ಕೊರೊನಾ ಲಸಿಕೆಗಳ ತುರ್ತು ಬಳಕೆ; ತಜ್ಞರ ಸಮಿತಿಯಿಂದ ಮತ್ತೆ ಸಭೆ
ನವದೆಹಲಿ, ಜನವರಿ 01: ರಾಷ್ಟ್ರೀಯ ಔಷಧ ನಿಯಂತ್ರಕದ ತಜ್ಞರ ಸಮಿತಿ (ಎಸ್ ಇಸಿ) ಶುಕ್ರವಾರ ಮತ್ತೆ ಸಭೆ ಕರೆದಿದ್ದು, ಸೆರಂ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾದ ಆಕ್ಸ್ ಫರ್ಡ್ ಆಸ್ಟ್ರಾಜೆನೆಕಾ ಹಾಗೂ ಭಾರತ್ ಬಯೋಟೆಕ್ ಲಸಿಕೆಗಳ ತುರ್ತು ಬಳಕೆ ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿ ಕುರಿತು ಇಂದು ನಿರ್ಧಾರ ತೆಗೆದುಕೊಳ್ಳಲಿರುವುದಾಗಿ ತಿಳಿದುಬಂದಿದೆ.
ಬ್ರಿಟನ್ ನ ಔಷಧ ಹಾಗೂ ಆರೋಗ್ಯ ಸೇವೆಗಳ ನಿಯಂತ್ರಣ ಮಂಡಳಿಯು ಸೆರಂ ಇನ್ ಸ್ಟಿಟ್ಯೂಟ್ ನ ಆಕ್ಸ್ ಫರ್ಡ್ ಆಸ್ಟ್ರಾಜೆನೆಕಾ ಲಸಿಕೆಗೆ ಬುಧವಾರ ಅನುಮತಿ ನೀಡಿದ ಬೆನ್ನಲ್ಲೇ ಅಂದೇ ತಜ್ಞರ ಸಮಿತಿ ಎರಡನೇ ಬಾರಿಗೆ ತುರ್ತು ಬಳಕೆಗೆ ಸಲ್ಲಿಸಿದ್ದ ಅರ್ಜಿಯನ್ನು ಪರಿಶೀಲಿಸಿತ್ತು.
ಭಾರತದಲ್ಲಿ ವೈದ್ಯಕೀಯ ಪ್ರಯೋಗಗಳನ್ನು ನಡೆಸಲು ಹಾಗೂ ಲಸಿಕೆ ತಯಾರಿಸಲು ಸೆರಂ ಇನ್ ಸ್ಟಿಟ್ಯೂಟ್ ಬ್ರಿಟನ್ ಕಂಪನಿಯೊಂದಿಗೆ ಪಾಲುದಾರಿಕೆ ಮಾಡಿಕೊಂಡಿದೆ. ಲಸಿಕೆಯ ತುರ್ತು ಅನುಮೋದನೆಗೆ ಸಂಬಂಧಿಸಿದಂತೆ ಡಿಸೆಂಬರ್ 9ರಂದು ಅರ್ಜಿ ಪರಿಶೀಲಿಸಿದ ಕೇಂದ್ರ ಔಷಧ ನಿಯಂತ್ರಣ ಸಂಸ್ಥೆಯ ತಜ್ಞರ ಸಮಿತಿ ಸಭೆಯಲ್ಲಿ ಲಸಿಕೆ ತಯಾರಕ ಕಂಪನಿಗಳಿಂದ ವೈದ್ಯಕೀಯ ಪ್ರಯೋಗಗಳ ಕುರಿತು ಹೆಚ್ಚುವರಿ ಅಂಕಿ ಅಂಶಗಳನ್ನು ಕೇಳಿತ್ತು. ಡಿಸೆಂಬರ್ 24ರಂದು ಸೆರಂ ಸಂಸ್ಥೆ ಮಾಹಿತಿಯನ್ನು ಒದಗಿಸಿತ್ತು.

ಬ್ರಿಟನ್ ನ ಔಷಧ ನಿಯಂತ್ರಕ (ಯುಕೆ ಎಂಎಚ್ ಆರ್ ಎ) ಕೂಡ ಅಗತ್ಯ ಅಂಕಿಅಂಶಗಳನ್ನು ಪರಿಶೀಲಿಸುತ್ತಿದೆ. ಸ್ಥಳೀಯ ಔಷಧ ನಿಯಂತ್ರಕದಿಂದ ಅನುಮೋದನೆ ದೊರೆತಿರುವ ಕುರಿತೂ ಪರಿಶೀಲನೆ ನಡೆಸುತ್ತಿದೆ. ಫೈಜರ್, ಭಾರತ್ ಬಯೋಟೆಕ್ ಹಾಗೂ ಸೆರಂ ತಮ್ಮ ಲಸಿಕೆಗಳ ತುರ್ತು ಬಳಕೆಗೆ ಅರ್ಜಿ ಸಲ್ಲಿಸಿವೆ. ಫೈಜರ್ ಹೆಚ್ಚುವರಿ ಮಾಹಿತಿ ನೀಡಲು ಸಮಯ ಕೇಳಿದ್ದು, ಇನ್ನಿತರ ಎರಡು ಕಂಪನಿಗಳ ಅರ್ಜಿ ಕುರಿತು ತಜ್ಞರ ಸಮಿತಿ ಪರಿಶೀಲನೆ ನಡೆಸುತ್ತಿದೆ. ಈ ಎರಡೂ ಕಂಪನಿಗಳು ಹೆಚ್ಚುವರಿ ಅಂಕಿ ಅಂಶಗಳನ್ನು ಒದಗಿಸಿವೆ ಎಂದು ತಜ್ಞರ ತಂಡ ತಿಳಿಸಿದೆ.
ಶುಕ್ರವಾರ ಲಸಿಕೆಗಳ ತುರ್ತು ಬಳಕೆಗೆ ಅನುಮೋದನೆ ದೊರೆಯುವ ನಿರೀಕ್ಷೆ ವ್ಯಕ್ತವಾಗಿದೆ.












Click it and Unblock the Notifications