'ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಬಿಜೆಪಿಯ ಎಲೆಕ್ಷನ್ ಗಿಮಿಕ್'
ನವದೆಹಲಿ, ಜನವರಿ 7: ಸಾಮಾನ್ಯ ವರ್ಗದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಕಲ್ಪಿಸುವ ಸರಕಾರದ ನಿರ್ಧಾರ 'ಚುನಾವಣೆ ಗಿಮಿಕ್' ಹಾಗೂ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ತೋರಿಕೆಗಾಗಿ ಬಿಜೆಪಿ ಹೀಗೆ ಮಾಡುತ್ತಿದೆ ಎಂದು ಕಾಂಗ್ರೆಸ್ ಆರೋಪ ಮಾಡಿದೆ.
ಕಳೆದ ನಾಲ್ಕು ವರ್ಷ ಎಂಟು ತಿಂಗಳಿಂದ ಈ ಬಗ್ಗೆ ಬಿಜೆಪಿ ಯೋಚನೆ ಮಾಡಲಿಲ್ಲ. ಇದೀಗ ಚುನಾವಣೆ ನೀತಿ ಸಂಹಿತೆ ಜಾರಿಗೆ ಬರಬೇಕಾದ ಎರಡು ತಿಂಗಳ ಮುಂಚೆ ಇಂಥ ಯೋಚನೆ ಬಂದಿದೆ ಎಂದು ಕಾಂಗ್ರೆಸ್ ವಕ್ತಾರ ಅಭಿಷೇಕ್ ಸಿಂಘ್ವಿ ಹೇಳಿದ್ದಾರೆ. ಸಂವಿಧಾನ ತಿದ್ದುಪಡಿ ತರಲು ಸಂಸತ್ ನಲ್ಲಿ ಬಹುಮತ ಇದೆಯಾ ಎಂದು ಕೂಡ ಅವರು ಪ್ರಶ್ನಿಸಿದ್ದಾರೆ.
"ನಾಲ್ಕು ವರ್ಷ ಮತ್ತು ಎಂಟು ತಿಂಗಳು ನೀವೇಕೆ ಈ ಬಗ್ಗೆ ಚಿಂತೆ ಮಾಡಲಿಲ್ಲ? ಚುನಾವಣೆ ನೀತಿ ಸಂಹಿತೆ ಜಾರಿಗೆ ಬರುವ ಮೂರು ತಿಂಗಳ ಮುಂಚೆ ಚುನಾವಣೆ ಗಿಮಿಕ್ ಇದು. ನಿಮಗೆ ಗೊತ್ತು, ಗರಿಷ್ಠ ಐವತ್ತು ಪರ್ಸೆಂಟ್ ಗಿಂತ ಹೆಚ್ಚು ಮೀಸಲಾತಿ ಸಾಧ್ಯವಿಲ್ಲ. ಆದ್ದರಿಂದ ನಾವು ಪ್ರಯತ್ನ ಪಟ್ಟೆವು ಅಂತ ತೋರಿಕೆಗೋಸ್ಕರ ಮಾಡುತ್ತಿದ್ದೀರಿ" ಎಂದು ಟ್ವಿಟ್ಟರ್ ನಲ್ಲಿ ಹೇಳಿದ್ದಾರೆ.

ಸಾಮಾನ್ಯ ವರ್ಗದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಉದ್ಯೋಗ ಹಾಗೂ ಶೈಕ್ಷಣಿಕ ಸಂಸ್ಥೆಗಳಿಗೆ ಶೇಕಡಾ ಹತ್ತರಷ್ಟು ಮೀಸಲಾತಿ ನೀಡಲು ಕೇಂದ್ರ ಸಂಪುಟ ಸೋಮವಾರ ಅಂಕಿತ ಹಾಕಿದೆ. ಅದಕ್ಕಾಗಿ ಸಂವಿಧಾನ ತಿದ್ದುಪಡಿ ತರಲು ಮಂಗಳವಾರ ಸಂಸತ್ ನಲ್ಲಿ ಮಸೂದೆ ಮಂಡಿಸುವ ಸಾಧ್ಯತೆ ಇದೆ.
ಈಗ ಜಾರಿಗೆ ತರಲು ಹೊರಟಿರುವ ಮೀಸಲಾತಿ ಪ್ರಮಾಣವು ಸದ್ಯಕ್ಕೆ ಇರುವ ಐವತ್ತು ಪರ್ಸೆಂಟ್ ಮಿತಿಗಿಂತ ಹೆಚ್ಚಾಗುತ್ತದೆ. ಈ ವರೆಗೆ ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗಕ್ಕೆ ಮೀಸಲಾತಿಗೆ ಅವಕಾಶ ಇರಲಿಲ್ಲ.












Click it and Unblock the Notifications