ಗೋಪಿನಾಥ್ ಮುಂಡೆ ಸಾವಿನ ಪ್ರಕರಣ ತನಿಖೆಗೆ ಆಗ್ರಹ
ನವದೆಹಲಿ, ಜನವರಿ 22: ಮಾಜಿ ಕೇಂದ್ರ ಸಚಿವ ಗೋಪಿನಾಥ್ ಮುಂಡೆ ಅವರ ಸಾವಿನ ಪ್ರಕರಣದ ತನಿಖೆಗೆ ಆಗ್ರಹಿಸಲಾಗಿದೆ. ಇವಿಎಂನಲ್ಲಿರುವ ಹುಳುಕುಗಳ ಬಗ್ಗೆ ಗೋಪಿನಾಥ್ ಮುಂಡೆ ಅವರಿಗೆ ತಿಳಿದಿದ್ದರಿಂದ ಅವರನ್ನು ಸಾಯಿಸಲಾಯಿತು ಎಂದು ಲಂಡನ್ನಿನಲ್ಲಿ ಹ್ಯಾಕರ್ ಗಳು ಸ್ಫೋಟಕ ಸುದ್ದಿ ನೀಡಿದ್ದರು.
ಈ ಬಗ್ಗೆ ತಿಳಿದ ಗೋಪಿನಾಥ್ ಮುಂಡೆ ಅವರ ಸೋದರಳಿಯ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ನಾಯಕ ಧನಂಜಯ್ ಮುಂಡೆ ಅವರು, ಸುಪ್ರೀಂ ಕೋರ್ಟ್ ಅಥವಾ 'ರಾ' ಮೂಲಕ ಗೋಪಿನಾಥ್ ಮುಂಡೆ ಅವರ ಸಾವಿನ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
2014ರಲ್ಲಿ ಮೋದಿ ಸರ್ಕಾರ ಸ್ಥಾಪನೆಗೆ ಇವಿಎಂ ಹ್ಯಾಕ್ ಕಾರಣವಾಗಿತ್ತು. ಮೋದಿ ಅವರು ಅಧಿಕಾರ ವಹಿಸಿಕೊಂಡ ಕೆಲ ವಾರಗಳಲ್ಲಿ ಅಪಘಾತವೊಂದರಲ್ಲಿ ಗೋಪಿನಾಥ್ ಮೃತಪಟ್ಟಿದ್ದರು.

ಜೂನ್ 3, 2014ರಂದು ದೆಹಲಿಯಲ್ಲಿ ಕಾರು ಅಪಘಾತವೊಂದರಲ್ಲಿ ಸಾವನ್ನಪ್ಪಿದ್ದರು. ಆದರೆ, ಗೋಪಿನಾಥ್ ಮುಂಡೆ ಅವರನ್ನು ಕೊಲೆ ಮಾಡಲಾಗಿದೆ ಎಂದು ಭಾರತೀಯ ಮೂಲದ ಸೈಬರ್ ತಜ್ಞ ಸೈಯದ್ ಶುಜಾ ಲಂಡನ್ ನಗರದಲ್ಲಿ ನಡೆದ ಹ್ಯಾಕಥಾನ್ ನಲ್ಲಿ ಭಾಗವಹಿಸಿ ಹೇಳಿದರು. 2014ರ ಲೋಕಸಭಾ ಚುನಾವಣೆಯಲ್ಲಿ ಇವಿಎಂ ಯಂತ್ರಗಳನ್ನು ತಿರುಚಲಾಗಿದೆಯೆಂದು ಗೋಪಿನಾಥ್ ಮುಂಡೆ ಅವರಿಗೆ ತಿಳಿದಿತ್ತು. ಈ ಗುಟ್ಟನ್ನು ರಟ್ಟು ಮಾಡುತ್ತಾರೆ ಎಂಬ ಭಯದಿಂದ ಅವರನ್ನು ಕೊಲ್ಲಲಾಯಿತು ಎಂದು ಶುಜಾ ಹೇಳಿಕೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿದ ಮಹಾರಾಷ್ಟ್ರ ವಿಧಾನ ಪರಿಷತ್ ವಿಪಕ್ಷ ನಾಯಕ ಧನಂಜಯ್ ಮುಂಡೆ, "ಇದು ಜನ ನಾಯಕನೊಬ್ಬನ ಸಾವಿನ ಕುರಿತಾಗಿರುವುದರಿಂದ ಈ ವಿಚಾರಕ್ಕೆ ತಕ್ಷಣ ಗಮನ ನೀಡಬೇಕಿದೆ ಹಾಗೂ ತನಿಖೆಯಾಗಬೇಕಿದೆ'' ಎಂದು ಬರೆದಿದ್ದಾರೆ.
ಗೋಪಿನಾಥ್ ಮುಂಡೆ ಅವರ ಬಗ್ಗೆ ಪ್ರೀತಿ, ಅಭಿಮಾನವಿರುವವರು ಯಾವತ್ತೂ ಅವರ ಸಾವಿನ ಬಗ್ಗೆ ಪ್ರಶ್ನೆಗಳನ್ನೆತ್ತಿದ್ದಾರೆ ಹಾಗೂ ಸೈಬರ್ ತಜ್ಞರು ಪತ್ರಿಕಾಗೋಷ್ಠಿಯಲ್ಲಿ ನೀಡುವ ಹೇಳಿಕೆಯೂ ಈ ಸಂಶಯಕ್ಕೆ ಪುಷ್ಟಿ ನೀಡುವಂತಿದೆ'' ಎಂದು ಧನಂಜಯ್ ಹೇಳಿದ್ದಾರೆ
ಗೋಪಿನಾಥ್ ಮುಂಡೆ ಅವರನ್ನು ಹತ್ಯೆ ಮಾಡಲಾಗಿದೆ ಎಂದು ಎಫ್‍ಐಆರ್ ದಾಖಲಿಸಲು ಯೋಜಿಸಿದ್ದ ರಾಷ್ಟ್ರೀಯ ತನಿಖಾ ಏಜನ್ಸಿಯ ಅಧಿಕಾರಿ ತಂಝೀಲ್ ಅಹ್ಮದ್ ಅವರನ್ನು ಹತ್ಯೆಗೈಯ್ಯಲಾಗಿದೆ ಎಂದು ಸೈಬರ್ ತಜ್ಞ ಶುಜಾ ವಾದಿಸಿದ್ದರು












Click it and Unblock the Notifications