ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ (ತಿದ್ದುಪಡಿ) ಕಾಯ್ದೆ 2021ಗೆ ಅಂಗೀಕಾರ
ನವದೆಹಲಿ, ಫೆಬ್ರುವರಿ 08: ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ (ತಿದ್ದುಪಡಿ) ಕಾಯ್ದೆ 2021ಗೆ ರಾಜ್ಯ ಸಭೆಯಲ್ಲಿ ಸೋಮವಾರ ಅಂಗೀಕಾರ ನೀಡಲಾಯಿತು.
ಜಮ್ಮು ಮತ್ತು ಕಾಶ್ಮೀರ ನಾಗರಿಕ ಸೇವೆಗಳ ಅಧಿಕಾರಿಗಳನ್ನು ಅರುಣಾಚಲ ಪ್ರದೇಶ, ಗೋವಾ, ಮಿಜೋರಾಂ ಕೇಂದ್ರಾಡಳಿತಪ್ರದೇಶಗಳಲ್ಲಿ ವಿಲೀನಗೊಳಿಸುವ ಈ ತಿದ್ದುಪಡಿಗೆ ರಾಜ್ಯಸಭೆಯಲ್ಲಿ ಅಂಗೀಕಾರ ದೊರಕಿತು.
ಈ ಕಾಯ್ದೆಯನ್ನು ಕಳೆದ ವಾರ ಸಂಸತ್ತಿನಲ್ಲಿ ಮಂಡಿಸಲಾಗಿತ್ತು. ರಾಜ್ಯ ಗೃಹ ಖಾತೆ ಸಚಿವ ಜಿ ಕೃಷ್ಣನ್ ರೆಡ್ಡಿ ಈ ಕಾಯ್ದೆಯನ್ನು ಮಂಡಿಸಿದ್ದರು. ನಂತರ ಫೆಬ್ರುವರಿ 5ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿದ್ದುಪಡಿ ಕಾಯ್ದೆ ಅಗತ್ಯದ ಕುರಿತು ವಿವರ ನೀಡಿ ಮಂಡನೆ ಮಾಡಿದ್ದರು.

ಇದೀಗ ಭಾರತದ ಸಂವಿಧಾನವು ಜಮ್ಮು ಹಾಗೂ ಕಾಶ್ಮೀರಕ್ಕೆ ಸಂಪೂರ್ಣ ಅನ್ವಯವಾಗುತ್ತದೆ ಎಂದು ಕೃಷ್ಣನ್ ರೆಡ್ಡಿ ಹೇಳಿದ್ದಾರೆ. ಸುಮಾರು 170 ಕೇಂದ್ರ ಕಾನೂನುಗಳು ಜಮ್ಮು ಹಾಗೂ ಕಾಶ್ಮೀರದಲ್ಲಿ ಅನುಷ್ಠಾನಗೊಳ್ಳಲಿವೆ. ಜಮ್ಮು ಹಾಗೂ ಕಾಶ್ಮೀರ ಮತ್ತು ಲೇಹ್ ಗಳಲ್ಲಿನ ಕೇಂದ್ರಾಡಳಿತ ಪ್ರದೇಶಗಳಲ್ಲಿ ಅಧಿಕಾರಿಗಳ ಬಲವನ್ನು ಹೆಚ್ಚಿಸಲಿದೆ ಎಂದು ತಿಳಿಸಿದ್ದಾರೆ.
ಆಗಸ್ಟ್ 5 ರಂದು ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ಮಸೂದೆ 2019 ಅನ್ನು ರಾಜ್ಯಸಭೆಯಲ್ಲಿ ಅಂಗೀಕರಿಸಿತ್ತು. ಆಗಸ್ಟ್ 6 ರಂದು ಲೋಕಸಭೆಯಲ್ಲಿ ಕಾಯ್ದೆಗೆ ಅಂಗೀಕಾರ ದೊರೆತಿತ್ತು. ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಅನುಚ್ಛೇದ 370 ಮತ್ತು 35 ಎ ರದ್ದುಗೊಳಿಸಿ ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ 2019 ಮಸೂದೆಯನ್ನು ಮಂಡಿಸಲಾಗಿತ್ತು.












Click it and Unblock the Notifications