ್ಲಿ ವಿಫಲರಾಗುತ್ತಿದ್ದಾರೆ.












Click it and Unblock the Notifications