ಗಲ್ಲು ಹಾಕುವವರನ್ನು ಹುಡುಕುವುದು ಸವಾಲಿನ ಕೆಲಸ!
ನವದೆಹಲಿ, ಡಿಸೆಂಬರ್ 10 : ನಿರ್ಭಯಾ ಅತ್ಯಾಚಾರಿಗಳನ್ನು ಗಲ್ಲಿಗೇರಿಸುವ ಕುರಿತು ಚರ್ಚೆಗಳು ಆರಂಭವಾಗಿವೆ. ತಮಿಳುನಾಡಿನ ಪೊಲೀಸ್ ಮುಖ್ಯಪೇದೆಯೊಬ್ಬ ಗಲ್ಲು ಹಾಕಲು ತಾನು ಸಿದ್ಧ ಎಂದು ಘೋಷಣೆ ಮಾಡಿದ್ದಾನೆ.
ಗಲ್ಲು ಶಿಕ್ಷೆ ಜಾರಿಗೊಳಿಸುವವರನ್ನು ಹುಡುಕುವುದು ಜೈಲಿನ ಅಧಿಕಾರಿಗಳಿಗೆ ನಿಜಕ್ಕೂ ಸವಾಲಿನ ಕೆಲಸವಾಗಿದೆ. ದೇಶದ ಹಲವು ಜೈಲುಗಳಲ್ಲಿ ಗಲ್ಲು ಶಿಕ್ಷೆ ಜಾರಿಗೊಳಿಸುವ ಯಾವುದೇ ಸಿಬ್ಭಂದಿ ಇಲ್ಲ. ಇದು ಖಾಯಂ ಉದ್ಯೋಗವೂ ಅಲ್ಲ.
ಹಿಂದೆ ಗಲ್ಲು ಶಿಕ್ಷೆ ಜಾರಿಗೊಳಿಸುತ್ತಿದ್ದವರ ಮಕ್ಕಳು ಈಗ ಬೇರೆ ಉದ್ಯೋಗ ಮಾಡುತ್ತಿದ್ದಾರೆ. ಜೈಲುಗಳಲ್ಲಿ ಹಿಂದೆ ಇದ್ದ ಸಿಬ್ಬಂದಿಗಳಿಗೆ ಈಗ ವಯಸ್ಸಾಗಿದ್ದು, ಅವರು ನಿವೃತ್ತಿ ಪಡೆದಿದ್ದಾರೆ. ಆದ್ದರಿಂದ, ನೇಣು ಕುಣಿಕೆ ಎಳೆಯುವವರನ್ನು ಹುಡುಕುವುದು ಕಷ್ಟ.

1995ರ ತನಕ ಮಹಾರಾಷ್ಟ್ರದ ಯರವಾಡ ಜೈಲಿನಲ್ಲಿ ಗಲ್ಲು ಶಿಕ್ಷೆ ಜಾರಿಗೊಳಿಸುವ ಸಿಬ್ಬಂದಿ ಇದ್ದರು. ಆದರೆ, ಮುಂಬೈ ದಾಳಿಯ ಅಪರಾಧಿ ಅಜ್ಮಲ್ ಕಸಬ್ ಗಲ್ಲಿಗೇರಿಸುವಾಗ ಪುಣೆಯ ಯರವಾಡ ಜೈಲಿನಲ್ಲಿ ಖಾಯಂ ಸಿಬ್ಬಂದಿ ಇರಲಿಲ್ಲ.
ಒಮ್ಮೆ ಗಲ್ಲು ಶಿಕ್ಷೆ ಜಾರಿಗೊಳಿಸಿದ ವ್ಯಕ್ತಿ ಮತ್ತೊಮ್ಮೆ ಜೈಲಿನ ಅಧಿಕಾರಿಗಳು ಕರೆದರೆ ಬರಲು ಒಪ್ಪುವುದಿಲ್ಲ. ಗಲ್ಲು ಶಿಕ್ಷೆ ಜಾರಿಗೊಳಿಸುವುದು ಬಹು ನಾಜೂಕಿನ ಕೆಲಸ. ಶಿಕ್ಷೆ ಜಾರಿಗೊಳ್ಳುವಾಗ ಯಾವುದೇ ತಪ್ಪು ಆಗಬಾರದು ಶಿಕ್ಷೆ ಅನುಭವಿಸುವ ವ್ಯಕ್ತಿಗೆ ಅಪಾರವಾದ ನೋವು ಆಗಬಾರದು.
ಗಲ್ಲು ಶಿಕ್ಷೆಯ ಹಗ್ಗ ಸಿದ್ಧಪಡಿಸುವುದರಿಂದ ನೇಣು ಹಾಕುವ ಪ್ರಕ್ರಿಯೆ ಆರಂಭವಾಗುತ್ತದೆ. ನೇಣು ಶಿಕ್ಷೆಗೆ ಗುರಿಯಾಗುತ್ತಿರುವ ಅಪರಾಧಿಯ ಕುತ್ತಿಗೆಗೆ ಗಾಯವಾಗದಂತೆ ಎಚ್ಚರ ವಹಿಸಬೇಕಾಗುತ್ತದೆ.
ನೇಣು ಹಾಕುವ ಮೊದಲು ಹಗ್ಗಕ್ಕೆ ತುಪ್ಪ, ಸೋಪು ಮತ್ತು ಬಾಳೆಹಣ್ಣಿನ ಮಿಶ್ರಣವನ್ನು ಸವರಲಾಗುತ್ತದೆ. ಇದರಿಂದಾಗಿ ಹಗ್ಗ ಮೃದುವಾಗಲಿದ್ದು, ನೇಣಿಗೆ ಕೊರಳೊಡ್ಡುವ ವ್ಯಕ್ತಿಗೆ ಹಿಂಸೆ ಆಗುವುದಿಲ್ಲ.
ಗಲ್ಲು ಶಿಕ್ಷೆ ಜಾರಿಗೊಳಿಸುವ ಕೆಲಸಕ್ಕೆ ಎಲ್ಲರೂ ಒಪ್ಪುವುದಿಲ್ಲ. ಕೆಲಸ ಮತ್ತು ಕಡಿಮೆ ವೇತನವಿರುವ ಕಾರಣ ಇದನ್ನು ಜಾರಿಗೊಳಿಸಲು ಎಲ್ಲರೂ ಒಪ್ಪುವುದಿಲ್ಲ. ಹಲವು ವರ್ಷಗಳ ಕಾಲ ಒಂದು ಗಲ್ಲು ಶಿಕ್ಷೆ ವಿಧಿಸಲು ನೀಡುತ್ತಿದ್ದ ಹಣ 200 ರೂ.ಗಳು.
ನೇಣು ಹಗ್ಗವನ್ನು ಹಾಕಿ ಶಿಕ್ಷೆಯನ್ನು ಜಾರಿಗೊಳಿಸುವ ವ್ಯಕ್ತಿ 5.4 ಅಡಿ ಎತ್ತರವಿರಬೇಕು ಎಂಬ ನಿಯಮವಿದೆ. ಇದು ಸರ್ಕಾರಿ ಕೆಲಸವಲ್ಲ. ಸರ್ಕಾರ ನೌಕರರಿಗೆ ಸಿಗುವ ಸೌಲಭ್ಯಗಳು ಇವರಿಗೆ ಸಿಗುವುದಿಲ್ಲ. ಆದ್ದರಿಂದ, ಜನರು ಈ ಕೆಲಸಕ್ಕೆ ಒಪ್ಪಿಗೆ ನೀಡುವುದಿಲ್ಲ.












Click it and Unblock the Notifications