ಪತ್ನಿ ಸ್ನಾನ ಮಾಡುತ್ತಿದ್ದಾಗ ಇಣುಕಿದ್ದಕ್ಕೆ 6 ವರ್ಷದ ಬಾಲಕನ ಕೊಲೆ
ನವದೆಹಲಿ, ಸೆಪ್ಟೆಂಬರ್ 30: ತನ್ನ ಪತ್ನಿ ಸ್ನಾನ ಮಾಡುತ್ತಿದ್ದಾಗ ಇಣುಕಿ ನೋಡಿದ ಎಂಬ ಕಾರಣಕ್ಕೆ 19 ವರ್ಷದ ರೋಹಿತ್ ಎಂಬ ತರುಣನೊಬ್ಬ ಆರು ವರ್ಷದ ಬಾಲಕನನ್ನು ಹತ್ಯೆ ಮಾಡಿರುವ ದಾರುಣ ಘಟನೆ ಆಗ್ನೇಯ ದೆಹಲಿಯಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.
ದೆಹಲಿಯ ಓಕ್ಲಾ ಫೇಸ್ 2ನಲ್ಲಿ ತನ್ನ ತಂದೆ-ತಾಯಿಯೊಂದಿಗೆ ವಾಸವಾಗಿದ್ದ ಆರು ವರ್ಷದ , ಸೆಪ್ಟೆಂಬರ್ 27ರಿಂದ ಕಾಣೆಯಾಗಿದ್ದ. ಆ ಪ್ರಕರಣದ ತನಿಖೆ ನಡೆಸಿರುವ ಪೊಲೀಸರಿಗೆ ಆ ಬಾಲಕ ಕೊಲೆಯಾಗಿರುವುದು ಪತ್ತೆಯಾಗಿದೆ ಎಂದು ಆಗ್ನೇಯ ದೆಹಲಿಯ ಪೊಲೀಸ್ ಕಮೀಷನರ್ ರೊಮಿಲ್ ಬಾನಿಯಾ ಅವರು ತಿಳಿಸಿದ್ದಾರೆ.

ತನಿಖೆಯನ್ವಯ, ರೋಹಿತ್ ನನ್ನು ಪೊಲೀಸರು ಬಂಧಿಸಿದ್ದಾರೆ. ರೋಹಿತ್ ನ ಮನೆ ಹಾಗೂ ಕೊಲೆಯಾದ ಬಾಲಕನ ಮನೆಗಳು ನೆರೆಹೊರೆಯ ಮನೆಗಳೇ ಆಗಿದ್ದರಿಂದ ಆ ಮನೆಗೂ ಈ ಮನೆಗೂ ಒಂದು ರೀತಿಯ ಬಾಂಧವ್ಯವಿತ್ತು.
ಈ ಸಲುಗೆಯ ಅಲೆಯಲ್ಲಿ ತನಗರಿವಿಲ್ಲದೆ ಎಲ್ಲೆ ಮೀರಿದ್ದ ಆ ಆರು ವರ್ಷದ ಬಾಲಕ, ಒಮ್ಮೆ ರೋಹಿತ್ ಪತ್ನಿ ಸ್ನಾನ ಮಾಡುತ್ತಿದ್ದಾಗ ಬಾತ್ ರೂಂನೊಳಗೆ ಇಣುಕಿ ನೋಡಿ ಕ್ಷಲ್ಲಕವಾಗಿ ಟೀಕೆ ಮಾಡಿದ್ದ. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ರೋಹಿತ್ ದಂಪತಿ, ಸೆ. 27ರಂದು ತನ್ನ ಮನೆ ಮುಂದೆ ಆಡುತ್ತಿದ್ದ ಬಾಲಕನ್ನು ತಮ್ಮ ಮನೆಯೊಳಗೆ ಕರೆದು ವಿಚಾರಿಸಲು ಮುಂದಾಗಿ, ಮಾತಿಗೆ ಮಾತು ಬೆಳೆದು ರೋಹಿತ್ ಆತನನ್ನು ದೂಡಿದ್ದಾನೆ.
ಆಗ, ಆ ಬಾಲಕನ ತಲೆಯು ಮಂಚದ ಅಂಚಿಗೆ ಬಡಿದು ಆತ ಸ್ಥಳದಲ್ಲೇ ಮೃತನಾಗಿದ್ದಾನೆ. ಇದರಿಂದ ಬೆದರಿದ ರೋಹಿತ್, ಆ ಬಾಲಕನ್ನುಗೋಣಿ ಚೀಲದಲ್ಲಿ ಮುಚ್ಚಿ ರಾತ್ರಿಯಾದ ನಂತರ, ಆತನ ಮನೆಯ ಸನಿಹದಲ್ಲೇ ಹೂತು ಹಾಕಿದ್ದ. ಗುಂಡಿ ಆಳವಾಗಿ ತೋಡಿರದ ಕಾರಣ, ಕೆಲ ದಿನಗಳ ನಂತರ ಕೆಟ್ಟ ವಾಸನೆ ಬಂದಿದ್ದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದರು.
ಅಷ್ಟರಲ್ಲಾಗಲೇ ಬಾಲಕ ಕಾಣೆಯಾದ ದೂರಿನ ಬಗ್ಗೆ ತಲೆಕೆಡಿಸಿಕೊಂಡಿದ್ದ ಪೊಲೀಸರಿಗೆ ಆ ಬಾಲಕನ ಮನೆಯ ಬಳಿಯಲ್ಲೇ ಆ ಬಾಲಕ ಹೆಣವಾಗಿ ಸಿಕ್ಕಿದ್ದರಿಂದ ಪ್ರಕರಣ ತಿರುವು ಪಡೆದುಕೊಂಡು ಆರೋಪಿಯನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications