ಅಣ್ಣನಿಗೆ ಮತ್ತೆ ಇಡಿ ಸಂಕಷ್ಟ ಎದುರಾದ ಬಗ್ಗೆ ಡಿ.ಕೆ.ಸುರೇಶ್ ಪ್ರತಿಕ್ರಿಯೆ
Recommended Video
ನವದೆಹಲಿ, ಸೆಪ್ಟೆಂಬರ್ 13: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಸೆಪ್ಟೆಂಬರ್ 17 ರ ವರೆಗೆ ಇಡಿ ವಶಕ್ಕೆ ನೀಡಿ ವಿಶೇಷ ನ್ಯಾಯಾಲಯವು ಶುಕ್ರವಾರ ಆದೇಶ ನೀಡಿದೆ.
ಆದೇಶ ಹೊರಬೀಳುತ್ತಿದ್ದಂತೆ ಡಿಕೆಶಿ ಅವರ ಸಹೋದರ ಸಂಸದ ಡಿ.ಕೆ.ಸುರೇಶ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಇಡಿ ಇಂದು ನ್ಯಾಯಾಲಯದಲ್ಲಿ ಮಾಡಿದ ಆರೋಪಗಳೆಲ್ಲಾ ಹುರುಳಿಲ್ಲದವು ಎಂದು ಹೇಳಿದರು.
800 ಕೋಟಿ ಬೇನಾಮಿ ಆಸ್ತಿ ಡಿ.ಕೆ.ಶಿವಕುಮಾರ್ ಬಳಿ ಇದೆ ಎಂದು ಇಡಿ ವಾದ ಮಂಡಿಸಿದ್ದನ್ನು ಹಾಸ್ಯಾಸ್ಪದ ಎಂದ ಡಿ.ಕೆ.ಸುರೇಶ್, 800 ಕೋಟಿ ಆಸ್ತಿ ಇರುವುದನ್ನು ಡಿಕೆಶಿ ಅವರೇ ಘೋಷಿಸಿಕೊಂಡಿದ್ದಾರೆ. ಶಿವಕುಮಾರ್ ಅವರ ಒಟ್ಟು ಆಸ್ತಿಯ ಈಗಿನ ಮೌಲ್ಯ 800 ಇರುವುದು ಸತ್ಯ, ಅದು ಬೇನಾಮಿ ಅಲ್ಲ, ಅವರ ಸ್ವಂತದ್ದು ಎಂದು ಡಿ.ಕೆ.ಸುರೇಶ್ ಹೇಳಿದರು.
ಐಟಿ ಇಲಾಖೆಯು ಹೇಗೆ 87 ಮನೆಗಳ ಮೇಲೆ ದಾಳಿ ನಡೆಸಿ ಎಲ್ಲ ಹಣವೂ, ಆಸ್ತಿಯೂ ನಮ್ಮದೇ ಎಂದು ಬಿಂಬಿಸಿತೋ ಹಾಗೆಯೇ ಇಡಿ ಸಹ ರಾಜಕೀಯ ಒತ್ತಡಕ್ಕೆ ಮಣಿದು ನಮ್ಮದಲ್ಲದ ಖಾತೆಗಳನ್ನು, ಆಸ್ತಿಗಳನ್ನು ನಮ್ಮದೆಂದು ಬಿಂಬಿಸಲು ಹೊರಟಿದೆ ಎಂದು ಡಿ.ಕೆ.ಸುರೇಶ್ ಆರೋಪಿಸಿದರು.

