ನಯಾ ಪಾಕಿಸ್ತಾನ್ ಎಂದ ಇಮ್ರಾನ್ ಖಾನ್ ಗೆ ಭಾರತದ ಸವಾಲು
Recommended Video

ನವದೆಹಲಿ, ಮಾರ್ಚ್ 09 : ಪಾಕಿಸ್ತಾನ ತನ್ನನ್ನು ತಾನು 'ಹೊಸ ವಿಚಾರ'ಗಳಿರುವ 'ಹೊಸ ಪಾಕಿಸ್ತಾನ' ಎಂದು ತೋರಿಸಿಕೊಂಡಿದ್ದರೆ, ಅದು ಭಯೋತ್ಪಾದಕ ತಂಡಗಳ ವಿರುದ್ಧ 'ಹೊಸ ಕ್ರಮ' ಜರುಗಿಸಬೇಕು ಮತ್ತು ಗಡಿಯಲ್ಲಿನ ಭಯೋತ್ಪಾದನೆಯನ್ನು ನಿಲ್ಲಿಸಬೇಕು ಎಂದು ಭಾರತ ಪಾಕಿಸ್ತಾನಕ್ಕೆ ಸವಾಲು ಹಾಕಿದೆ.
ವಿದೇಶಾಂಗ ಸಚಿವಾಲಯದ ಅಧಿಕೃತ ವಕ್ತಾರ ರವೀಶ್ ಕುಮಾರ್ ಅವರು ಶನಿವಾರ ಪತ್ರಿಕಾಗೋಷ್ಠಿ ನಡೆಸಿದ್ದು, ಪಾಕಿಸ್ತಾನ ಭಯೋತ್ಪಾದನೆಯನ್ನು ಸಂಪೂರ್ಣವಾಗಿ ತೊಡೆದುಹಾಕಬೇಕು ಎಂದು ಹೇಳಿದ್ದಾರೆ. ಪಾಕಿಸ್ತಾನದ ಇಮ್ರಾನ್ ಖಾನ್ ಅವರು, ತಮ್ಮದು ನಯಾ ಪಾಕಿಸ್ತಾನ್ ಎಂದು ಹೇಳಿದ್ದಕ್ಕೆ ಇದು ಭಾರತದ ತೀಕ್ಷ್ಣವಾದ ಪ್ರತಿಕ್ರಿಯೆ.
ಭಾರತದ ವಿರುದ್ಧ ಪಾಕಿಸ್ತಾನ ಅಮೆರಿಕ ನಿರ್ಮಿತ ಎಫ್-16 ಯುದ್ಧ ವಿಮಾನ ಬಳಸಿತ್ತು ಎಂಬುದಕ್ಕೆ ಪ್ರತ್ಯಕ್ಷದರ್ಶಿಗಳ ಸಾಕ್ಷ್ಯವಿದೆ ಮತ್ತು ಆ ವಿಮಾನವನ್ನು ವಿಂಗ್ ಕಮಾಂಡರ್ ಅಭಿನಂದನ್ ಅವರು ಹೊಡೆದುರುಳಿಸಿದ್ದಕ್ಕೂ ನಮ್ಮ ಬಳಿ ಸಾಕ್ಷ್ಯವಿದೆ. ನಮ್ಮ ವಿರುದ್ಧ ಎಫ್-16 ಬಳಸಿದ್ದು, ಅಮೆರಿಕ ಮತ್ತು ಪಾಕಿಸ್ತಾನದ ನಡುವಿನ ಒಪ್ಪಂದಕ್ಕೆ ಪೂರಕವಾಗಿದೆಯೆ ಎಂಬುದನ್ನು ದೃಢಪಡಿಸಲು ಅಮೆರಿಕಕ್ಕೆ ಕೇಳಿದ್ದೇವೆ ಎಂದು ಅವರು ನುಡಿದರು.

