ಪಿ ಚಿದಂಬರಂ ವಶಕ್ಕೆ ಪಡೆಯಲು 'ಇಡಿ' ಅನುಮತಿ ಕೊಟ್ಟ ಕೋರ್ಟ್
ನವದೆಹಲಿ, ಅಕ್ಟೋಬರ್ 15: ಐಎನ್ಎಕ್ಸ್ ಮೀಡಿಯಾ ಹಗರಣದಲ್ಲಿ ತಿಹಾರ್ ಜೈಲಿನಲ್ಲಿರುವ ಕೇಂದ್ರದ ಮಾಜಿ ಸಚಿವ ಪಿ ಚಿದಂಬರಂ ಅವರಿಗೆ ದೆಹಲಿ ವಿಶೇಷ ನ್ಯಾಯಾಲಯದಿಂದ ಮಂಗಳವಾರದದು ಕಹಿ ಸುದ್ದಿ ಸಿಕ್ಕಿದೆ.
ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಸಿಬಿಐ ಕಸ್ಟಡಿಯಲ್ಲಿರುವ ಕೇಂದ್ರದ ಮಾಜಿ ವಿತ್ತ ಸಚಿವ 74 ವರ್ಷ ವಯಸ್ಸಿನ ಪಿ ಚಿದಂಬರಂ ಅವರನ್ನು ಬಂಧಿಸಿ ವಿಚಾರಣೆಗೊಳಪಡಿಸಲು ಜಾರಿ ನಿರ್ದೇಶನಾಲಯವು ಅರ್ಜಿ ಹಾಕಿತ್ತು. ಇಡಿ ಅರ್ಜಿಗೆ ದೆಹಲಿ ಕೋರ್ಟ್ ಅಸ್ತು ಎಂದಿದೆ.
ಹೀಗಾಗಿ, ಪಿ ಚಿದಂಬರಂ ಅವರನ್ನು ಬುಧವಾರ(ಅಕ್ಟೋಬರ್ 16) ರಂದು ಬೆಳಗ್ಗೆ ಬಂಧಿಸಿ, ಕೋರ್ಟ್ ಮುಂದೆ ಹಾಜರುಪಡಿಸಿ,ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲು ಜಾರಿನಿರ್ದೇಶನಾಲಯವು ಮುಂದಾಗಿದೆ.

ಇದಕ್ಕೂ ಮುನ್ನ ಈ ಹಿಂದಿನ ವಾದ ಪ್ರತಿವಾದ ವೇಳೆ, ತಿಹಾರ್ ಜೈಲು, ಚಿದಂಬರಂ ಇರುವ ಸೆಲ್ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ಚಿದಂಬರಂ ಪರ ವಕೀಲ ಅಭಿಶೇಕ್ ಮನು ಸಿಂಘ್ವಿ ಅವರು ವಾದ ಮಂಡಿಸಿದರು. ಚಿದಂಬರಂ ಅವರಿರುವ ಸೆಲ್ ನಲ್ಲಿ ಕೂರಲು ಚೇರಿಲ್ಲ. ತಲೆಗೆ ದಿಂಬಿಲ್ಲ ನನ್ನ ಕಕ್ಷಿದಾರರಿಗೆ 74 ವರ್ಷ ವಯಸ್ಸಾಗಿದೆ ಎಂದು ವಾದಿಸಿದ್ದರು.
ಆಗಸ್ಟ್ 21ರಂದು ದೆಹಲಿ ನಿವಾಸದಲ್ಲಿದ್ದ ಚಿದಂಬರಂರನ್ನು ಸಿಬಿಐ ಅಧಿಕಾರಿಗಳು ತಮ್ಮ ವಶಕ್ಕೆ ತೆಗೆದುಕೊಂಡಿದ್ದು, 11 ದಿನಗಳ ಕಾಲ ಕಸ್ಟಡಿಯಲ್ಲಿಟ್ಟುಕೊಂಡು ವಿಚಾರಣೆ ನಡೆಸಿದ್ದಾರೆ. ಅವರಿಗೆ ಭದ್ರತೆ ಬೇಕಿದೆ, ತಿಹಾರ್ ಜೈಲಿಗೆ ಕಳಿಸದಿದ್ದರೆ ಗೃಹಬಂಧನ ವಿಧಿಸಿ' ಎಂದು ಕಪಿಲ್ ಸಿಬಾಲ್ ಈ ಮುಂಚೆ ವಾದಿಸಿದ್ದರು. "ಆದರೆ ಗೃಹ ಬಂಧನವನ್ನು ರಾಜಕೀಯ ಕೈದಿಗಳಿಗೆ ಬಳಸುವ ವಿಧಾನವಾಗಿದೆ, ಇದು ಭ್ರಷ್ಟಾಚಾರ ಪ್ರಕರಣವಾಗಿದ್ದು, ಚಿದಂಬರಂ ಜಾಮೀನಿಗಾಗಿ ಅರ್ಜಿ ಸಲ್ಲಿಸಬಹುದು' ಎಂದು ಸುಪ್ರೀಂಕೋರ್ಟ್ ಸೂಚಿಸಿತ್ತು. ಅದರಂತೆ, ಚಿದಂಬರಂ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆದು, ಅರ್ಜಿ ತಿರಸ್ಕಾರಗೊಂಡಿದೆ.












Click it and Unblock the Notifications