ಮೇ 20ಕ್ಕೆ ಸಾರಿಗೆ ಮುಷ್ಕರ: ಸೇವೆಗೆ ಗೈರಾದ್ರೆ ಶಿಸ್ತು ಕ್ರಮ: ಪ್ರತಿಭಟನಾಕಾರರಿಗೆ ಸರ್ಕಾರ ವಾರ್ನಿಂಗ್
ಬೆಂಗಳೂರು: ಸರ್ಕಾರದ ವೇತನ ಪರಿಷ್ಕರಣೆ, ಹಿಂಬಾಕಿ ಬಿಡುಗಡೆ ನಿರ್ಧಾರ ಒಪ್ಪದೇ, ತಮ್ಮ ಎಲ್ಲ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ನೌಕರರು ಮೇ 20ರಂದು ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ಮುಂದಾಗಿದೆ. ಇತ್ತ ರಾಜ್ಯ ಸರ್ಕಾರ ಕಠಿಣ ನಿಯಮಗಳ ಜಾರಿ, ಎಚ್ಚರಿಕೆ ಮೂಲಕ ಪ್ರತಿಭಟನೆ ಹತ್ತಿಕ್ಕಲು ಮುಂದಾಗಿದೆ. ಸೇವೆ ಗೈರಾದರೆ ಶಿಸ್ತು ಕ್ರಮ, 'ನೋ ವರ್ಕ್-ನೋ ಪೇ' ಜಾರಿಗೆ ಮುಂದಾಗಿದೆ. ನೌಕರರಿಗೆ ಒಂದಷ್ಟು ಎಚ್ಚರಿಕೆಗಳನ್ನು ನೀಡಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯಿಂದ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಲಾಗಿದೆ. ಈ ಸಂಬಂಧ ಸರ್ಕಾರಕ್ಕೆ ಮುಷ್ಕರ ನೋಟಿಸ್ ನೀಡಿದೆ. ಇದಿನ್ನು ರಾಜಿಸಂಧಾನ ಹಂತದಲ್ಲಿ ಈ ವೇಳೆ ನೀವು ಮುಷ್ಕರ ನಡೆಸುವಂತಿಲ್ಲ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಅಧಿಕಾರಿಗಳು ಎಚ್ಚರಿಸಿದ್ದಾರೆ.

'ನೋ ವರ್ಕ್ ನೋ ಪೇ'
ಸರ್ಕಾರಚ ಸೂಚನೆಗಳನ್ನು ಪಾಲಿಸದೇ ಮುಷ್ಕರದಲ್ಲಿ ಮೇ 20ರಂದು ಪಾಲ್ಗೊಂಡರೆ, ಸೇವೆಗೆ ಗೈರಾದರೆ ಅಂತಹ ನೌಕರರ ವಿರುದ್ಧ 'ನೋ ವರ್ಕ್ ನೋ ಪೇ' (ಕೆಲಸ ಮಾಡದಿದ್ದಾಗ ವೇತನವಿಲ್ಲ) ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ.
ಮುಷ್ಕರಕ್ಕೆ ಸಜ್ಜಾದ ಸಾರಿಗೆ ನಿಗಮದ ನೌಕರರಿಗೆ ಒಂದಷ್ಟು ವಿಷಯಗಳನ್ನು ತರಲಾಗಿದೆ. ಸಾರಿಗೆ ಸಂಸ್ಥೆಗಳು ಜನಸಾಮಾನ್ಯರಿಗೆ ಸಮರ್ಪಕವಾದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಾಗಿದೆ. ಜವಾಬ್ದಾರಿಗೆ ಅನುಗುಣವಾಗಿ ಸರ್ಕಾರ 'ಕರ್ನಾಟಕ ಅಗತ್ಯ ಸೇವಾ ನಿರ್ವಹಣೆ ಕಾಯಿದೆ -2013 (Karnataka Act No-25/2015) ಜಾರಿಗೊಳಿಸಿದೆ. ಹೀಗಾಗಿ ಸಾರಿಗೆ ನಿಗಮಗಳ ನೌಕರರು ಯಾವುದೇ ಮುಷ್ಕರ ಹೂಡುವಂತಿಲ್ಲ. ವ್ಯಕ್ತಿ, ಸಂಘ ಸಂಸ್ಥೆ ಅಥವಾ ವ್ಯಕ್ತಿಗಳು ಮುಷ್ಕರ ಹೂಡುವಂತೆ ಪ್ರಚೋದಿಸುವಂತಿಲ್ಲ ಎಂದು ಹೇಳಿದೆ.
