• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದೆಹಲಿ ಶಿಕ್ಷಣ ಮಾದರಿಯ ಯಶಸ್ಸಿಗೆ ದಶ ಸೂತ್ರಗಳು

|

ನವದೆಹಲಿ, ಜುಲೈ 14: ಸರ್ಕಾರಿ ಶಾಲೆಗಳೆಂದರೆ ಸಾರ್ವಜನಿಕರಿಗೆ ಅಷ್ಟಕಷ್ಟೇ, ಆದರೆ ಸರ್ಕಾರಿ ಶಾಲೆಗಳಲ್ಲಿಯೂ ಖಾಸಗಿ ಶಾಲೆಗಳಿಗಿಂತಲೂ ಉತ್ತಮ ಶಿಕ್ಷಣ ಮತ್ತು ಫಲಿತಾಂಶ ನೀಡುತ್ತೇವೆಂದು ಐದು ವರ್ಷಗಳ ಹಿಂದೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಾರ್ವಜನಿಕರಿಗೆ ನೀಡಿದ್ದ ಭರವಸೆಯನ್ನು ಉಳಿಸಿಕೊಳ್ಳುತ್ತಿದ್ದಾರೆ ಎಂದು ನಿನ್ನೆ ಪ್ರಕಟವಾದ ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ ಸಾಬೀತು ಮಾಡಿದೆ.

ಐದು ವರ್ಷಗಳ ಹಿಂದೆ ಕೇಜ್ರಿವಾಲ್ ಇಂತಹದೊಂದು ಭರವಸೆ ನೀಡಿದ್ದಾಗ ಸಾಕಷ್ಟು ಮಂದಿ ಹೀಯಾಳಿಸಿದ್ದರು. ಆದರೆ ಐದು ವರ್ಷಗಳ ಬಳಿಕ ಇಂದು ಐಷಾರಾಮಿ ಖಾಸಗಿ ಶಾಲೆಗಳಿಗಿಂತ ಸರ್ಕಾರದ ಶಿಕ್ಷಣ ಸಂಸ್ಥೆಗಳೇ ಅತ್ಯುತ್ತಮ ಫಲಿತಾಂಶ ನೀಡುತ್ತಿವೆ ಎಂಬುದನ್ನು ನಂಬಲೇ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಹೀಗಾಗಿ ದೆಹಲಿ ಶಿಕ್ಷಣ ವ್ಯವಸ್ಥೆಯು ಇಡೀ ದೇಶಕ್ಕೆ ಮಾದರಿ ಎಂಬುದು ಮತ್ತೊಮ್ಮೆ ಖಾತ್ರಿಯಾಗಿದೆ.ಈ ಕುರಿತ ಸಿಹಿ ಸುದ್ದಿಯನ್ನು ಹಂಚಿಕೊಂಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಈ ಬಾರಿ ಸರ್ಕಾರಿ ಶಿಕ್ಷಣ ಸಂಸ್ಥೆಗಳು ಸಿಬಿಎಸ್‌ಇ 12ನೇ ತರಗತಿಯಲ್ಲಿ ಶೇ.98ರಷ್ಟು ಫಲಿತಾಂಶ ಪಡೆದಿದೆ. ಇದು ಇಲ್ಲಿಯವರೆಗಿನ ಅತ್ಯಂತ ಹೆಚ್ಚಿನ ಫಲಿತಾಂಶವಾಗಿದೆ. ಈ ಐತಿಹಾಸಿಕ ಸಾಧನೆ ಬಗ್ಗೆ ನನಗೆ ಅತೀವವಾದ ಹೆಮ್ಮೆ ಇದೆ.

