ಚುನಾವಣೆ ವೇಳೆ ಸ್ಟಾರ್ ಪ್ರಚಾರಕಿಯಾಗಿದ್ದ ಗಾಯಕಿ, ಈಗ ಬಿಜೆಪಿಯ ಸದಸ್ಯೆ
ನವದೆಹಲಿ, ಜುಲೈ 07: ಹರ್ಯಾನ್ವಿ ಗಾಯಕಿ, ನೃತ್ಯಗಾರ್ತಿ ಸಪ್ನ ಚೌಧರಿ ಅವರು ಕೊನೆಗೂ ಬಿಜೆಪಿ ಸೇರಿದ್ದಾರೆ. ದೆಹಲಿಯಲ್ಲಿ ನಡೆದ ಸದಸ್ಯತ್ವ ಅಭಿಯಾನದ ವೇಳೆ ಬಿಜೆಪಿ ಉಪಾಧ್ಯಕ್ಷ ಶಿವರಾಜ್ ಸಿಂಗ್ ಚೌಹಾಣ್ ಸಮ್ಮುಖದಲ್ಲಿ ಪಕ್ಷದ ಪ್ರಾಥಮಿಕ ಸದಸ್ಯತ್ವ ಪಡೆದುಕೊಂಡರು.
ಈ ಸಂದರ್ಭದಲ್ಲಿ ಕೇಂದ್ರ ಸಚಿವ ಹರ್ಷವರ್ಧನ್, ದೆಹಲಿ ಬಿಜೆಪಿ ಮುಖ್ಯಸ್ಥ, ಸಂಸದ, ನಟ ಮನೋಜ್ ತಿವಾರಿ ಸೇರಿದಂತೆ ಅನೇಕ ಹಿರಿಯ ಮುಖಂಡರು ಉಪಸ್ಥಿತರಿದ್ದರು.
ಬಿಗ್ ಬಾಸ್ ರಿಯಾಲಿಟಿ ಶೋ 11ರ ಸ್ಪರ್ಧಿಯಾಗಿದ್ದ ಸಪ್ನ ಅವರು ತಮ್ಮ ಹಾಡು, ನೃತ್ಯಗಳ ಮೂಲಕ ಪಡ್ಡೆಗಳ ನಿದ್ದೆಗೆಡಿಸಿದವರು. 'ತೇರಿ ಅಖ್ಯಾ ಕಾ ಯೋ ಕಾಜಲ್' ಎಂಬ ಹರ್ಯಾನ್ವಿ ಭಾಷೆಯ ಹಾಡು ಅತ್ಯಂತ ಜನಪ್ರಿಯವಾಗಿದೆ.

ಲೋಕಸಭೆ ಚುನಾವಣೆ 2019 ವೇಳೆ ಹರ್ಯಾನ್ವಿ ಗಾಯಕಿ ಸಪ್ನಾ ಚೌಧರಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಜತೆಗಿನ ಫೋಟೊವೊಂದು ವೈರಲ್ ಆಗಿದ್ದು, ಸಪ್ನಾ ಅವರು ಕಾಂಗ್ರೆಸ್ ಸೇರಿದ್ದಾರೆ ಎಂಬ ಸುದ್ದಿ ಹಬ್ಬಿತ್ತು.
ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಸಪ್ನಾ ಚೌಧರಿ, ನಾನು ಕಾಂಗ್ರೆಸ್ ಸೇರಿಲ್ಲ, ಸೇರೋದಿಲ್ಲ, 'ಪ್ರಿಯಾಂಕಾ ಜತೆಗಿನ ಫೋಟೊ ಹಳೆ ಚಿತ್ರವಾಗಿದೆ', ನಾನು ಯಾವ ಪಕ್ಷದ ಪರವಾಗಿ ಪ್ರಚಾರಕ್ಕೆ ಹೋಗುತ್ತಿಲ್ಲ ಎಂದಿದ್ದರು.
ಆದರೆ, ದೆಹಲಿಯಲ್ಲಿ ಮನೋಜ್ ತಿವಾರಿ ಜೊತೆ ಕಾಣಿಸಿಕೊಂಡು,ಈಶಾನ್ಯ ದೆಹಲಿ ಕ್ಷೇತ್ರದ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದರು. ಮಥುರಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹೇಮಮಾಲಿನಿ ಅವರನ್ನು ಸೋಲಿಸಲು ಸಪ್ನಾ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ನಿರ್ಧರಿಸಿದೆ ಎಂಬ ಸುದ್ದಿಯೂ ಹಬ್ಬಿತ್ತು.












Click it and Unblock the Notifications