317 ಖಾತೆ ಇದೆ ಎಂದು ಸಾಬೀತು ಮಾಡಲಿ: ಸುರೇಶ್ ಸವಾಲು
ಇಡಿ ಹೇಳಿದಂತೆ 317 ಖಾತೆಯನ್ನು ಡಿ.ಕೆ.ಶಿವಕುಮಾರ್ ಹೊಂದಿರುವುದನ್ನು ಇಡಿ ಸಾಬೀತು ಪಡಿಸಲಿ, ಅವರು ನ್ಯಾಯಾಲಯದಲ್ಲಿ ಹೇಳಿದ್ದಾರೆಂದರೆ ಅದನ್ನು ಸಾಬೀತು ಪಡಿಸಲೇಬೇಕು ಎಂದು ಡಿ.ಕೆ.ಸುರೇಶ್ ಉದ್ವೇಗದಿಂದ ಹೇಳಿದರು.

ಡಿಕೆಶಿ ಮೇಲೆ ಯಾವ ಕ್ರಿಮಿನಲ್ ಮೊಕ್ಕದ್ದಮೆ ಇಲ್ಲ: ಸುರೇಶ್
ಇಡಿ ವಕೀಲರು ಡಿ.ಕೆ.ಶಿವಕುಮಾರ್ ಮೇಲೆ ಕ್ರಿಮಿನಲ್ ಆರೋಪ ಇದೆ ಎಂದ ಬಗ್ಗೆ ಪ್ರತಿಕ್ರಿಯಿಸಿದ ಡಿ.ಕೆ.ಸುರೇಶ್, ಡಿಕೆಶಿ ಅವರ ಮೇಲೆ ಯಾವ ಕ್ರಿಮಿನಲ್ ಮೊಕದ್ದಮೆಗಳೂ ಇಲ್ಲ, ಅವರ ಮೇಲೆ ಭ್ರಷ್ಟಾಚಾರದ ಆರೋಪಗಳೂ ಇಲ್ಲ, ನ್ಯಾಯಾಲಯದ ದಿಕ್ಕುತಪ್ಪಿಸುವ ಯತ್ನವನ್ನು ಇಡಿ ಮಾಡುತ್ತಿದೆ ಎಂದರು.

ಡಿಕೆಶಿ ಅಭಿಮಾನಿಗಳು ವಾಪಸ್ ಹೋಗಲು ಮನವಿ
ರಾಜ್ಯದಿಂದ ಬಂದಿರುವ ಡಿಕೆ ಶಿವಕುಮಾರ್ ಅಭಿನಾಮಿಗಳು ವಾಪಸ್ ಮನೆಗಳಿಗೆ ತೆರಳಿ ಎಂದು ಮನವಿ ಮಾಡಿದ ಡಿ.ಕೆ.ಸುರೇಶ್, 'ಡಿಕೆಶಿ ಸಹ ಇದನ್ನೇ ಹೇಳಿದ್ದಾರೆ. ಅವರು ಗೆದ್ದು ಹಿಂತಿರುತ್ತಾರೆ, ರಾಜ್ಯದಲ್ಲಿ ಯಾರೂ ಬರುವುದು ಬೇಡ ಎಂದು ಡಿಕೆಶಿ ಮನವಿ ಮಾಡಿದ್ದಾರೆ' ಎಂದು ಅವರು ಹೇಳಿದ್ದಾರೆ.

ಡಿ.ಕೆ.ಶಿವಕುಮಾರ್ ಮೇಲೆ ಜನರ ಆಶೀರ್ವಾದವಿದೆ: ಡಿಕೆ ಸುರೇಶ್
ಡಿ.ಕೆ.ಶಿವಕುಮಾರ್ ಅವರನ್ನು ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ ಅದು ಸಾಧ್ಯವಾಗುವುದಿಲ್ಲ, ಕ್ಷೇತ್ರದ ಜನರ ಆಶೀರ್ವಾದ ಅವರ ಮೇಲೆ ಇದೆ, ರಾಜ್ಯದ ಜನರ ಅಭಿಮಾನ ಅವರಿಗೆ ಇದೆ ಎಂದು ಡಿ.ಕೆ.ಸುರೇಶ್ ವಿಶ್ವಾಸ ವ್ಯಕ್ತಪಡಿಸಿದರು.












Click it and Unblock the Notifications