ಮೇಕೆದಾಟು: ತಮಿಳುನಾಡು ವಿರುದ್ಧ ರಾಜ್ಯ ಸಂಸದರ ಪಕ್ಷಾತೀತ ಪ್ರತಿಭಟನೆ
ನವದೆಹಲಿ, ಡಿಸೆಂಬರ್ 27: ಮೇಕೆದಾಟು ಯೋಜನೆಗೆ ತಗಾದೆ ತೆಗೆದಿರುವ ತಮಿಳುನಾಡು ಸರ್ಕಾರದ ವಿರುದ್ಧ ರಾಜ್ಯದ ಸಂಸದರು ಪಕ್ಷಾತೀತವಾಗಿ ಗುರುವಾರ ಸಂಸತ್ ಭವನದ ಮುಂದೆ ಪ್ರತಿಭಟನೆ ನಡೆಸಲಿದ್ದಾರೆ.
ರಾಜ್ಯದ ಮಹತ್ವಾಕಾಂಕ್ಷಿ ಮೇಕೆದಾಟು ಯೋಜನೆಗೆ ತಮಿಳುನಾಡು ನಿರಂತರವಾಗಿ ಅಡ್ಡಿಪಡಿಸುತ್ತಿದೆ. ಯೋಜನೆಗೆ ಕೇಂದ್ರ ಜಲಸಂಪನ್ಮೂಲ ಇಲಾಖೆ ಅನುಮತಿ ನೀಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ತಮಿಳುನಾಡು, ಯೋಜನೆಗೆ ತಡೆ ನೀಡುವಂತೆ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿತ್ತು. ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಸದನದಲ್ಲಿ ಪ್ರತಿಭಟನೆ ನಡೆಸಿತ್ತು.
ಬುಧವಾರ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿದ್ದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಮೇಕೆದಾಟು ಯೋಜನೆಯ ಪ್ರಯೋಜನಗಳ ಬಗ್ಗೆ ವಿವರಿಸಿದ್ದರು. ಮೇಕೆದಾಟು ಯೋಜನೆಯಿಂದ ಎರಡೂ ರಾಜ್ಯಗಳಿಗೆ ಲಾಭವಾಗಲಿದೆ. ಅದರಲ್ಲಿಯೂ ತಮಿಳುನಾಡಿಗೇ ಅಧಿಕ ಲಾಭ ಎಂದು ಮನವರಿಕೆ ಮಾಡಿಕೊಟ್ಟಿದ್ದರು.

ರಾಜ್ಯದ ವಿವರಣೆ ನಡುವೆಯೂ ತಮಿಳುನಾಡು ಪದೇ ಪದೇ ತಕರಾರು ತೆಗೆಯುತ್ತಿದೆ. ಹೀಗಾಗಿ ತಮಿಳುನಾಡು ವಿರುದ್ಧ ಪ್ರತಿಭಟನೆಗೆ ರಾಜ್ಯದ ಎಲ್ಲ ಸಂಸದರೂ ಪಕ್ಷಾತೀತವಾಗಿ ಮುಂದಾಗಿದ್ದಾರೆ. ಸಂಸತ್ ಭವನದ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಲಿದ್ದಾರೆ.












Click it and Unblock the Notifications