ಊಟ ಮಾಡಬೇಕಾ ಹಾಗಿದ್ರೆ ಸಾಲ ಮಾಡಿ; ಅಯ್ಯೋ ವಿಧಿಯೇ?
ನವದೆಹಲಿ, ಏಪ್ರಿಲ್.13: ಕೊರೊನಾ ವೈರಸ್ ಕಾಟಕ್ಕೆ ಲಕ್ಷಾಂತರ ಜನರು ಭಯದಲ್ಲೇ ದಿನ ದೂಡುವಂತಾ ಸ್ಥಿತಿ ನಿರ್ಮಾಣವಾಗಿದೆ. ಇದರ ಮಧ್ಯೆ ಭಾರತ ಲಾಕ್ ಡೌನ್ ನಿಂದ ಸಾವಿರಾರು ಜನರು ನಿತ್ಯ ತುತ್ತು ಅನ್ನಕ್ಕೂ ಅಂಗಲಾಚುವಂತಾಗಿದೆ.
ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಎಲ್ಲ ರೀತಿ ಅಗತ್ಯ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸುವ ಕೆಲಸವನ್ನು ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಅಷ್ಟಾದರೂ ರಾಷ್ಟ್ರ ರಾಜಧಾನಿ ದೆಹಲಿಯ ಗಡಿಯಲ್ಲೇ ಇರುವ ಈ ಪ್ರದೇಶದಲ್ಲಿ ಅದ್ಯಾವ ಸೌಲಭ್ಯಗಳೂ ಸಿಗುತ್ತಿಲ್ಲ.
ನವದೆಹಲಿ ಮತ್ತು ಉತ್ತರ ಪ್ರದೇಶ ಗಡಿ ಭಾಗದಲ್ಲಿ ಇರುವ ಕುಶಾಲ್ ವಿಹಾರ್ ಪ್ರದೇಶದಲ್ಲಿ 40ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿವೆ. ಈ ಜನರಿಗೆ ಸರ್ಕಾರದಿಂದ ಯಾವುದೇ ಅಗತ್ಯ ವಸ್ತುಗಳು ಪೂರೈಕೆ ಆಗುತ್ತಿಲ್ಲ ಎಂದು ಹೇಳಲಾಗುತ್ತಿದೆ.

ದೆಹಲಿ ಮತ್ತು ಯುಪಿ ಸರ್ಕಾರಗಳಿಂದ ಇಲ್ಲ ಸಹಾಯ
ಉತ್ತರ ಪ್ರದೇಶ ಮತ್ತು ನವದೆಹಲಿ ಗಡಿಯ ಕುಶಾಲ್ ವಿಹಾರ್ ಪ್ರದೇಶದಲ್ಲಿ ಇರುವ ಜನರ ಪರಿಸ್ಥಿತಿಯನ್ನು ಯಾವ ಸರ್ಕಾರವೂ ಅರ್ಥ ಮಾಡಿಕೊಳ್ಳುತ್ತಿಲ್ಲ. ಎರಡರ ಪೈಕಿ ಒಂದು ಸರ್ಕಾರವೂ ಇಲ್ಲಿನ ಜನರ ನೆರವಿಗೆ ಧಾವಿಸುತ್ತಿಲ್ಲ ಎಂಬುದು ಕಾಲೋನಿಯವರ ಆರೋಪವಾಗಿದೆ.

ಕಳೆದೊಂದು ತಿಂಗಳಿಂದ ಆಹಾರ ಪದಾರ್ಥಗಳಿಲ್ಲ
ಭಾರತ ಲಾಕ್ ಡೌನ್ ಘೋಷಣೆ ಆದಾಗಿನಿಂದ ಇಲ್ಲಿಯವರೆಗೂ ಮನೆಯಲ್ಲಿ ಕುಣಿತು ಕೊಂಡಿದ್ದೀವಿ. ಸರ್ಕಾರದಿಂದ ನಮಗೆ ಆಹಾರ ಪದಾರ್ಥಗಳೇ ಸಿಕ್ಕಿಲ್ಲ. ಬ್ರೆಡ್ ತಿಂದು ಬದುತ್ತಿದ್ದೀವಿ. ತುತ್ತು ಅನ್ನಕ್ಕೂ ಪರದಾಡುವಂತಾ ಸ್ಥಿತಿ ಎದುರಾಗಿದೆ ಎಂದು ಸ್ಖಳೀಯರು ಹೇಳುತ್ತಿದ್ದಾರೆ.

500 ರೂಪಾಯಿಯಲ್ಲೇ ಬದುಕು ಸಾಗಿಸಲು ಆಗುತ್ತಾ?
ಕೇಂದ್ರ ಸರ್ಕಾರವು ಮಹಿಳೆಯರ ಜನ್ ಧನ್ ಖಾತೆಗೆ 500 ರೂಪಾಯಿಯನ್ನೇನೋ ಜಮಾ ಮಾಡಿದೆ. ಆ ಹಣವೂ ಖಾಲಿಯಾಗುತ್ತಿದೆ. ಮನೆಯಲ್ಲಿ ರೇಷನ್ ಇಲ್ಲ. ಕೇವಲ 500 ರೂಪಾಯಿಯಲ್ಲೇ ತಿಂಗಳುಪೂರ್ತಿ ಜೀವನ ಸಾಗಿಸುವುದಕ್ಕೆ ಆಗುತ್ತದೆಯೇ. ಇನ್ನು ಕೆಲವರು ಜನ್ ಧನ್ ಖಾತೆಯನ್ನೇ ಮಾಡಿಸಿಲ್ಲ. ಅಂಥವರ ಕಥೆಯೇನು ಎಂದು ಕಾಲೋನಿ ಜನರು ಪ್ರಶ್ನೆ ಮಾಡುತ್ತಿದ್ದಾರೆ.

ಊಟ ಮಾಡಬೇಕಾದ್ರೆ ಸಾಲ ಮಾಡಲೇಬೇಕು!
ಇನ್ನು, ಕುಶಾಲ್ ವಿಹಾರ್ ನಲ್ಲಿರುವ 12 ಸದಸ್ಯರುಳ್ಳ ಒಂದು ಕುಟುಂಬದವರು ನಿತ್ಯ ಊಟ ಮಾಡಬೇಕಾದರೆ ಸಾಲ ಮಾಡಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಭಾರತ ಲಾಕ್ ಡೌನ್ ನಿಂದಾಗಿ ಮನೆಯಲ್ಲಿ ಯಾರೊಬ್ಬರೂ ದುಡಿಯಲು ಹೋಗುತ್ತಿಲ್ಲ. ಕೆಲಸವಿಲ್ಲದೇ ಆದಾಯವಿಲ್ಲದೇ ಮನೆಯ ಎಲ್ಲ ಸದಸ್ಯರಿಗೆ ಊಟ ಬೇಕಿದ್ದಲ್ಲಿ ಸಾಲ ಪಡೆದು ಮನೆಗೆ ಆಹಾರ ಪದಾರ್ಥಗಳನ್ನು ತರುತ್ತಿದ್ದೇವೆ ಎಂಬುದು ಕುಟುಂಬ ಸದಸ್ಯರ ಅಳಲು.












Click it and Unblock the Notifications