ಗೆಲುವಿನ ಗುಟ್ಟು ಬಿಚ್ಚಿಟ್ಟ ಎಎಪಿ ರಾಷ್ಟ್ರೀಯ ವಕ್ತಾರ ಪೃಥ್ವಿ ರೆಡ್ಡಿ
ಬೆಂಗಳೂರು, ಫೆ. 11: 'ಜನ ನಮ್ಮ ಮೇಲೆ ಭರವಸೆ ಇಟ್ಟು ಈ ಅಭೂತಪೂರ್ವ ಗೆಲುವು ನೀಡಿದ್ದಾರೆ. ಅವರ ನಂಬಿಕೆಯನ್ನು ಉಳಿಸಿಕೊಳ್ಳಬೇಕಾಗಿದೆ. ಗೆಲುವಿಗೆ ನಮ್ಮ ಸ್ಫೂರ್ತಿದಾಯಕ ನಾಯಕ ಅರವಿಂದ ಕೇಜ್ರಿವಾಲ್ ಅವರೇ ಕಾರಣ' ಹೀಗೆ ಹೇಳಿದವರು ಆಮ್ ಆದ್ಮಿ ಪಕ್ಷದ ವಕ್ತಾರ ಪೃಥ್ವಿ ರೆಡ್ಡಿ.
ಒನ್ ಇಂಡಿಯಾಕ್ಕೆ ನೀಡಿದ ಸಂದರ್ಶನದಲ್ಲಿ ರೆಡ್ಡಿ ದೆಹಲಿ ಚುನಾವಣೆಯ ಚಿತ್ರಣ ತೆರೆದಿಟ್ಟರು. ಬಿಜೆಪಿ ಮತ್ತು ಇತರೆ ಪಕ್ಷಗಳ ಆರ್ಭಟದ ನಡುವೆಯೂ ಆಮ್ ಆದ್ಮಿ ಗೆದ್ದ ಬಗೆಯನ್ನು ವಿವರಿಸಿದರು.[ಎಎಪಿ ಗೆಲುವಿಗೆ ಕಾರಣವಾದ 10 ಅಂಶಗಳು ಯಾವವು?]

ರೆಡ್ಡಿ ಸಂದರ್ಶನದ ಪೂರ್ಣಪಾಠ ಇಲ್ಲಿದೆ
ನೀವು ಇಷ್ಟು ದೊಡ್ಡ ಮಟ್ಟದ ಗೆಲುವನ್ನು ನಿರೀಕ್ಷೆ ಮಾಡಿದ್ರಾ?
ರೆಡ್ಡಿ : ನಾವು ಬಹುಮತದ ಜಯಕ್ಕೆ ಅರ್ಹರು ಎಂಬುದರ ಮೇಲೆ ವಿಶ್ವಾಸ ಇಟ್ಟುಕೊಂಡಿದ್ದೆವು. ಆದರೆ ದೆಹಲಿ ಜನ ಎಲ್ಲರಿಗೂ ಆಶ್ಚರ್ಯನೀಡುವಂಥ ಗೆಲುವು ನೀಡಿದ್ದಾರೆ.
ಆಮ್ ಆದ್ಮಿ ಪಕ್ಷದ ತಂತ್ರಗಳು ಏನಾಗಿದ್ದವು?
ರೆಡ್ಡಿ : ನಾವು ಯಾವುದೇ ರೀತಿಯ ವಿಶೇಷ ತಂತ್ರಗಳನ್ನು ಬಳಸಲಿಲ್ಲ. ಸಾಮಾನ್ಯ ಜನರನ್ನೇ ನಮ್ಮೊಳಗೆ ಒಬ್ಬರನ್ನಾಗಿಸಿಕೊಂಡೆವು. ಜನರಿಗೆ ಅಗತ್ಯವಾದ ಪ್ರಣಾಳಿಕೆ ಬಿಡುಗಡೆ ಮಾಡಿದ್ದು ನೆರವಾಯಿತು.[ಕಿರಣ್ ಬೇಡಿ ಕರೆತಂದಿದ್ದು ಬಿಜೆಪಿ ಮಾಡಿದ ದೊಡ್ಡ ತಪ್ಪು]
ಹಿಂದಿನ 49 ದಿನಗಳ ಆಡಳಿತವನ್ನು ಇಟ್ಟುಕೊಂಡೆ ಎಲ್ಲರೂ ಟೀಕೆ ಮಾಡಿದರು. ಆದರೆ ಆ ಅತ್ಯಲ್ಪ ಅವಧಿಯಲ್ಲಿ ಆಮ್ ಆದ್ಮಿ ಪಕ್ಷ ನಡೆದುಕೊಂಡ ರೀತಿ ಜನರಿಗೆ ಇಷ್ಟವಾಗಿತ್ತು ಎಂಬುದಕ್ಕೆ ಈ ಫಲಿತಾಂಶವೇ ಉತ್ತರ.
ಚುನಾವಣಾ ಕ್ಯಾಂಪೇನ್ ನ ವಿಶೇಷತೆಯೇನು?
