ದೆಹಲಿ: ಹಳದಿ ಮಾರ್ಗದ ಈ ನಿಲ್ದಾಣಗಳಲ್ಲಿ ಡಿ.30ರಂದು ಮೆಟ್ರೋ ಸೇವೆ ಸ್ಥಗಿತ
ನವದೆಹಲಿ, ಡಿಸೆಂಬರ್ 29: ನೀವು ನಾಳೆ ಅಂದರೆ ಗುರುವಾರದಂದು ದೆಹಲಿ ಮೆಟ್ರೋದ ಹಳದಿ ಮಾರ್ಗದಲ್ಲಿ ಪ್ರಯಾಣಿಸಲು ಯೋಜಿಸುತ್ತಿದ್ದರೆ ಈ ಸುದ್ದಿ ನಿಮಗೆ ಬಹಳ ಮುಖ್ಯ. ಡಿಎಂಆರ್‌ಸಿ ಹೊರಡಿಸಿದ ಹೇಳಿಕೆಯಲ್ಲಿ, ಪೂರ್ವ ಯೋಜಿತ ನಿರ್ವಹಣಾ ಕಾರ್ಯದಿಂದಾಗಿ, ಗುರುವಾರ ಹಳದಿ ಲೈನ್‌ನಲ್ಲಿ ಗ್ರೀನ್ ಪಾರ್ಕ್ ಮತ್ತು ಕುತುಬ್ ಮಿನಾರ್ ನಡುವೆ ಯಾವುದೇ ಸೇವೆ ಇರುವುದಿಲ್ಲ ಎಂದು ಹೇಳಲಾಗಿದೆ. ಈ ಅವಧಿಯಲ್ಲಿ ಹೌಜ್ ಖಾಸ್, ಮಾಳವೀಯ ನಗರ ಮತ್ತು ಸಾಕೇತ್ ನಿಲ್ದಾಣಗಳು ಮುಚ್ಚಲ್ಪಡುತ್ತವೆ.
ಪೂರ್ವ ನಿರ್ಧರಿತ ವೇಳಾಪಟ್ಟಿಯಂತೆ ಈ ನಿರ್ವಹಣೆ ಕಾರ್ಯ ನಡೆಯುತ್ತಿದೆ ಎಂದು ದೆಹಲಿ ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ. ಗುರುವಾರ ಬೆಳಗ್ಗೆ 6.30ರವರೆಗೆ ದೆಹಲಿ ಮೆಟ್ರೋದ ಹಳದಿ ಮಾರ್ಗದಲ್ಲಿ ಮೆಟ್ರೋ ರೈಲುಗಳು ಲಭ್ಯವಿರುವುದಿಲ್ಲ. ಇದರಿಂದಾಗಿ ಹೌಜ್ ಖಾಸ್, ಮಾಳವೀಯ ನಗರ ಮತ್ತು ಸಾಕೇತ್ ನಿಲ್ದಾಣಗಳಲ್ಲಿ ಮೆಟ್ರೋ ಲಭ್ಯವಿರುವುದಿಲ್ಲ ಮತ್ತು ನಿಲ್ದಾಣಗಳು ಮುಚ್ಚಲ್ಪಡುತ್ತವೆ. ಆದಾಗ್ಯೂ, ಈ ಸಮಯದಲ್ಲಿ ಗ್ರೀನ್ ಪಾರ್ಕ್ ಮತ್ತು ಕುತುಬ್ ಮಿನಾರ್ ನಡುವೆ ಫೀಡರ್ ಬಸ್‌ಗಳು ಲಭ್ಯವಿರುತ್ತವೆ ಮತ್ತು ಪ್ರಯಾಣಿಕರು ಅವುಗಳನ್ನು ಬಳಸಲು ಸಾಧ್ಯವಾಗುತ್ತದೆ. ಬೆಳಗ್ಗೆ 6.30ರ ನಂತರ ಇಡೀ ಮಾರ್ಗದಲ್ಲಿ ಸೇವೆಗಳು ಎಂದಿನಂತೆ ನಡೆಯಲಿವೆ ಎಂದು ಡಿಎಂಆರ್‌ಸಿ ತಿಳಿಸಿದೆ. ಈ ಮಾರ್ಗದಲ್ಲಿ ರೈಲು ಸೇವೆ ಬೆಳಿಗ್ಗೆ 5.45 ಕ್ಕೆ ಪ್ರಾರಂಭವಾಗುತ್ತದೆ. ಹೀಗಾಗಿ ಈ ನಿಲ್ದಾಣಗಳಲ್ಲಿ ಬೆಳಗ್ಗೆ 5.45ರಿಂದ 6.30ರವರೆಗೆ ಮೆಟ್ರೋ ಸಂಚಾರ ಇರುವುದಿಲ್ಲ ಎಂದು ಡಿಎಂಆರ್‌ಸಿ ಘೋಷಿಸಿದೆ.
ದೆಹಲಿಯಲ್ಲಿ ಓಮಿಕ್ರಾನ್ ಹೆಚ್ಚುತ್ತಿರುವ ಬೆದರಿಕೆಯನ್ನು ಗ್ರಹಿಸಿದ ಸರ್ಕಾರವು ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್ ಅಂದರೆ ಹಳದಿ ಎಚ್ಚರಿಕೆಯನ್ನು ಜಾರಿಗೆ ತಂದಿದೆ. ಜೊತೆಗೆ ಮೆಟ್ರೋ ರೈಲುಗಳ ಪ್ರಯಾಣದಲ್ಲೂ ಬದಲಾವಣೆಗಳನ್ನು ಮಾಡಲಾಗಿದೆ. ಈವರೆಗೆ ಭಾರತದಲ್ಲಿ 650 ಕ್ಕೂ ಹೆಚ್ಚು ಒಮಿಕ್ರಾನ್ ಪ್ರಕರಣಗಳು ಕಂಡುಬಂದಿವೆ. ರಾಜಧಾನಿ ದೆಹಲಿಯಲ್ಲಿ 165 ಪ್ರಕರಣಗಳು ದಾಖಲಾಗಿವೆ.