ನಮ್ಮ ಸರ್ಕಾರದ ಶಿಕ್ಷಣ ವಿಭಾಗ , ಎಲ್ಲಾ ವಿದ್ಯಾರ್ಥಿಗಳು, ಶಿಕ್ಷಕರು, ಪಾಲಕರು ಹಾಗೂ ಆಡಳಿತ ಮಂಡಳಿಗೆ ಧನ್ಯವಾದ ಅರ್ಪಿಸಲು ಇಷ್ಟ ಪಡುತ್ತೇನೆ ಎಂದಿದ್ದಾರೆ. ದೆಹಲಿ ಉಪಮುಖ್ಯಮಂತ್ರಿ ಮನೀಷ್ ಸಿಸೊಡಿಯಾ ಕೂಡ ಈ ಕುರಿತು ಟ್ವೀಟ್ ಮಾಡಿದ್ದು, ಕಳೆದ ಐದು ವರ್ಷಗಳಿಂದ ದೆಹಲಿಯ ಸರ್ಕಾರಿ ಶಾಲೆಗಳು ಪರಸ್ಪರ ತಮ್ಮ ದಾಖಲೆಗಳನ್ನೇ ಮುರಿದುಕೊಳ್ಳಲು ಸ್ಪರ್ಧೆಗಿಳಿದಿದೆ. ಇದು ಅತ್ಯಂತ ಸಂತಸದ ವಿಚಾರ, ಈ ವರ್ಷವೂ ಕೂಡ ಅಂತಹ ಅತ್ಯದ್ಭುತ ಸಾಧನೆಯನ್ನು ಮಾಡಿದ್ದಾರೆ.

ಕಳೆದ ಐದು ವರ್ಷದ ಫಲಿತಾಂಶ ಇಂತಿದೆ

2020: 98%

2019: 94.24%

2018: 90.6 %

2017: 88.2%

2016: 85.9%

ಈ ಫಲಿತಾಂಶಕ್ಕೆ ಕಾರಣವೇನು?

ಅರವಿಂದ್ ಕೇಕ್ರಿವಾಲ್ ಸರ್ಕಾರದ ಈ ಶೈಕ್ಷಣಿಕ ಮಾದರಿಗೆ ಕಾರಣವೇನು ಎಂದು ಎಲ್ಲರೂ ಕೇಳುತ್ತಿದ್ದಾರೆ. ಒಟ್ಟಾರೆ ದೆಹಲಿಯ ಶಿಕ್ಷಣ ಮಾದರಿಯನ್ನು ಗಮನಿಸಿದಾಗ ಈ ಹತ್ತು ಕಾರಣಗಳು ಗೋಚರಿಸುತ್ತಿವೆ.

-ಅತಿ ಹೆಚ್ಚು ಬಜೆಟ್: ದೇಶದಲ್ಲೇ ಅತ್ಯಂತ ಹೆಚ್ಚಿನ ಪ್ರಮಾಣದ ಬಜೆಟ್‌ನ್ನು ದೆಹಲಿ ಸರ್ಕಾರ ಶಿಕ್ಷಣಕ್ಕೆ ಮೀಡಲಿಡುತ್ತಿದೆ. ಪ್ರತಿ ವರ್ಷ ಶೇ.25ರಷ್ಟು ಹಣವನ್ನು ಶಿಕ್ಷಣಕ್ಕೆಮೀಸಲಿಡಲಾಗುತ್ತಿದೆ. ಕಳೆದ ಆರು ವರ್ಷಗಳಲ್ಲೇ ಅಧಿಕ ಬಜೆಟ್‌ನ್ನು ಶಿಕ್ಷಣಕ್ಕೆ ಮೀಸಲಿಡಲಾಗಿದೆ.

-ಆರು ವರ್ಷಗಳಲ್ಲಿ ದ್ವಿಗುಣ ತರಗತಿ ಕೊಠಡಿ ನಿರ್ಮಾಣ: ಕೇವಲ 6 ವರ್ಷಗಳಲ್ಲಿ ದೆಹಲಿ ಸರ್ಕಾರಿ ಶಾಲೆಗಳಲ್ಲಿನ ಕೊಠಡಿಗಳ ಸಂಖ್ಯೆ ದುಪ್ಪಟ್ಟು ಹೆಚ್ಚಾಗಿದೆ. ಈ ಹಿಂದೆ 17 ಸಾವಿರದಷ್ಟು ಕೊಠಡಿಗಳಿದ್ದು, ಈಗ 37 ಸಾವಿರವನ್ನು ದಾಟಿದೆ.

