ಆರ್ಥಿಕ ಸ್ಥಾಯಿ ಸಮಿತಿಗೆ ಮನಮೋಹನ್ ಸಿಂಗ್ ನಾಮನಿರ್ದೇಶನ
ನವದೆಹಲಿ, ನವೆಂಬರ್ 11: ಮಾಜಿ ಪ್ರಧಾನಿ ಹಾಗೂ ಕಾಂಗ್ರೆಸ್‌ನ ಹಿರಿಯ ಮುಖಂಡ ಡಾ. ಮನಮೋಹನ್ ಸಿಂಗ್ ಅವರನ್ನು ಹಣಕಾಸು ಸಂಸದೀಯ ಸ್ಥಾಯಿ ಸಮಿತಿಗೆ ರಾಜ್ಯಸಭೆ ಅಧ್ಯಕ್ಷ ಎಂ. ವೆಂಕಯ್ಯ ನಾಯ್ಡು ನಾಮನಿರ್ದೇಶನ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದವರೇ ಆದ ದಿಗ್ವಿಜಯ ಸಿಂಗ್ ಅವರಿಂದ ತೆರವಾದ ಸ್ಥಾನಕ್ಕೆ ಮನಮೋಹನ್ ಸಿಂಗ್ ನಾಮನಿರ್ದೇಶನಗೊಂಡಿದ್ದಾರೆ.
ಅಲ್ಲದೆ, ದಿಗ್ವಿಜಯ ಸಿಂಗ್ ಅವರನ್ನು ವೆಂಕಯ್ಯ ನಾಯ್ಡು ಅವರು ನಗರಾಭಿವೃದ್ಧಿ ಸಂಸದೀಯ ಸ್ಥಾಯಿ ಸಮಿತಿಗೆ ನಾಮನಿರ್ದೇಶನ ಮಾಡಿದ್ದಾರೆ. ಅವರ ಜಾಗಕ್ಕೆ ಮನಮೋಹನ್ ಸಿಂಗ್ ಅವರನ್ನು ನೇಮಿಸಲಾಗಿದೆ.
'ರಾಜ್ಯಸಭೆ ಸದಸ್ಯ ಮನಮೋಹನ್ ಸಿಂಗ್ ಅವರನ್ನು ರಾಜ್ಯಸಭೆ ಅಧ್ಯಕ್ಷರು ದಿಗ್ವಿಜಯ್ ಸಿಂಗ್ ಅವರ ಸ್ಥಾನಕ್ಕೆ ಆರ್ಥಿಕ ಸಮಿತಿಯ ಸದಸ್ಯರನ್ನಾಗಿ ನೇಮಿಸಲಾಗಿದೆ. ಅಧ್ಯಕ್ಷರು, ರಾಜ್ಯಸಭೆ ಸದಸ್ಯರ ದಿಗ್ವಿಜಯ್ ಸಿಂಗ್ ಅವರನ್ನು ನಗರಾಭಿವೃದ್ಧಿ ಸಮಿತಿಯ ಸದಸ್ಯರನ್ನಾಗಿ ಕೂಡ ನೇಮಿಸಿದ್ದಾರೆ' ಎಂದು ರಾಜ್ಯಸಭೆಯ ವಾರ್ತಾಪತ್ರ ತಿಳಿಸಿದೆ.

ಮನಮೋಹನ್ ಸಿಂಗ್ ಅವರು ಆರ್ಥಿಕ ಸಂಸದೀಯ ಸಮಿತಿಗೆ ನೇಮಕವಾಗುವಂತೆ ನೆರವಾಗಲು ದಿಗ್ವಿಜಯ್ ಸಿಂಗ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು ಎಂದು ಮೂಲಗಳು ತಿಳಿಸಿವೆ. 1991-96ರವರೆಗೆ ಹಣಕಾಸು ಸಚಿವರಾಗಿದ್ದ ಸಿಂಗ್, 2014ರ ಸೆಪ್ಟೆಂಬರ್‌ನಿಂದ 2019ರ ಮೇವರೆಗೆ ಸಮಿತಿಯ ಸದಸ್ಯರಾಗಿದ್ದರು. ಅವರ ರಾಜ್ಯಸಭೆ ಸದಸ್ಯತ್ವ ಜೂನ್‌ನಲ್ಲಿ ಅಂತ್ಯಗೊಂಡಿತ್ತು. ಅವರ ಎದುರು ಬಿಜೆಪಿ ಅಭ್ಯರ್ಥಿಗಳನ್ನು ಹಾಕದ ಕಾರಣ ರಾಜಸ್ಥಾನದಿಂದ ಆಗಸ್ಟ್‌ನಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದರು.












Click it and Unblock the Notifications