ಕಾಶ್ಮೀರಿ ಪಂಡಿತರಿಗೆ ಪುನರ್ವಸತಿ ಬೇಕೇ ವಿನಃ ಸಿನಿಮಾ ಅಲ್ಲ; ಅರವಿಂದ್ ಕೇಜ್ರಿವಾಲ್
ನವದೆಹಲಿ, ಮಾರ್ಚ್ 28: ಕಾಶ್ಮೀರದ ಪಂಡಿತರಿಗೆ ಪುನರ್ ವಸತಿ ಬೇಕಾಗಿದೆಯೇ ವಿನಃ, ಚಲನಚಿತ್ರವಲ್ಲ ಎನ್ನುವ ಮೂಲಕ ಭಾರತೀಯ ಜನತಾ ಪಕ್ಷಕ್ಕೆ ಆಪ್ ಮುಖ್ಯಸ್ಥ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿರುಗೇಟು ನೀಡಿದ್ದಾರೆ.
"ದಿ ಕಾಶ್ಮೀರ್ ಫೈಲ್ಸ್" ಸಿನಿಮಾವನ್ನು ಇಟ್ಟುಕೊಂಡು ಬಿಜೆಪಿಯವರು ರಾಜಕಾರಣ ಮಾಡುತ್ತಿದ್ದಾರೆ ಎಂದು ಅವರು ದೂಷಿಸಿದ್ದಾರೆ. "ಕಾಶ್ಮೀರದಲ್ಲಿ ದೊಡ್ಡ ದುರಂತ ಸಂಭವಿಸಿ 32 ವರ್ಷಗಳೇ ಕಳೆದಿವೆ. 32 ವರ್ಷಗಳ ನಂತರ ಕಾಶ್ಮೀರಿ ಪಂಡಿತರಿಗೆ ನಾವು ನಿಮಗಾಗಿ ಸಿನಿಮಾ ಮಾಡಿದ್ದೇವೆ ಎಂದು ಸರ್ಕಾರ ಹೇಳುತ್ತದೆ," ಎಂದರು.
ಕಾಶ್ಮೀರದ ಪಂಡಿತರಿಗೆ ಸಿನಿಮಾ ಬೇಕಾಗಿಲ್ಲ, ಪುನರ್ ವಸತಿ ಬೇಕಾಗಿದೆ. ನನ್ನ ಪ್ರಕಾರ, ಚಲನಚಿತ್ರವನ್ನು ತೆರಿಗೆ ಮುಕ್ತಗೊಳಿಸುವುದು ಇಲ್ಲಿ ಮುಖ್ಯವಲ್ಲ. ಅದು ಬಿಜೆಪಿಯ ಮಟ್ಟಿಗೆ ಮಾತ್ರ ಮುಖ್ಯವಾದಂತೆ ಗೋಚರಿಸುತ್ತಿದೆ. ಬೇಕಿದ್ದರೆ ನೀವು ಯಾವುದೇ ಕಾಶ್ಮೀರಿ ಪಂಡಿತರನ್ನು ಕೇಳಿ ನೋಡಿ, ಅವರಿಗೆ ಪುನರ್ ವಸತಿ ಬೇಕು. ಕಳೆದ 8 ವರ್ಷಗಳಿಂದಲೂ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿದೆ. ಆದರೆ ಇದುವರೆಗೂ ಕಾಶ್ಮೀರಿ ಪಂಡಿತರಿಗೆ ಏಕೆ ಪುನರ್ ವಸತಿ ಕಲ್ಪಿಸಲು ಸಾಧ್ಯವಾಗಲಿಲ್ಲ," ಎಂದು ಪ್ರಶ್ನೆ ಮಾಡಿದರು.

ಕಾಶ್ಮೀರಿ ಪಂಡಿತರ ಶಿಕ್ಷಕ ಹುದ್ದೆ ಖಾಯಂ:
"ದೆಹಲಿಗೆ ಬಂದ ಎಲ್ಲಾ ಕಾಶ್ಮೀರಿ ಪಂಡಿತರಿಗಾಗಿ ನಾವು ನಮ್ಮ ಕೈಲಾದಷ್ಟು ಸಹಾಯವನ್ನು ಮಾಡಿದ್ದೇವೆ. 1993ರಲ್ಲಿ ಅವರು ಗುತ್ತಿಗೆ ಶಿಕ್ಷಕರಾಗಿ ಕೆಲಸ ಮಾಡಿದರು. ಅಂದಿನಿಂದ ಹಂಗಾಮಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. ಈ ನಡುವೆ ಬಿಜೆಪಿ ಅಧಿಕಾರಕ್ಕೆ ಬಂತು, ಕಾಂಗ್ರೆಸ್ ಅಧಿಕಾರಕ್ಕೆ ಬಂತು, ಈ ಹಂಗಾಮಿ ಶಿಕ್ಷಕರನ್ನು ಯಾರೂ ಖಾಯಂ ಮಾಡಲಿಲ್ಲ. ನಾವು ಈ ಶಿಕ್ಷಕರನ್ನು ಕಾಯಂಗೊಳಿಸಿದ್ದೇವೆ," ಎಂದು ಅರವಿಂದ್ ಕೇಜ್ರಿವಾಲ್ ಹೇಳಿದರು.
