ಮೋದಿ ವಿರುದ್ಧ ಸ್ಪರ್ಧಿಸಿರುವ ಮಾಜಿ ಸೈನಿಕನಿಗೆ ಆಯೋಗ ನೊಟೀಸ್
ನವದೆಹಲಿ, ಮೇ 01: ನರೇಂದ್ರ ಮೋದಿ ವಿರುದ್ಧ ವಾರಣಾಸಿಯಿಂದ ಚುನಾವಣೆಗೆ ಸ್ಪರ್ಧಿಸಿರುವ ಬಿಎಸ್‌ಪಿ ಅಭ್ಯರ್ಥಿ, ಮಾಜಿ ಬಿಎಸ್‌ಎಫ್ ಸೈನಿಕ ತೇಜ್‌ಬಹದ್ದೂರ್ ಅವರಿಗೆ ಚುನಾವಣಾ ಆಯೋಗ ನೊಟೀಸ್ ನೀಡಿದೆ.
ತೇಜ್‌ಬಹದ್ದೂರ್ ಸಲ್ಲಿಸಿರುವ ನಾಮಪತ್ರದಲ್ಲಿ ಕೆಲ ವಿಷಯಗಳನ್ನು ಮುಚ್ಚಿಡಲಾಗಿದೆ ಎಂದು ಆಯೋಗವು ಅಭಿಪ್ರಾಯಪಟ್ಟಿದ್ದು, ಈ ಕುರಿತು ಉತ್ತರ ನೀಡುವಂತೆ ತೇಜ್ ಬಹದ್ದೂರ್ ಅವರನ್ನು ಕೋರಿದೆ.
ತೇಜ್ ಬಹದ್ದೂರ್ ಅವರು ಬಿಎಸ್‌ಎಫ್ ಸೇವೆಯಿಂದ ವಜಾಗೊಂಡಿದ್ದಾರೆ. ಭ್ರಷ್ಟಾಚಾರ ಅಥವಾ ವಿಶ್ವಾಸದ್ರೋಹದಡಿ ಸೇವೆಯಿಂದ ವಜಾಗೊಂಡ ವ್ಯಕ್ತಿ ಐದು ವರ್ಷ ಯಾವುದೇ ಚುನಾವಣೆಗೆ ಸ್ಪರ್ಧಿಸುವಂತಿಲ್ಲ, ಹಾಗಾಗಿ ಸೇವೆಯಿಂದ ವಜಾಗೊಂಡಿರುವ ತೇಜ್‌ಬಹದ್ದೂರ್ ಅವರು ಬಿಎಸ್‌ಎಫ್‌ನಿಂದ ನಿರಪೇಕ್ಷಣಾ ಪತ್ರ ತರುವಂತೆ ಆಯೋಗ ಸೂಚಿಸಿದೆ.

ಮೊದಲಿಗೆ ಪಕ್ಷೇತರವಾಗಿ ನಾಮಪತ್ರ ಸಲ್ಲಿಸಿದ್ದ ತೇಜ್‌ಬಹದ್ದೂರ್ ಅವರು, ಬಿಎಸ್‌ಎಫ್‌ನಿಂದ ವಜಾ ಆಗಿರುವ ಬಗ್ಗೆ ನಾಮಪತ್ರದಲ್ಲಿ ಉಲ್ಲೇಖಿಸಿದ್ದರು, ಆದರೆ ಬಿಎಸ್ಎಸ್‌ಪಿ ಅಭ್ಯರ್ಥಿಯಾಗಿ ಸಲ್ಲಿಸಿದ ನಾಮಪತ್ರದಲ್ಲಿ ಈ ಮಾಹಿತಿ ಇಲ್ಲ ಎನ್ನಲಾಗುತ್ತಿದೆ.
ಸೈನಿಕರಿಗೆ ಪೂರೈಸಲಾಗುತ್ತಿರುವ ಕಳಪೆ ಆಹಾರದ ಬಗ್ಗೆ ವಿಡಿಯೋ ಮಾಡಿದ್ದ ತೇಜ್‌ಬಹದ್ದೂರ್ ಅವರು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು, ಇದು ಬಹುವಾಗಿ ಸುದ್ದಿಯಾಗಿತ್ತು. ಹಾಗಾಗಿ ಅವರನ್ನು ಸೇವೆಯಿಂದ ವಜಾ ಮಾಡಲಾಗಿತ್ತು.












Click it and Unblock the Notifications