ರೆಡ್ಡಿ : ಇದು ಬಹಳ ಸರಳ ಸಂಗತಿ. ಈಗ ಸಿಕ್ಕಿರುವುದು ಪ್ರಜಾಪ್ರಭುತ್ವಕ್ಕೆ ಸಂದ ಜಯ. ಸಾಮಾನ್ಯರ ಮನಸ್ಸಿನಲ್ಲಿ ಏನಿತ್ತೋ ಅದನ್ನೇ ಎಲ್ಲರ ಮುಂದಿಟ್ಟೆವು. ಜನ ಒಪ್ಪಿಕೊಂಡು ಮತ ನೀಡಿದರು.
ಕಾರಣಗಳನ್ನು ಒಡ್ಡಿ ಹಿಂದಿನ ಬಾರಿಯಂತೆ ರಾಜೀನಾಮೆ ನೀಡುವ ಸಂದರ್ಭ ಎದುರಾದರೆ?
ರೆಡ್ಡಿ : ನಮ್ಮದು ಹೊಸ ಪಕ್ಷ. ತಪ್ಪುಗಳು ಆಗುವುದು ಸಹಜ, ಕಲಿಯುವುದು ಬಹಳಷ್ಟಿದ್ದರೂ ಜನರಿಗೆ ವಿರುದ್ಧವಾದ ನೀತಿ ನಿಯಮ ನಿರೂಪಣೆಗೆ ಆಸ್ಪದ ನೀಡುವುದಿಲ್ಲ.
ಇದು ಆಮ್ ಆದ್ಮಿ ಪಕ್ಷದ ಎರಡನೇ ಆವೃತ್ತಿಯೇ?
ಇಲ್ಲ, ಇದರ ಬಗ್ಗೆ ಮೊದಲೇ ಹೇಳಿದ್ದೇನೆ. ತಪ್ಪುಗಳಿಂದ ಸಾಕಷ್ಟು ಪಾಠ ಕಲಿಯುವುದಿದೆ. ನಮಗೊಬ್ಬ ಸ್ಫೂರ್ತಿದಾಯಕ ನಾಯಕನಿದ್ದು ಆತನ ಆಣತಿಯಂತೆ ಪಕ್ಷ ನಡೆದುಕೊಂಡು ಹೋಗುತ್ತಿದೆ.
ಕಿರಣ್ ಬೇಡಿ ಮತ್ತು ಶಾಜಿಯಾ ಇಲ್ಮಿ ಪ್ರಕರಣಗಳು ನಿಮಗೆ ಲಾಭವಾಯಿತೆ?
ರೆಡ್ಡಿ: ಈ ಬಗ್ಗೆ ಏನೂ ಹೇಳಲು ಸಾಧ್ಯವಿಲ್ಲ. ಕಿರಣ್ ಬೇಡಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಜೆಪಿ ಒಂದು ವೇಳೆ ಘೋಷಣೆ ಮಾಡದಿದ್ದರೂ ಅವರಿಗೆ ಸೋಲು ಖಾತರಿಯಾಗಿತ್ತು.
ನಾವು ನಿಜಕ್ಕೂ ಬಿಜೆಪಿಗೆ ಧನ್ಯವಾದ ಸಲ್ಲಿಸಬೇಕು. ಅವರ ಪ್ರಚಾರ ತಂತ್ರವೇ ನಮಗೆ ಲಾಭ ತಂದಕೊಟ್ಟಿತು. ಜನರು ಈ ಬಗೆಯ ರಾಜಕಾರಣದ ನೀತಿಯನ್ನು ಸಹಿಸಿಕೊಳ್ಳುವುದಿಲ್ಲ ಎಂಬುದನ್ನು ಇನ್ನಾದರೂ ಬಿಜೆಪಿ ನಾಯಕರು ಅರ್ಥ ಮಾಡಿಕೊಳ್ಳಬೇಕು.
ಆಮ್ ಆದ್ಮಿ ಪಕ್ಷ ದೆಹಲಿಗೆ ಮಾತ್ರ ಸೀಮಿತವೇ?
ರೆಡ್ಡಿ: ಹಾಗೇಂದು ಹೇಳಲು ಸಾಧ್ಯವಿಲ್ಲ, ನಮ್ಮ ಪ್ರಯಾಣ ಅಷ್ಟೇ ಆರಂಭವಾಗಿದೆ. ನಮ್ಮ ಶಕ್ತಿಯನ್ನು ಹೆಚ್ಚಿಸಿಕೊಂಡು ದೇಶಾದ್ಯಂತ ಸಂಚಲನ ಮೂಡಿಸಬೇಕಾಗಿದೆ.
ದೆಹಲಿಯನ್ನು ಇತರ ರಾಜ್ಯಗಳೊಂದಿಗೆ ಹೋಲಿಸಲು ಇಷ್ಟಪಡುವುದಿಲ್ಲ. ನಾವು ವಾಸ್ತವದ ಚಿಂತನೆ ನಡೆಸುತ್ತಿದ್ದು ವೈಜ್ಞಾನಿಕ ತಂತ್ರಗಳ ಆಧಾರದಲ್ಲಿ ಅಭಿವೃದ್ಧಿ ಕ್ರಮ ತೆಗೆದುಕೊಳ್ಳುತ್ತೇವೆ. (ಒನ್ ಇಂಡಿಯಾ)












Click it and Unblock the Notifications