ದೆಹಲಿ ಸಾಮೂಹಿಕ ಆತ್ಮಹತ್ಯೆಗೂ ಕುಜದೋಷಕ್ಕೂ ಏನು ಸಂಬಂಧ?

ನವದೆಹಲಿ, ಜುಲೈ 04: ದೆಹಲಿಯ ಬುರಾರಿ ಸಾಮೂಹಿಕ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಸಿಕ್ಕ ಡೈರಿಯಿಂದ ಹೊಸ ಹೊಸ ವಿಚಿತ್ರ ಮಾಹಿತಿ ಲಭ್ಯವಾಗುತ್ತಿದೆ. ಈ ಎಲ್ಲ ಆತ್ಮಹತ್ಯೆಗಳ ರೂವಾರಿ ಎನ್ನಲಾಗುತ್ತಿರುವ ಲಲಿತ್ ಭಾಟಿಯಾ ಅವರಿಗೆ ತಮ್ಮ ಮಗಳು ಪ್ರಿಯಾಂಕಾಗೆ ಕುಜ ದೋಷವಿರುವುದು ಸಾಕಷ್ಟು ಬೇಸರ ಮೂಡಿಸಿತ್ತು. ಅದನ್ನೇ ಅವರು ತೀರಾ ತಲೆಗೆ ಹಚ್ಚಿಕೊಂಡಿದ್ದರು ಎಂದು ಡೈರಿಯ ಮೂಲಕ ತಿಳಿದುಬಂದಿದೆ.
ದೆಹಲಿಯ ಕ್ರೈಂ ಬ್ರಾಂಚ್ ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ 33 ವರ್ಷದ ಪ್ರಿಯಾಂಕಾ ಅವರಿಗೆ ಕುಜ ದೋಷವಿತ್ತು. ಅದಕ್ಕೆಂದೇ ಅವರಿಗೆ ಮದುವೆಯೂ ತಡವಾಗಿ ನಿಶ್ಚಯವಾಗಿತ್ತು. ಇದರಿಂದಾಗಿ ಮನೆ ಜನರಲ್ಲಿ ಸಿಕ್ಕಾಬಟ್ಟೆ ತಲೆ ಕೆಡಿಸಿಕೊಂಡಿದ್ದರು. ಲಲಿತ್ ಭಾಟಿಯಾ ಅಂತೂ ಈ ಕಾರಣಕ್ಕಾಗಿಯೇ ಮನೆಯಲ್ಲಿ ಹೋಮ-ಹವನಗಳನ್ನು ಮಾಡಿಸುತ್ತಲೇ ಇದ್ದರು.
ದೆಹಲಿ ಸಾಮೂಹಿಕ ಆತ್ಮಹತ್ಯೆ: ಮನೋರೋಗವೇ ಕಾರಣವೇ?
ಇದಾದ ನಂತರ ಪ್ರಿಯಾಂಕಾ ಅವರಿಗೆ ಜೂನ್ 17 ರಂದು ನಿಶ್ಚಿತಾರ್ಥವಾಗಿತ್ತು. ಮದುವೆಯ ಸಂಭ್ರಮದಲ್ಲಿದ್ದವರು ಇಂಥ ನಿರ್ಧಾರ ತೆಗೆದುಕೊಂಡಿದ್ದೇಕೆ ಎಂಬುದೇ ಈಗ ಪ್ರಶ್ನೆಯಾಗಿ ಉಳಿದಿದೆ. ಅಷ್ಟೇ ಅಲ್ಲ, ಅವರಿಗೆ ತಾವೆಲ್ಲರೂ ಒಂದೇ ದಿನ ಸಾಯುತ್ತೇವೆ ಎಂಬುದು ಗೊತ್ತಿದ್ದರೆ ಪ್ರಿಯಾಂಕಾ ಅವರಿಗೆ ಮದುವೆ ನಿಶ್ಚಯ ಮಾಡಿಸುವ ಅಗತ್ಯ ಏನಿತ್ತು ಎಂಬುದು ಅರ್ಥವಾಗದ ವಿಷಯವೆನ್ನಿಸಿದೆ.
ಜೂನ್ 30 - ಜುಲೈ 1ರ ನಡುವೆ ದೆಹಲಿಯ ಬುರಾರಿ ಎಂಬಲ್ಲಿ ಒಂದು ಮನೆಯಲ್ಲಿ ಒಂದೇ ಕುಟುಂಬದ 11 ಜನರ ಶವ ಪತ್ತೆಯಾಗಿತ್ತು. ಇವುಗಳಲ್ಲಿ 10 ಶವಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರೆ, 1 ಶವ ಮಾತ್ರ ನೆಲದ ಮೇಲೆ ಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ದೆಹಲಿಯಲ್ಲಿ 11 ಜನರ ನಿಗೂಢ ಆತ್ಮಹತ್ಯೆ ಮತ್ತು ಪ್ರಳಯದ ಸಂದೇಶ!
ಈ ಪ್ರಕರಣ ದೇಶದಾದ್ಯಂತ ಆತಂಕ ಮತ್ತು ಕುತೂಹಲ ಕೆರಳಿಸಿರುವುದಕ್ಕೆ ಕಾರಣ ಈ ಮನೆಯಲ್ಲಿ ಸಿಕ್ಕ ಡೈರಿಯೊಂದರಲ್ಲಿ ಸಿಕ್ಕ ವಿಚಿತ್ರ ಸಂಕೇತಗಳು. ಇದೊಂದು ಪೂರ್ವನಿರ್ಧರಿತ ಪ್ರಕರಣ ಎಂಬುದಕ್ಕೆ ಪೊಲೀಸರಿಗೆ ಹಲವು ಸಾಕ್ಷಿಗಳು ಸಿಕ್ಕಿದ್ದು, ತನಿಖೆ ನಡೆಯುತ್ತಿದೆ.
ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !