ಚೈತ್ರ ನವರಾತ್ರಿಯಲ್ಲಿ ಮಾಂಸ ನಿಷೇಧದ ವಿರುದ್ಧ ಕಿಡಿಕಾರಿದ ಮಹುವಾ ಮೊಯಿತ್ರಾ
ದೆಹಲಿ, ಏ.6: ದೆಹಲಿಯಲ್ಲಿ ಚೈತ್ರ ನವರಾತ್ರಿ ಆರಂಭಗೊಂಡಿದೆ. ಒಂಬತ್ತು ದಿನಗಳ ನವರಾತ್ರಿ ಉತ್ಸವವನ್ನು ಏಪ್ರಿಲ್ 2 ರಿಂದ ಏಪ್ರಿಲ್ 11 ರವರೆಗೆ ದೆಹಲಿಯಲ್ಲಿ ಆಚರಿಸಲಾಗುತ್ತದೆ. ಹಬ್ಬದ ಮಧ್ಯೆ ಕೆಲವೆಡೆ ಮಾಂಸದ ಅಂಗಡಿಗಳನ್ನು ಬಂದ್ ಮಾಡುವ ಆದೇಶ ಹೊರಡಿಸಲಾಗಿದೆ. ಈ ಆದೇಶ ವಿರುದ್ಧ ಸಂಸದೆ ಮಹುವಾ ಮೊಯಿತ್ರಾ (Mahua Moitra) ಕಿಡಿ ಕಾರಿದ್ದಾರೆ. ಅವರು ಇಂದು ಬುಧವಾರ (ಏಪ್ರಿಲ್ 6) ನವರಾತ್ರಿ ಹಬ್ಬದ ಒಂಬತ್ತು ದಿನಗಳ ಅವಧಿಯಲ್ಲಿ ಮಾಂಸದ ಅಂಗಡಿಗಳನ್ನು ಮುಚ್ಚುವಂತೆ ದಕ್ಷಿಣ ಮತ್ತು ಪೂರ್ವ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಎಸ್‌ಡಿಎಂಸಿ) ವಿರುದ್ಧ ವಾಗ್ದಾಳಿ ನಡೆಸಿದರು. ಸಂವಿಧಾನ ಆಕೆಗೆ ಮಾಂಸವನ್ನು ತಿನ್ನಲು ಮತ್ತು ಅಂಗಡಿಯವರಿಗೆ ತನ್ನ ವ್ಯಾಪಾರವನ್ನು ನಡೆಸುವ ಸ್ವಾತಂತ್ರ್ಯವನ್ನು ನೀಡಿದೆ. ಅದನ್ನು ತಡೆಯಲು ಇವರು ಯಾರು ಎಂದು ಸಂಸದೆ ಮೊಯಿತ್ರಾ ಪ್ರಶ್ನೆ ಮಾಡಿದ್ದಾರೆ.
ನವರಾತ್ರಿಯ ಸಮಯದಲ್ಲಿ ಮುನ್ಸಿಪಲ್ ಪ್ರದೇಶದಲ್ಲಿ ಮಾಂಸದ ಅಂಗಡಿಗಳನ್ನು ಮುಚ್ಚುವಂತೆ ಒತ್ತಾಯಿಸಿ ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಮೇಯರ್ ಮುಖೇಶ್ ಸೂರ್ಯನ್ ಅವರು ಸೋಮವಾರ ಎಸ್‌ಡಿಎಂಸಿ ಆಯುಕ್ತ ಜ್ಞಾನೇಶ್ ಭಾರ್ತಿ ಅವರಿಗೆ ಪತ್ರ ಬರೆದಿದ್ದಾರೆ. ಇದರ ಬೆನ್ನಲ್ಲೆ ಮಾಂಸ ನಿಷೇಧದ ಗದ್ದಲ ಶುರುವಾಗಿದೆ. "ನಾನು ದಕ್ಷಿಣ ದೆಹಲಿಯಲ್ಲಿ ವಾಸಿಸುತ್ತಿದ್ದೇನೆ. ಸಂವಿಧಾನವು ನನಗೆ ಇಷ್ಟವಾದಾಗ ಮಾಂಸವನ್ನು ತಿನ್ನಲು ಅವಕಾಶ ನೀಡುತ್ತದೆ ಮತ್ತು ಅಂಗಡಿಯವನು ತನ್ನ ವ್ಯಾಪಾರವನ್ನು ನಡೆಸಲು ಸ್ವಾತಂತ್ರ್ಯವನ್ನು ನೀಡಿದೆ. ಆದರೆ ಮಾಂಸ ಮಾರಾಟ ಮಾಡಲು ಪೂರ್ಣ ವಿರಾಮ ನೀಡಲಾಗಿದೆ" ಎಂದು ಟಿಎಂಸಿ ಸಂಸದೆ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (SDMC) ಮತ್ತು ಪೂರ್ವ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (EDMC) ಮೇಯರ್‌ಗಳು ಒಂಬತ್ತು ದಿನಗಳ ಹಬ್ಬದ ಸಮಯದಲ್ಲಿ ಮಾಂಸದ ಅಂಗಡಿಗಳನ್ನು ಮುಚ್ಚುವಂತೆ ಕರೆ ನೀಡಿದ್ದಾರೆ. ಮೇಯರ್ ಅವರ ಹೇಳಿಕೆಗಳನ್ನು ಅನುಸರಿಸಿ, ರಾಷ್ಟ್ರ ರಾಜಧಾನಿಯ ಕೆಲ ಪ್ರದೇಶಗಳಲ್ಲಿ ಹಲವಾರು ಮಾಂಸದ ಅಂಗಡಿ ಮಾಲೀಕರು ಅಧಿಕಾರಿಗಳ ಕ್ರಮಕ್ಕೆ ಹೆದರಿ ತಮ್ಮ ಅಂಗಡಿಗಳನ್ನು ಮುಚ್ಚಿದ್ದಾರೆ.