ರಾಜ್ಯದ ನಾಲ್ಕು ರಸ್ತೆ ಸಾರಿಗೆ ನಿಗಮಗಳ ಸೇವೆಯನ್ನು "ಸಾರ್ವಜನಿಕ ಉಪಯುಕ್ತ ಸೇವಾ ಸಂಸ್ಥೆ" ಎಂದು ಘೋಷಿಸಿದೆ. ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯವರು ಆಡಳಿತ ವರ್ಗಕ್ಕೆ ನೀಡಿರುವ ಮುಷ್ಕರದ ನೋಟಿಸ್ ಸಂಬಂಧಪಟ್ಟ ವಿವಾದವು ಸದ್ಯ ರಾಜ್ಯದ ಕಾರ್ಮಿಕ ಆಯುಕ್ತರ ಮುಂದೆ ರಾಜೀ ಸಂಧಾನದಲ್ಲಿದೆ. ನಿಯಮಗಳ ಪ್ರಕಾರ, ನೋಟಿಸ್ ಸಂಬಂಧಿಸಿದ ವಿವಾದ, ವಿಷಯ ರಾಜೀ ಸಂಧಾನದಲ್ಲಿರುವಾಗ ನೌಕರರು ಮುಷ್ಕರ ಹೂಡುವಂತಿಲ್ಲ. ಆದ್ದರಿಂದ ನೌಕರರು ಮುಷ್ಕರದಲ್ಲಿ ಪಾಲ್ಗೊಳ್ಳದೇ ಸೇವೆ ಹಾಜರಾಗುವಂತೆ ಸರ್ಕಾರ ವಿನಂತಿಸಿಕೊಂಡಿದೆ.
ಸಾರಿಗೆ ನೌಕರರಿಗೆ ಕಟ್ಟುನಿಟ್ಟಿನ ನಿರ್ದೇಶನ
* ಮೇ 20, 2026 ರಿಂದಲೇ ಜಾರಿಗೆ ಬರುವಂತೆ ಮುಷ್ಕರದ ಅವಧಿಯಲ್ಲಿ ಅನುಸೂಚಿಗಳ ಕಾರ್ಯಾಚರಣೆಯಲ್ಲಿ ಯಾವುದೇ ವ್ಯತ್ಯಯ ಆಗದಂತೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು.
* ಮೇ 20 ರಿಂದ ಅನ್ವಯವಾಗುವಂತೆ ಅನಿವಾರ್ಯ ಸಂದರ್ಭ ಬಿಟ್ಟು ಯಾವುದೇ ರೀತಿಯ ರಜೆ ನೀಡದಂತೆ ಹಾಗೂ ಗೈರಾದವರಿಗೆ ವೇತನ ನೀಡದಂತೆ ನಿಗಮದ ಮುಖ್ಯಸ್ಥರಿಗೆ ಸರ್ಕಾರ ಸೂಚನೆ. ವಾರದ ರಜೆ ಮತ್ತು ಧೀರ್ಘಾವಧಿ ರಜೆಯಲ್ಲಿರುವ ನೌಕರರಿಗೆ ಈ ಸೂಚನೆ ಅನ್ವಯಿಸುವುದಿಲ್ಲ ಎಂದು ತಿಳಿಸಿದೆ.
* ಮುಷ್ಕರ ದಿನ ಮತ್ತು ನಂತರದ ದಿನಗಳಂದು ಕರ್ತವ್ಯಕ್ಕೆ ಗೈರುಹಾಜರಾಗುವ ನೌಕರರ ಪಟ್ಟಿಯಲ್ಲಿ ದಿನವಹಿ/ಘಟಕವಾರು/ವರ್ಗಾವಾರು ಸಿದ್ಧಪಡಿಸಿ, ಮೇಲೆ ತಿಳಿಸಿರುವಂತೆ ಕೆಲಸ ಮಾಡದಿದ್ದಾಗ ವೇತನವಿಲ್ಲ ಎಂಬ ತತ್ವದನ್ವಯ ವೇತನ ಕಡಿತಗೊಳಿಸುವುದು. ಹೈಕೋರ್ಟ್ ತೀರ್ಪಿನಂತೆ ಕರ್ತವ್ಯಕ್ಕೆ ಗೈರುಹಾಜರಾದ ನೌಕರರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.














Click it and Unblock the Notifications