SSLC Results: ಎಸ್‌ಎಸ್‌ಎಲ್‌ಸಿಯಲ್ಲಿ ಒಂದು ಅಂಕ ಪಡೆದ ತೀರ್ಥಹಳ್ಳಿಯ ವಿದ್ಯಾರ್ಥಿನಿ ರಾಜ್ಯಕ್ಕೆ ಟಾಪರ್
SSLC Results 2026: ತೀರ್ಥಹಳ್ಳಿಯ ವಾಗ್ದೇವಿ ಶಾಲೆಯ ವಿದ್ಯಾರ್ಥಿನಿ ಅನಘಾ ಕೆ.ಎಸ್. ಅವರು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 624 ಅಂಕಗಳನ್ನು ಗಳಿಸಿ ದ್ವಿತೀಯ ಸ್ಥಾನ ಪಡೆದಿದ್ದರು. ಇದೀಗ ಮರುಮೌಲ್ಯಮಾಪನದ ಬಳಿಕ ಅವರು ರಾಜ್ಯ ಟಾಪರ್ ಹೊರಹೊಮ್ಮಿದ್ದಾರೆ.
ಇತ್ತೀಚೆಗಷ್ಟೇ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಆ ವೇಳೆ ಅನಘಾ ಅವರು 625ಕ್ಕೆ 624 ಅಂಕಗಳನ್ನು ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದರು. ಆದರೆ ಮರುಮೌಲ್ಯಮಾಪನದ ನಂತರ ಕಳೆದುಕೊಂಡಿದ್ದ ಒಂದು ಅಂಕವನ್ನು ಮರಳಿ ಪಡೆಯುವ ಮೂಲಕ ಈಗ 625ಕ್ಕೆ 625 ಅಂಕಗಳೊಂದಿಗೆ ರಾಜ್ಯಕ್ಕೆ ಟಾಪರ್ ಆಗಿ ಗಮನ ಸೆಳೆದಿದ್ದಾರೆ.

ಎಸ್‌ಎಸ್‌ಎಲ್‌ಸಿಯಲ್ಲಿ ಅನಘಾ ರಾಜ್ಯಕ್ಕೆ ಪ್ರಥಮ
ಶಿವಕುಮಾರ್ ಮತ್ತು ಮಂಗಳಾ ಶಿಕ್ಷಕರ ದಂಪತಿಯ ಪುತ್ರಿಯಾದ ಅನಘಾ, ಸಮಾಜ ವಿಜ್ಞಾನ ವಿಷಯವನ್ನು ಹೊರತುಪಡಿಸಿ ಉಳಿದೆಲ್ಲಾ ವಿಷಯಗಳಲ್ಲಿ 100ಕ್ಕೆ 100 ಅಂಕಗಳನ್ನು ಗಳಿಸಿದ್ದರು. ಸಮಾಜ ವಿಜ್ಞಾನದಲ್ಲಿ ಅವರಿಗೆ 99 ಅಂಕಗಳು ಬಂದಿದ್ದವು.
ತಮಗೆ ಆ ವಿಷಯದಲ್ಲೂ ಪೂರ್ಣ ಅಂಕಗಳು ಬರಬೇಕೆಂದು ಆತ್ಮವಿಶ್ವಾಸ ಹೊಂದಿದ್ದ ಅನಘಾ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದರು. ಶನಿವಾರ (ಮೇ 16, 2026) ಪ್ರಕಟವಾದ ಪರಿಷ್ಕೃತ ಫಲಿತಾಂಶದಲ್ಲಿ ಅವರಿಗೆ ಒಂದು ಅಂಕ ಹೆಚ್ಚುವರಿಯಾಗಿ ಸಿಕ್ಕಿದ್ದು, ಒಟ್ಟು ಅಂಕಗಳು 625ಕ್ಕೆ ಏರಿವೆ. ಈ ಮೂಲಕ ಅವರು ರಾಜ್ಯಕ್ಕೆ ಪ್ರಥಮ ಸ್ಥಾನ ಬಂದಿದ್ದಾರೆ.
ವಿದ್ಯಾರ್ಥಿನಿ ಅನಘಾ ಹೇಳಿದ್ದೇನು?
"ಸಮಾಜ ವಿಜ್ಞಾನದಲ್ಲಿ 99 ಅಂಕ ಬಂದಾಗ ನನಗೆ ಸ್ವಲ್ಪ ನಿರಾಸೆಯಾಗಿತ್ತು. ಬಳಿಕ ಇನ್ನೊಂದು ಅಂಕ ಬರಬಹುದು ಎಂಬ ಭರವಸೆಯೊಂದಿಗೆ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದೆ. ಕೊನೆಗೂ ರಾಜ್ಯಕ್ಕೆ ಟಾಪರ್ ಆಗಬೇಕೆಂಬ ನನ್ನ ಕನಸು ನನಸಾಗಿದೆ," ಎಂದು ಅನಘಾ ಸಂತಸ ಹಂಚಿಕೊಂಡಿದ್ದಾರೆ. ಇದೇ ವೇಳೆ ಅವರು ತಮ್ಮ ಈ ಸಾಧನೆಗೆ ಬೆಂಬಲ ನೀಡಿದ ಪೋಷಕರು ಮತ್ತು ಶಿಕ್ಷಕರಿಗೆ ಧನ್ಯವಾದ ಅರ್ಪಿಸಿದ್ದಾರೆ.
ಪೂರ್ತಿ ಅಂಕ ಪಡೆದರೂ ಅನಘಾ ಅವರು ಬೇಸರ ವ್ಯಕ್ತಪಡಿಸಿದ್ದಾರೆ. "ಕಳೆದ ತಿಂಗಳು ಅಧಿಕೃತವಾಗಿ ಫಲಿತಾಂಶಗಳು ಪ್ರಕಟವಾದಾಗಲೇ ಈ ಅಂಕ ಬಂದಿದ್ದರೆ ನನಗೂ ಮತ್ತು ನಮ್ಮ ಶಾಲೆಯ ಶಿಕ್ಷರಿಗೆ ಇನ್ನೂ ಹೆಚ್ಚಿನ ಸಂತೋಷವಾಗುತ್ತಿತ್ತು," ಎಂದು ಅವರು ಹೇಳಿದರು. ಒಟ್ಟಿನಲ್ಲಿ ಅನಘಾ ಅವರು ಮರುಮೌಲ್ಯಮಾನದಿಂದ ಬಂದ ಒಂದು ಅಂಕದಿಂದ ರಾಜ್ಯಕ್ಕೆ ಟಾಪರ್ ಆಗಿದ್ದಾರೆ.
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಏಪ್ರಿಲ್ 23ರಂದು ಪ್ರಕಟವಾಗಿತ್ತು. ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಸುದ್ದಿಗೋಷ್ಠಿ ನಡೆಸಿ ಅಧಿಕೃತವಾಗಿ ಫಲಿತಾಂಶವನ್ನು ಪ್ರಕಟ ಮಾಡಿದ್ದರು. ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಮಾರ್ಚ್ 18 ರಿಂದ ಏಪ್ರಿಲ್ 2, 2026ರವರೆಗೆ ನಡೆದಿದ್ದವು.












Click it and Unblock the Notifications