-ಜಾಗತಿಕ ಮಟ್ಟದ ಮೂಲಸೌಕರ್ಯ: ಆಧುನಿಕ ಮೂಲ ಸೌಕರ್ಯ ವ್ಯವಸ್ಥೆಗಳನ್ನು ದೆಹಲಿಯ ಶಾಲೆಗಳಿಗೆ ನೀಡಲಾಗಿದೆ. ಉದಾಹರಣೆಗೆ, ಈಜುಕೊಳ, ಆಡಿಟೋರಿಯಂ, ಪ್ರಯೋಗಾಲಯ, ಗ್ರಂಥಾಲಯ ಸೇರಿ ಇತರೆ ಮೂಲ ಸೌಕರ್ಯವನ್ನು ದೆಹಲಿ ಶಾಲೆಗಳಿಗೆ ನೀಡಲಾಗಿದೆ.

-ವಿದೇಶಗಳಲ್ಲಿ ಶಿಕ್ಷಕರಿಗೆ ತರಬೇತಿ: ದೆಹಲಿಯ ಸರ್ಕಾರಿ ಶಾಲೆಗಳಲ್ಲಿನ ಮಕ್ಕಳಿಗೆ ವಿಶ್ವ ದರ್ಜೆಯ ಶಿಕ್ಷಣ ವ್ಯವಸ್ಥೆಯನ್ನು ನೀಡುವ ಸಲುವಾಗಿ ವಿದೇಶದ ಖ್ಯಾತ ಶಿಕ್ಷಣ ಸಂಸ್ಥೆಗಳಲ್ಲಿ ದೆಹಲಿಯ ಸರ್ಕಾರಿ ಶಿಕ್ಷಕರಿಗೆ ತರಬೇತಿ ನೀಡಲಾಗಿದೆ. ಅದರಲ್ಲೂ ವಿಶೇಷವಾಗಿ, ಕೇಂಬ್ರಿಡ್ಜ್, ಸಿಂಗಾಪೂರ್, ಫಿನ್‌ಲೆಂಡ್ ಇಲ್ಲಿ ತರಬೇತಿ ನೀಡಲಾಗಿದೆ.

-ಮುಖ್ಯಮಂತ್ರಿಯಿಂದಲೇ ನೇರ ಮುತುವರ್ಜಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಖುದ್ದಾಗಿ ವಿದ್ಯಾರ್ಥಿಗಳು, ಶಿಕ್ಷಕರು, ಪಾಲಕರೊಂದಿಗೆ ನೇರವಾಗಿ ನಿರಂತರ ಮಾತುಕತೆಗಳನ್ನು ನಡೆಸುತ್ತಿದ್ದರು, ಇದು ಸರ್ಕಾರಿ ಶೈಕ್ಷಣಿಕ ವ್ಯವಸ್ಥೆಯಲ್ಲಿ ನೈತಿಕ ಸ್ಥೈರ್ಯವನ್ನು ಹೆಚ್ಚಿಸಲು ನೆರವಾಯಿತು. ಮುಖ್ಯಮಂತ್ರಿಯೇ ಖುದ್ದಾಗಿ ಪಾಲಕರ ಸಭೆಯಲ್ಲಿ ಭಾಗಿಯಾಗಿದ್ದರು. ಹಾಗೆಯೇ ಉಪಮುಖ್ಯಮಂತ್ರಿ ಮನೀಷ್ ಸಿಸೊಡಿಯಾ ಆಗಾಗ ಎಲ್ಲಾ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ಖುದ್ದಾಗಿ ಪರಿಶೀಲಿಸುತ್ತಿದ್ದರು.

-ಶಿಕ್ಷಣ ತಜ್ಞರ ಸಲಹೆ: ಆಕ್ಸ್‌ಫರ್ಡ್‌ನಲ್ಲಿ ಶಿಕ್ಷಣ ಮುಗಿಸಿ ಬಂದಿರುವ ಎಎಪಿ ಶಾಸಕಿ ಆತಿಶಿ ನೇತೃತ್ವದ ಶೈಕ್ಷಣಿಕ ಸಮಿತಿಯು ದೇಶದಲ್ಲಿನ ಅತ್ಯುತ್ತಮ ಶೈಕ್ಷಣಿಕ ಮಾದರಿ, ಶಿಕ್ಷಣ ತಜ್ಞರು ಹಾಗೂ ಎನ್‌ಜಿಓಗಳನ್ನು ಒಗ್ಗೂಡಿಸಿ ಸರ್ಕಾರಕ್ಕೆ ಸಲಹೆ ಸೂಚನೆಗಳನ್ನು ನೀಡಿದ್ದು ನೆರವಾಯಿತು.