ಪುಲ್ವಾಮಾದಲ್ಲಿ ನಡೆದ ಭಯಾನಕ ಭಯೋತ್ಪಾದಕ ದಾಳಿ ತಾನೇ ನಡೆಸಿದ್ದಾಗಿ ಜೈಷ್-ಎ-ಮೊಹಮ್ಮದ್ ಸಂಘಟನೆ ತಾನೇ ಒಪ್ಪಿಕೊಂಡಿದ್ದರೂ ಪಾಕಿಸ್ತಾನ ಇದನ್ನು ಅಲ್ಲಗಳೆಯುತ್ತಿರುವುದು ನಿಜಕ್ಕೂ ವಿಷಾದನೀಯ. ಪಾಕಿಸ್ತಾನದ ವಿದೇಶಾಂಗ ಸಚಿವರು ಆ ದಾಳಿಯನ್ನು ಜೈಷ್ ಸಂಘಟನೆ ನಡೆಸಿಲ್ಲ ಎಂದು ಹೇಳಿದ್ದಾರೆ. ಹಾಗಿದ್ದರೆ, ಪಾಕಿಸ್ತಾನ ಜೈಷ್-ಎ-ಮೊಹಮ್ಮದ್ ಭಯೋತ್ಪಾದಕ ಸಂಘಟನೆಯನ್ನು ಬೆಂಬಲಿಸುತ್ತಿದೆಯೆ ಎಂದು ಅವರು ಪ್ರಶ್ನಿಸಿದರು.
ಪಾಕಿಸ್ತಾನದಲ್ಲಿರುವ ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಎಲ್ಲ ತರಬೇತಿ ತಾಣಗಳ ಬಗ್ಗೆ, ಪಾಕಿಸ್ತಾನದಲ್ಲಿರುವ ಜೆಇಎಂ ಮುಖಂಡ ಮಸೂದ್ ಅಜರ್ ಬಗ್ಗೆ ಮತ್ತು ಆತನ ಚಟುವಟಿಕೆಗಳ ಬಗ್ಗೆ ವಿಶ್ವಸಂಸ್ಥೆ ಭದ್ರತಾ ಸಮಿತಿಗೆ ಅರಿವಿದೆ. ವಿಶ್ವಸಂಸ್ಥೆಯ ಸ್ಯಾಂಕ್ಷನ್ ಕಮಿಟಿಯ ಅಡಿಯಲ್ಲಿ ಮಸೂದ್ ಅಜರ್ ನನ್ನು ಘೋಷಿತ ಭಯೋತ್ಪಾಕರ ಪಟ್ಟಿಯಲ್ಲಿ ಸೇರಿಸಬೇಕೆಂದು ವಿಶ್ವಸಂಸ್ಥೆಯ ಭದ್ರತಾ ಸಮಿತಿಗೆ ಕೇಳಿಕೊಳ್ಳಲಾಗುವುದು ಎಂದರು.
ನೀರವ್ ಮೋದಿ ಗಡಿಪಾರು : ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ನೀಡಿರುವ ಮಾಹಿತಿಯ ಆಧಾರದ ಮೇರೆಗೆ ದೇಶಭ್ರಷ್ಟನಾಗಿರುವ ವಜ್ರದ ವ್ಯಾಪಾರಿ ನೀರವ್ ಮೋದಿಯನ್ನು ಭಾರತಕ್ಕೆ ಕರೆತರಲು ಎಲ್ಲ ಪ್ರಯತ್ನಗಳನ್ನು ಭಾರತ ಸರಕಾರ ಮಾಡುತ್ತಿದೆ. ನೀರವ್ ಯುನೈಟೆಡ್ ಕಿಂಗಡಂನಲ್ಲಿ ಇರುವುದು ನಮ್ಮ ಗಮನದಲ್ಲಿದೆ. ನೀರವ್ ಮೋದಿಯನ್ನು ಗಡಿಪಾರು ಮಾಡಬೇಕೆಂದು ನಾವು ಸಲ್ಲಿಸಿರುವ ಅರ್ಜಿ ಇನ್ನೂ ಯುಕೆ ಸರಕಾರದ ಬಳಿಯಿದೆ ಎಂದು ರವೀಶ್ ಕುಮಾರ್ ಸ್ಪಷ್ಟನೆ ನೀಡಿದರು.
ಕರ್ತಾರಪುರ ಕಾರಿಡಾರ್ ಮಾತುಕತೆ : ಪಾಕಿಸ್ತಾನದ ಜೊತೆ ಕರ್ತಾರಪುರ ಕಾರಿಡಾರ್ ಬಗ್ಗೆ ಮಾತುಕತೆ ಆರಂಭಿಸಿದ್ದು, ಪಾಕಿಸ್ತಾನದ ಜೊತೆ ದ್ವಿಪಕ್ಷೀಯ ರಾಜತಾಂತ್ರಿಕ ಮಾತುಕತೆ ಆರಂಭಿಸಿದಂತಲ್ಲ. ಸಿಖ್ ಜನರ ಭಾವನಾತ್ಮಕತೆಯನ್ನು ಗಮನದಲ್ಲಿಟ್ಟುಕೊಂಡು ಕರ್ತಾರಪುರ ಕಾರಿಡಾರ್ ಬಗ್ಗೆ ಮಾತುಕತೆ ನಡೆಸಿದ್ದೇವೆ ಎಂದು ಅವರು ವಿವರಿಸಿದರು.












Click it and Unblock the Notifications