ಎನ್ ಡಿಎ ದೋಸ್ತಿ ಕುಸ್ತಿ: ಸೀಟು ಹಂಚಿಕೆ ಇಂದು ಅಂತಿಮ ನಿರ್ಧಾರ
Recommended Video

ನವದೆಹಲಿ, ಡಿಸೆಂಬರ್ 22: ಬಿಹಾರದಲ್ಲಿ ಲೋಕಸಭಾ ಚುನಾವಣೆಗೆ ಸೀಟು ಹಂಚಿಕೆ ವಿಷಯಕ್ಕೆ ಸಂಬಂಧಿಸಿದಂತೆ ಎನ್ ಡಿಎ ಮೈತ್ರಿಕೂಟ ಇಂದು ಅಂತಿಮ ನಿರ್ಧಾರ ಪ್ರಕಟಿಸಲಿದೆ.
ಸೀಟು ಹಂಚಿಕೆ ಭಿನ್ನಾಭಿಪ್ರಾಯದಿಂದ ಎನ್ ಡಿಎಯಿಂದ ಈಗಾಗಲೇ ಆರ್ ಎಲ್ ಎಸ್ ಪಿ ಮುಖ್ಯಸ್ಥ ಉಪೇಂದ್ರ ಕುಶ್ವಾಹ ಹೊರಹೋಗಿದ್ದಾರೆ. ಇದೀಗ ಲೋಕ ಜತಶಕ್ತಿ ಪಕ್ಷದ(ಎಲ್ ಜೆಪಿ) ರಾಮ್ ವಿಲಾಸ್ ಪಾಸ್ವಾನ್ ಅವರು ಸಹ ಎನ್ ಡಿಎ ತೊರೆಯುವ ವದಂತಿ ಹಬ್ಬುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಬಿಜೆಪಿ, ಸೀಟು ಹಂಚಿಕೆ ವಿಷಯಕ್ಕೆ ಸಂಬಂಧಿಸಿದಂತೆ ಮಾತುಕತೆ ಜೆಡಿಯು ಮತ್ತು ಎಲ್ ಜೆಪಿ ಮುಖಂಡರೊಂದಿಗೆ ಮಾತುಕತೆ ನಡೆಸಿದೆ.
ನವದೆಹಲಿಯಲ್ಲಿ ಗುರುವಾರ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮತ್ತು ಹಣಕಾಸು ಸಚಿವ ಅರುಣ್ ಜೇಟ್ಲಿ ಅವರನ್ನು ಪಾಸ್ವಾನ್ ಭೇಟಿಯಾದ ನಂತರ ಮೂರೂ ಪಕ್ಷಗಳೂ ಒಮ್ಮತದ ನಿರ್ಧಾರಕ್ಕೆ ಬಂದಿವೆ.

ಯಾರಿಗೆಷ್ಟು ಸೀಟು?
ಕೆಲವು ಮೂಲಗಳ ಪ್ರಕಾರ ಬಿಹಾರದ ಒಟ್ಟು 40 ಲೋಕಸಭಾ ಕ್ಷೇತ್ರಗಳಲ್ಲಿ 18 ರಲ್ಲಿ ಬಿಜೆಪಿ, 17 ರಲ್ಲಿ ಜೆಡಿಯು ಮತ್ತು 5 ರಲ್ಲಿ ಎಲ್ ಜೆಪಿ ಚುನಾವಣೆಗೆ ಸ್ಪರ್ಧಿಸಲಿದೆ. ಈ ಮೂಲಕ ಸೀಟು ಹಂಚಿಕೆ ಭಿನ್ನಾಭಿಪ್ರಾಯ ತಹಬಂದಿಗೆ ಬಂದಂತಾಗಿದೆ. ಜೊತೆಗೆ ಪಾಸ್ವಾನ್ ರಾಜ್ಯಸಭೆಯಲ್ಲೂ ಒಂದು ಸ್ಥಾನ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.