ಪೂರ್ವ ದೆಹಲಿಯ ಮೇಯರ್ ಶ್ಯಾಮ್ ಸುಂದರ್ ಅಗರ್ವಾಲ್ ಅವರು ನವರಾತ್ರಿಯಲ್ಲಿ "90 ಪ್ರತಿಶತ ಜನರು ಮಾಂಸ ಆಹಾರವನ್ನು ಸೇವಿಸುವುದಿಲ್ಲ" ಎಂದು ಹೇಳಿದರೆ, ದಕ್ಷಿಣ ದೆಹಲಿಯ ಮೇಯರ್ ಮುಖೇಶ್ ಸೂರ್ಯನ್ ಅವರು ಹಬ್ಬದ ಸಮಯದಲ್ಲಿ "ಮಾಂಸದ ಅಂಗಡಿಗಳನ್ನು ತೆರೆಯುವ ಅಗತ್ಯವಿಲ್ಲ" ಎಂದು ಹೇಳಿದ್ದಾರೆ. ಇವರಿಬ್ಬರೂ ಜನ ಮಾಂಸವನ್ನು ಈ ಅವಧಿಯಲ್ಲಿ ಸೇವಿಸುವುದಿಲ್ಲ ಎನ್ನುವ ಸೂಚನೆಯೊಂದಿಗೆ ಅಂಗಡಿಗಳನ್ನು ಬಂದ್ ಮಾಡಲು ಸೂಚಿಸಿದ್ದಾರೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಆದೇಶವನ್ನು ಅವರು ಹೊರಡಿಸಿಲ್ಲ.
ಸೋಮವಾರ ಎಸ್‌ಡಿಎಂಸಿ ಆಯುಕ್ತ ಜ್ಞಾನೇಶ್ ಭಾರ್ತಿ ಅವರಿಗೆ ಬರೆದ ಪತ್ರದಲ್ಲಿ ಸೂರ್ಯನ್ ಅವರು ಜನ ಮಾಂಸದ ಅಂಗಡಿಗಳತ್ತ ಬಂದಾಗ ಅಥವಾ ಮಾಂಸದ ದುರ್ವಾಸನೆ ಬಂದರೆ "ಧಾರ್ಮಿಕ ನಂಬಿಕೆಗಳು ಮತ್ತು ಭಕ್ತರ ಭಾವನೆಗಳಿಗೆ ಧಕ್ಕೆಯಾಗುತ್ತದೆ" ಎಂದು ಹೇಳಿದ್ದಾರೆ. ನವರಾತ್ರಿಯ ಸಮಯದಲ್ಲಿ ದುರ್ಗಾ ದೇವಿಗೆ ದೈನಂದಿನ ಪ್ರಾರ್ಥನೆಗಳನ್ನು ಸಲ್ಲಿಸಲು ಅವರ ದಾರಿಯಲ್ಲಿ ಮಾಂಸದ ಅಂಗಡಿಗಳನ್ನು ಬಂದ್ ಮಾಡಲಾಗುವುದು ಎಂದು ಹೇಳಿದ್ದಾರೆ.

ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಏಪ್ರಿಲ್ 2 ರಿಂದ ಏಪ್ರಿಲ್ 11 ರವರೆಗೆ ಆಚರಿಸಲಾಗುವ ನವರಾತ್ರಿ ಉತ್ಸವದ ಒಂಬತ್ತು ದಿನಗಳ ಅವಧಿಯಲ್ಲಿ ಮಾಂಸದ ಅಂಗಡಿಗಳನ್ನು ಮುಚ್ಚಲು ಆದೇಶಿಸಿದೆ. ಒಂದು ವೇಳೆ ನಿಯಮವನ್ನು ಮುರಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಇದಕ್ಕೆ ಹೆದರಿ ವ್ಯಾಪಾರಿಗಳು ಮಾಂಸದ ಅಂಗಡಿಗಳನ್ನು ಬಂದ್ ಮಾಡಿದ್ದಾರೆ. ನವರಾತ್ರಿಯ ಕೊನೆಯ ಮೂರು ದಿನಗಳು ಅಂದರೆ ಸಪ್ತಮಿ (ಏಳನೇ ದಿನ), ಅಷ್ಟಮಿ (ಎಂಟನೇ ದಿನ) ಮತ್ತು ನವಮಿ (ಒಂಬತ್ತನೇ ದಿನ) ರಂದು (ಏಪ್ರಿಲ್ 9, 10 ಮತ್ತು 11 ರಂದು) ಮಾಂಸದ ಅಂಗಡಿಗಳನ್ನು ಮುಚ್ಚಲು ಆದೇಶಿಸಲಾಗಿದೆ.
ನವರಾತ್ರಿಯ ಸಮಯದಲ್ಲಿ ಮದ್ಯದ ಮೇಲಿನ ರಿಯಾಯಿತಿಯನ್ನು ಹಿಂಪಡೆಯಲು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಪತ್ರ ಬರೆದಿರುವುದಾಗಿ ಮೇಯರ್ ಮಾಹಿತಿ ನೀಡಿದ್ದಾರೆ. ಜೊತೆಗೆ ಸಾಧ್ಯವಾದರೆ ಒಂಬತ್ತು ದಿನಗಳವರೆಗೆ ಮದ್ಯ ಮಾರಾಟವನ್ನು ಸಹ ನಿಲ್ಲಿಸಿ ಎಂದು ಕೋರಿದೆ.












Click it and Unblock the Notifications