ಕೇಜ್ರಿವಾಲ್ ಸರ್ಕಾರದ ಎಚ್ಚರಿಕೆಯ ನಂತರ, ಈಗ ದೆಹಲಿ ಮೆಟ್ರೋ ರೈಲು ನಿಗಮ (ಡಿಎಂಆರ್‌ಸಿ) ತನ್ನ ಆಸನ ಸಾಮರ್ಥ್ಯವನ್ನು ಬದಲಾಯಿಸಿದೆ. DMRC ಪ್ರಕಾರ, ಕೋವಿಡ್ -19 ರ ಮಾರ್ಗಸೂಚಿಗಳ ದೃಷ್ಟಿಯಿಂದ, ಮೆಟ್ರೋದಲ್ಲಿ ಕೇವಲ 50 ಪ್ರತಿಶತದಷ್ಟು ಆಸನ ಸಾಮರ್ಥ್ಯದವರೆಗೆ ಮಾತ್ರ ಪ್ರಯಾಣವನ್ನು ಅನುಮತಿಸಲಾಗುತ್ತದೆ. ಯಾವುದೇ ಪ್ರಯಾಣಿಕರಿಗೆ ನಿಲ್ಲಲು ಅವಕಾಶವಿರುವುದಿಲ್ಲ. ಮಾರ್ಗಸೂಚಿಗಳ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ಗೇಟ್‌ಗಳ ಸಂಖ್ಯೆಯನ್ನು ಮಿತಿಗೊಳಿಸುವ ಮೂಲಕ ಮೆಟ್ರೋ ನಿಲ್ದಾಣಗಳಿಗೆ ಪ್ರವೇಶವನ್ನು ನಿಯಂತ್ರಿಸಲಾಗುತ್ತದೆ.
ಇದರೊಂದಿಗೆ ಮೆಟ್ರೋ ನಿಲ್ದಾಣದ 712 ಗೇಟ್‌ಗಳ ಪೈಕಿ 444 ಮಾತ್ರ ತೆರೆದಿರುತ್ತದೆ ಎಂದು ಹೇಳಲಾಗಿದೆ. ಅದರಲ್ಲಿ ಪ್ರಯಾಣಿಕರು ಪ್ರವೇಶ ಪಡೆಯುತ್ತಾರೆ. ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್ ಯೆಲ್ಲೋ ಅಲರ್ಟ್ ಅಡಿಯಲ್ಲಿ ದೆಹಲಿಯಲ್ಲಿ ರಾತ್ರಿ 10 ರಿಂದ ಬೆಳಿಗ್ಗೆ 5 ರವರೆಗೆ ರಾತ್ರಿ ಕರ್ಫ್ಯೂ ಇರುತ್ತದೆ. ಮೆಟ್ರೋ, ರೆಸ್ಟೋರೆಂಟ್‌ಗಳು, ಬಾರ್‌ಗಳು 50% ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸುತ್ತವೆ. ಸಿನಿಮಾ ಹಾಲ್‌ಗಳು, ಸ್ಪಾಗಳು, ಜಿಮ್‌ಗಳು, ಮಲ್ಟಿಪ್ಲೆಕ್ಸ್‌ಗಳು, ಬ್ಯಾಂಕ್ವೆಟ್ ಹಾಲ್‌ಗಳು, ಆಡಿಟೋರಿಯಂಗಳು ಮತ್ತು ಕ್ರೀಡಾ ಮೈದಾನಗಳಲ್ಲಿ ತಕ್ಷಣದಿಂದಲೇ ಈ ನಿಯಮ ಜಾರಿಗೆ ಬರುವಂತೆ ಆದೇಶಿಸಲಾಗಿದೆ. ರಾತ್ರಿ ಕರ್ಫ್ಯೂ ವೇಳೆ ಮೆಟ್ರೋ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.
ದೆಹಲಿ ಮೆಟ್ರೋದಲ್ಲಿ ಪ್ರಯಾಣಿಸುವ ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್‌ಗಳನ್ನು ಧರಿಸಿರಬೇಕು. ಮೆಟ್ರೋ ಒಳಪ್ರವೇಶದ ವೇಳೆ ಟೆಂಪರೇಚರ್ ಚೆಕ್ ಮಾಡಲಾಗುತ್ತದೆ. ಜೊತೆಗೆ ಹ್ಯಾಂಡ್ ಸ್ಯಾನಿಟೈಸರ್ ಕಡ್ಡಾಯವಾಗಿ ಮಾಡಿಕೊಳ್ಳಬೇಕಾಗುತ್ತದೆ. ಕೋವಿಡ್ ನಿಯಮ ಪಾಲಿಸದೇ ಇದ್ದಲ್ಲಿ ದಂಡ ವಿಧಿಸಲಾಗುತ್ತದೆ. ಇದನ್ನು ಮೇಲ್ವಿಚಾರಣೆ ಮಾಡಲು ಪೊಲೀಸರು, ಮೆಟ್ರೋ ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಾರೆ.












Click it and Unblock the Notifications