ಕಾಶ್ಮೀರ ಫೈಲ್ಸ್ ಪ್ರಚಾರದ ಚಿತ್ರ ನೋಡಿದ್ದೀರಾ ಎಂದು ಕೇಳಿದಾಗ, "ನಾನು ಚಲನಚಿತ್ರವನ್ನು ನೋಡಿಲ್ಲ. ಆದರೆ ನಾನು ಹೇಳುತ್ತಿರುವುದು ಕಾಶ್ಮೀರಿ ಪಂಡಿತರಿಗೆ ಪುನರ್ವಸತಿ ಅಗತ್ಯವಿದೆಯೇ ಹೊರತು ಸಿನಿಮಾವಲ್ಲ," ಎಂದರು.
ದೆಹಲಿ ವಿಧಾನಸಭೆಯಲ್ಲಿ ಬಿಜೆಪಿ ನಾಯಕರನ್ನು ಲೇವಡಿ ಮಾಡಿದ ಕಾಶ್ಮೀರ ಫೈಲ್ಸ್ ಕುರಿತು ತಮ್ಮ ಹಿಂದಿನ ಹೇಳಿಕೆಯನ್ನು ಸ್ಪಷ್ಟಪಡಿಸಿದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ನಾನು ಬಿಜೆಪಿಯನ್ನು ನೋಡಿ ನಗುತ್ತಿದ್ದೆ. ಬಿಜೆಪಿಯವರು ನೌಟಂಕಿ ಕರ್ ರಹೀ ಹೈ (ನಾಟಕ ಮಾಡುತ್ತಿದ್ದಾರೆ)" ಎಂದರು.
ತೆರಿಗೆ ವಿನಾಯಿತಿ ಹಾಕಿ, ಯೂಟ್ಯೂಬ್ ಹಾಕಿ ಎಂದಿದ್ದ ಕೇಜ್ರಿವಾಲ್:
ಕೆಲವರು ಕಾಶ್ಮೀರಿ ಪಂಡಿತರ ಹೆಸರಿನಲ್ಲಿ ಕೋಟಿಗಟ್ಟಲೆ ಸಂಪಾದಿಸಿದ್ದಾರೆ ಮತ್ತು ನಿಮಗೆ ಕೇವಲ ಪೋಸ್ಟರ್‌ಗಳನ್ನು ಹಾಕುವ ಕೆಲಸವನ್ನು ನೀಡಲಾಗಿದೆ" ಎಂದು ವಿಧಾನಸಭೆಯಲ್ಲಿ ಬಿಜೆಪಿ ವಿರುದ್ಧ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಆಕ್ರೋಶ ವ್ಯಕ್ತಪಡಿಸಿದ್ದರು.
"ನಮ್ಮನ್ನು ತೆರಿಗೆಮುಕ್ತಗೊಳಿಸುವಂತೆ ಏಕೆ ಕೇಳುತ್ತಿದ್ದೀರಿ? ನಿಮಗೆ ಅಷ್ಟು ಉತ್ಸುಕವಾಗಿದ್ದರೆ, ವಿವೇಕ್ ಅಗ್ನಿಹೋತ್ರಿಯವರಿಗೆ ಕಾಶ್ಮೀರ ಫೈಲ್ ಸಿನಿಮಾವನ್ನು ಯೂಟ್ಯೂಬ್‌ನಲ್ಲಿ ಹಾಕಲು ಹೇಳಿ. ಆಗ ಎಲ್ಲಾ ಉಚಿತವಾಗಿರುತ್ತದೆ. ಎಲ್ಲರೂ ಅದನ್ನು ಒಂದು ದಿನದಲ್ಲಿ ನೋಡಬಹುದು,'' ಎಂಬ ಕೇಜ್ರಿವಾಲ್ ಮಾತು ದೆಹಲಿ ವಿಧಾನಸಭೆಯಲ್ಲಿ ನಗೆ ಚಟಾಕಿಯನ್ನು ಸಿಡಿಯುವಂತೆ ಮಾಡಿತು.
ದೇಶದಲ್ಲಿ ಸದ್ದು ಮಾಡುತ್ತಿರುವ "ದಿ ಕಾಶ್ಮೀರ್ ಫೈಲ್ಸ್"
ವಿವೇಕ್ ಅಗ್ನಿಹೋತ್ರಿ ನಿರ್ದೇಶಿಸಿದ ಈ ಚಲನಚಿತ್ರದ ಕಳೆದ ಮಾರ್ಚ್ 11ರಂದು ಬಿಡುಗಡೆಯಾಗಿತ್ತು. 1990ರ ದಶಕದ ವೇಳೆಯಲ್ಲಿ ಕಾಶ್ಮೀರಿ ಪಂಡಿತರನ್ನು ಹೇಗೆ ಕೊಲ್ಲಲಾಯಿತು, ಎಷ್ಟರ ಮಟ್ಟಿಗೆ ಕಿರುಕುಳ ನೀಡಲಾಯಿತು ಎಂಬುದರ ಬಗ್ಗೆ ಚಿತ್ರಿಸಲಾಗಿದೆ. ಅದಲ್ಲದೇ ರಾತ್ರೋರಾತ್ರಿ ಕಾಶ್ಮೀರಿ ಪಂಡಿತರನ್ನು ಮನೆಯಿಂದ ಓಡಿಸುವುದಕ್ಕೆ ನಡೆಸಿದ ದೌರ್ಜನ್ಯದ ಕುರಿತು ಎತ್ತಿ ತೋರಿಸಲಾಗಿದೆ. ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್, ಪಲ್ಲವಿ ಜೋಶಿ, ಮಿಥುನ್ ಚಕ್ರವರ್ತಿ ಹಾಗೂ ಪ್ರಕಾಶ್ ಬೆಳವಡಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.












Click it and Unblock the Notifications