ಬಂಡಾಯ ಶಮನ ಮಾಡಿದ ಕ್ರೆಡಿಟ್ ಜೇಟ್ಲಿಗೆ!
ಲೋಕಸಭಾ ಚುನಾವಣೆ ಸನ್ನಿಹಿತವಾಗುತ್ತಿರುವ ಸಮಯದಲ್ಲಿ ಎನ್ ಡಿಎ ಯಿಂದ ದೂರ ಸರಿಯುವ ಯತ್ನದಲ್ಲಿದ್ದ ಪಾಸ್ವಾನ್ ಅವರನ್ನು ಶಾಂತಗೊಳಿಸಿದ ಕೀರ್ತಿ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರಿಗೆ ಸಲ್ಲಬೇಕು. ಜೇಟ್ಲಿ ಅವರ ಬಗ್ಗೆ ಬಿಹಾರದಲ್ಲಿ ಉತ್ತಮ ಅಭಿಪ್ರಾಯವಿದೆ. ಮಾತ್ರವಲ್ಲದ ಇಲ್ಲಿನ ಮುಖಂಡರೊಂದಿಗೆ ಜೇಟ್ಲಿ ಉತ್ತಮ ಬಾಂಧವ್ಯ ಕಾಯ್ದುಕೊಂಡಿದ್ದಾರೆ. ಆದ್ದರಿಂದ ಪಾಸ್ವಾನ್ ಅವರನ್ನೇ ಸಂಧಾನಕ್ಕೆ ತಯಾರುಮಾಡುವ ಕೆಲಸವನ್ನು ಬಿಜೆಪಿ ಮಾಡಿತ್ತು. ಎಲ್ ಜಿಪಿ -ಬಿಜೆಪಿ ನಡುವಿನ ಭಿನ್ನಾಭಿಪ್ರಾಯವನ್ನು ಸುಲಭವಾಗಿ ಪರಿಹರಿಸಲು ಸಾಧ್ಯವಾಗಿದ್ದು ಜೇಟ್ಲಿ ಅವರಿಗೇ.

ಚಿರಾಗ್ ಪಾಸ್ವಾನ್ ಮುನಿಸು
ರಾಮ್ ವಿಲಾಸ್ ಪಾಸ್ವಾನ್ ಅವರ ಪುತ್ರ, ಸಂಸದ ಚಿರಾಗ್ ಪಾಸ್ವಾನ್ ಸಹ ಎನ್ ಡಿಎ ಯಿಂದ ಹೊರಹೋಗುವ ಸೂಚನೆ ನೀಡಿದ್ದರು. 'ಜನರು ಅಪನಗದೀಕರಣದಿಂದ ಆದ ಉಪಯೋಗವೇನು ಎಂದು ಕೇಳುತ್ತಿದ್ದಾರೆ. ನನಗೆ ವಿವರಿಸಲು ಬರುತ್ತಿಲ್ಲ. ದಯವಿಟ್ಟು ಅಪನಗದೀಕರಣದ ಉಪಯೋಗ ತಿಳಿಸಿ' ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಿಗೆ ಚಿರಾಗ್ ಪಾಸ್ವಾನ್ ಪತ್ರ ಬರೆದಿದ್ದು ಸಹ ವಿವಾದ ಸೃಷ್ಟಿಸಿತ್ತು.

ಎನ್ ಡಿಎ ಗೆ ಕುಶ್ವಾಹ ಗುಡ್ ಬೈ!
2014 ರ ಲೋಕಸಭಾ ಚುನಾವಣೆಯ ನಂತರ ಎನ್ ಡಿಎ ಜೊತೆ ಗುರುತಿಸಿಕೊಂಡಿದ್ದ ಆರ್ ಎಲ್ ಎಸ್ ಪಿ ಮುಖಂಡ ಉಪೇಂದ್ರ ಕುಶ್ವಾಹ ಇತ್ತೀಚೆಗಷ್ಟೇ ಇದೇ ಸೀಟು ಹಂಚಿಕೆಯ ಭಿನ್ನಾಭಿಪ್ರಾಯದಿಂದ ಎನ್ ಡಿಎ ತೊರೆದಿದ್ದಾರೆ. ಅಷ್ಟೇ ಅಲ್ಲ, ಕಾಂಗ್ರೆಸ್ ನೇತೃತ್ವದ ಮಹಾಮೈತ್ರಿಕೂಟಕ್ಕೆ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ. ಎಲ್ ಜೆಪಿಯನ್ನೂ ಕಳೆದುಕೊಳ್ಳಲು ಇಷ್ಟವಿಲ್ಲದ ಬಿಜೆಪಿ, ಬಂಡಾಯಕ್ಕೆ ತೇಪೆ ಹಚ್ಚುವ ಕೆಲಸ ಮಾಡಿದೆ.












Click it and Unblock the Notifications