ದೆಹಲಿ ಗಲಭೆ; ವರದಿ ನೀಡಲು ಕಾಂಗ್ರೆಸ್‌ನಿಂದ ಸಮಿತಿ ರಚನೆ
ನವದೆಹಲಿ, ಫೆಬ್ರವರಿ 28 : ಈಶಾನ್ಯ ದೆಹಲಿಯಲ್ಲಿ ನಡೆದ ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ 42ಕ್ಕೆ ಏರಿಕೆಯಾಗಿದೆ. ಗಲಭೆ ಕುರಿತು ವಿವರವಾದ ವರದಿ ನೀಡಲು ಎಐಸಿಸಿ ಐವರು ಸದಸ್ಯರ ಸಮಿತಿಯನ್ನು ರಚನೆ ಮಾಡಿದೆ.
ಪೌರತ್ವ ತಿದ್ದುಪಡಿ ಪರ-ವಿರೋಧ ಹೋರಾಟಗಾರರ ನಡುವೆ ಈಶಾನ್ಯ ದೆಹಲಿಯಲ್ಲಿ ಭಾನುವಾರ ಘರ್ಷಣೆ ನಡೆದಿತ್ತು. ಬಳಿಕ ನಡೆದ ಹಿಂಸಾಚಾರದಿಂದಾಗಿ ಜನರು ಆತಂಕಗೊಂಡಿದ್ದಾರೆ. ದೆಹಲಿ ಗಲಭೆ ಕೋಮುಗಲಭೆಯ ಸ್ವರೂಪವನ್ನು ಪಡೆದಿತ್ತು.

ಎಐಸಿಸಿ ಹಂಗಾಮಿ ಅಧ್ಯೆಕ್ಷೆ ಸೋನಿಯಾ ಗಾಂಧಿ ಶುಕ್ರವಾರ 5 ಸದಸ್ಯರ ತಂಡವನ್ನು ರಚಿಸಿದ್ದಾರೆ. ಗಲಭೆ ಪೀಡಿತ ಪ್ರದೇಶಗಳಿಗೆ ಈ ತಂಡ ಭೇಟಿ ನೀಡಲಿದ್ದು, ವಿವರವಾದ ವರದಿಯನ್ನು ನೀಡಲಿದೆ. ಈಗಾಗಲೇ ಗಲಭೆ ವಿಚಾರ ಮುಂದಿಟ್ಟುಕೊಂಡು ಕಾಂಗ್ರೆಸ್ ಕೇಂದ್ರ ಮತ್ತು ದೆಹಲಿ ಸರ್ಕಾರದ ವಿರುದ್ಧ ವಾಗ್ದಾಳಿಗಳನ್ನು ನಡೆಸುತ್ತಿದೆ.
ಐದು ಜನರ ತಂಡದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮುಖುಲ್ ವಾಸ್ನಿಕ್, ದೆಹಲಿ ಕಾಂಗ್ರೆಸ್ ಉಸ್ತುವಾರಿ ಶಕ್ತಿ ನಿನ್ಹ ಗೋಯಲ್, ಕುಮಾರಿ ಶಿಲ್ಜಾ, ತಾರೀಕ್ ಅನ್ವರ್, ಸುಶ್ಮಿತಾ ದೇವ್ ಸದಸ್ಯರಾಗಿದ್ದಾರೆ.
ಈಶಾನ್ಯ ದೆಹಲಿಯಲ್ಲಿ ಹಿಂಸಾಚಾರ ನಡೆದ ಸ್ಥಳಗಳಿಗೆ ಭೇಟಿ ನೀಡಿ ಶೀಘ್ರವೇ ವರದಿ ನೀಡುವಂತೆ ಸೋನಿಯಾ ಗಾಂಧಿ ಸೂಚನೆ ನೀಡಿದ್ದಾರೆ. ಗುರುವಾರ ರಾಷ್ಟ್ರಪತಿಗಳನ್ನು ಭೇಟಿಯಾಗಿದ್ದ ಕಾಂಗ್ರೆಸ್ ನಿಯೋಗ ರಾಷ್ಟ್ರಪತಿಗಳು ಮಧ್ಯಪ್ರವೇಶಕ್ಕೆ ಒತ್ತಾಯಿಸಿತ್ತು.












Click it and Unblock the Notifications