ದೆಹಲಿ ಚುನಾವಣೆ; ಕೇಜ್ರಿವಾಲ್ ವಿರುದ್ಧ ಕಣಕ್ಕಿಳಿದ ಕನ್ನಡಿಗ
Recommended Video
ನವದೆಹಲಿ, ಜನವರಿ 21 : ದೆಹಲಿ ವಿಧಾನಸಭೆ ಚುನಾವಣೆ ಕಣ ರಂಗೇರುತ್ತಿದೆ. ಆಮ್ ಆದ್ಮಿ ಪಕ್ಷದ ಮುಖ್ಯಸ್ಥ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ನವ ದೆಹಲಿ ಕ್ಷೇತ್ರದಿಂದ ಕನ್ನಡಿಗರೊಬ್ಬರು ಕಣಕ್ಕಿಳಿದಿದ್ದಾರೆ.
ಶ್ರೀ ವೆಂಕಟೇಶ್ವರ್ ಮಹಾ ಸ್ವಾಮೀಜಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರವನ್ನು ಸಲ್ಲಿಸಿದ್ದಾರೆ. ಫೆಬ್ರವರಿ 8ರಂದು ದೆಹಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಫೆಬ್ರವರಿ 11ರಂದು ಫಲಿತಾಂಶ ಪ್ರಕಟವಾಗಲಿದೆ.
ಬಿಜೆಪಿಯಿಂದ ಸುನೀಲ್ ಯಾದವ್, ಕಾಂಗ್ರೆಸ್‌ನಿಂದ ರೂಮೇಶ್ ಸಬರ್‌ವಾಲ್ ಅರವಿಂದ್ ಕೇಜ್ರಿವಾಲ್ ಎದುರಾಳಿಗಳು. ಇವರ ನಡುವೆ ಪಕ್ಷೇತರ ಅಭ್ಯರ್ಥಿಯಾಗಿ ಶ್ರೀ ವೆಂಕಟೇಶ್ವರ್ ಮಹಾ ಸ್ವಾಮೀಜಿ ಕಣಕ್ಕಿಳಿದಿದ್ದು, ಈಗಾಗಲೇ ನಾಮಪತ್ರ ಸಲ್ಲಿಸಿದ್ದಾರೆ.
ಗ್ರಾಮ ಪಂಚಾಯಿತಿ, ಲೋಕಸಭೆ, ರಾಜ್ಯಸಭೆ ಚುನಾವಣೆಗೂ ಸ್ಪರ್ಧಿಸಿದ್ದ ಶ್ರೀ ವೆಂಕಟೇಶ್ವರ್ ಮಹಾ ಸ್ವಾಮೀಜಿ ಮಹಾರಾಷ್ಟ್ರ, ಗುಜರಾತ್, ಗೋವಾ ವಿಧಾನಸಭೆ ಚುನಾವಣೆಯಲ್ಲೂ ಸ್ಪರ್ಧಿಸಿ ಸೋತಿದ್ದಾರೆ. ಇದು ಅವರ 18ನೇ ಚುನಾವಣೆ.

ದೆಹಲಿ ಚುನಾವಣೆ
ಶ್ರೀ ವೆಂಕಟೇಶ್ವರ್ ಮಹಾ ಸ್ವಾಮೀಜಿ ಕರ್ನಾಟಕದ ಬಿಜಾಪುರ ಜಿಲ್ಲೆಯ ಚಡಚಣ ಮೂಲದವರು. ಸ್ವಾಮೀಜಿಗಳ ಪೂರ್ವಾಶ್ರಮದ ಹೆಸರು ದೀಪಕ್. ಈಗಾಗಲೇ ಹಲವಾರು ಚುನಾವಣಾ ಕಣಕ್ಕಿಳಿದಿರುವ ಇವರು ಈಗ ದೆಹಲಿ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ವಿರುದ್ಧ ನವದೆಹಲಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ.

ಯಾರೂ ಬಿ. ಫಾರಂ ಕೊಟ್ಟಿಲ್ಲ
ಶ್ರೀ ವೆಂಕಟೇಶ್ವರ್ ಮಹಾ ಸ್ವಾಮೀಜಿ ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಟಿಕೆಟ್ ಕೇಳಿದ್ದರು. ಆದರೆ, ಯಾರೂ ಟಿಕೆಟ್ ಕೊಡದ ಕಾರಣ ಪಕ್ಷೇತರ ಅಭ್ಯರ್ಥಿಯಾಗಿ ಜನವರಿ 14ರಂದು ನಾಮಪತ್ರವನ್ನು ಸಲ್ಲಿಸಿದ್ದಾರೆ. 99 ಸಾವಿರ ರೂ. ಸಾಲ ಇದೆ ಎಂದು ಅಫಿಡೆವಿಟ್ ಸಲ್ಲಿಕೆ ಮಾಡಿದ್ದಾರೆ.
ಗ್ಯಾಲರಿ: ದಿಲ್ಲಿ ಗಲ್ಲಿಗಲ್ಲಿಗಳಲ್ಲಿ ಚುನಾವಣೆ ರಂಗೋ ರಂಗು

ನಿರುದ್ಯೋಗ ಬಗೆಹರಿಯಬೇಕು
ಸಮಾಜದಲ್ಲಿರುವ ಭ್ರಷ್ಟಾಚಾರ ಅಂತ್ಯವಾಗಬೇಕು. ನಿರುದ್ಯೋಗ ಸಮಸ್ಯೆ ಬಗೆಹರಿಯಬೇಕು. ಖಾದಿ ಹಾಕಿರುವವರು ಸಾಮಾಜಿ ಕಾರ್ಯಗಳನ್ನು ಮರೆತಿರುವ ಹಿನ್ನಲೆಯಲ್ಲಿ ಅಭಿವೃದ್ಧಿ ಪರ ಕೆಲಸಗಳನ್ನು ಮಾಡಲು ಚುನಾವಣಾ ಕಣಕ್ಕೆ ಇಳಿದಿದ್ದೇನೆ ಎಂದು ಸ್ವಾಮೀಜಿ ಹೇಳಿದ್ದಾರೆ.

ಅರವಿಂದ್ ಕೇಜ್ರಿವಾಲ್ ನಾಮಪತ್ರ
ಫೆಬ್ರವರಿ 8ರಂದು ನಡೆಯುವ ದೆಹಲಿ ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನ. ಅರವಿಂದ್ ಕೇಜ್ರಿವಾಲ್ ಇಂದು ತಮ್ಮ ನಾಮಪತ್ರವನ್ನು ಸಲ್ಲಿಕೆ ಮಾಡಿದ್ದಾರೆ.












Click it and Unblock the Notifications