-ಶಿಕ್ಷಕರು-ಪಾಲಕರ ಸಭೆ: ಶಿಕ್ಷಣ ವ್ಯವಸ್ಥೆಯಲ್ಲಿ ಪಾಲಕರ ಪಾಲುದಾರಿಕೆ ಅತ್ಯಂತ ಮಹತ್ವದ್ದು ಎಂದು ಸರ್ಕಾರ ತಿಳಿದುಕೊಂಡಿದೆ. ಹೀಗಾಗಿ ಪಾಲಕರು ಹಾಗೂ ಶಿಕ್ಷಕರ ಸಭೆಯನ್ನು ದೆಹಲಿ ಸರ್ಕಾರಿ ಶಾಲೆಗಳಲ್ಲಿ ನಿರಂತರವಾಗಿ ಮಾಡಲಾಗುತ್ತಿದೆ. ಇದು ದೇಶದಲ್ಲೇ ಅತ್ಯಂತ ಅಪರೂಪದ ಮಾದರಿಯಾಗಿದೆ. ಖಾಸಗಿ ಶಾಲೆಗಳಂತೆ ಸರ್ಕಾರಿ ಶಾಲೆಗಳಲ್ಲೂ ನಿರ್ವಹಣೆ ಮಾಡಲಾಗುತ್ತಿದೆ.

-ಶಾಲೆಗೆ ಮಾಜಿ ಸೈನಿಕರ ಉಸ್ತುವಾರಿ: ಖಾಸಗಿ ಶಾಲೆಗಳಂತೆ ಸರ್ಕಾರಿ ಶಾಲೆಗಳಿಗೂ ಕಟ್ಟುನಿಟ್ಟಿನ ಆಡಳಿತ ಮಂಡಳಿಗಳನ್ನು ದೆಹಲಿ ಸರ್ಕಾರ ನೇಮಿಸಿದೆ. ಸೇನೆಯ ಮಾಜಿ ಅಧಿಕಾರಿಗಳನ್ನು ಸರ್ಕಾರಿ ಶಾಲೆಯ ಮೇಲುಸ್ತುವಾರಿಗೆ ನೇಮಿಸಲಾಗಿದೆ. ಶಾಲೆಯ ಪ್ರಾಂಶುಪಾಲರು ಶೈಕ್ಷಣಿಕ ವ್ಯವಸ್ಥೆಯನ್ನು ನೋಡಿಕೊಂಡರೆ ಉಳಿದ ಆಡಳಿತಾತ್ಮಕ ನಿರ್ವಹಣೆಯನ್ನು ಮಾಜಿ ಅಧಿಕಾರಿಗಳಿಗೆ ನೀಡಲಾಗಿದೆ.

-ಶಿಕ್ಷಣದಲ್ಲಿ ಹೊಸತನ:ಮಕ್ಕಳಲ್ಲಿ ಕಲಿಕೆ ಹಾಗೂ ಕೌಶಲ್ಯ ವೃದ್ಧಿಸಲು ಸರ್ಕಾರ ಹೊಸ ಯೋಜನೆಗಳನ್ನು ಜಾರಿ ಮಾಡಿದೆ, ನಿರಂತರ ಶಿಕ್ಷಣದ ಜೊತೆಗೆ ಕೌಶಲ್ಯ ವೃದ್ಧಿಗೂ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ನಿರಂತರ ತರಬೇತಿಯನ್ನು ನೀಡಲಾಗುತ್ತಿದೆ.

-ತಂತ್ರಜ್ಞಾನದ ನೆರವು: ಎಲ್ಲಾ ವಿದ್ಯಾರ್ಥಿಗಳಿಗೆ ತಂತ್ರಜ್ಞಾನದ ಮೂಲಕ ಶಿಕ್ಷಣವನ್ನು ಕಲಿಸುವ ಸಲುವಾಗಿ ಹಾಗೂ ಶಿಕ್ಷಕರಿಗೆ ತಾಂತ್ರಿಕ ನೆರವು ನೀಡುವ ಸಲುವಾಗಿ ಎಲ್ಲಾ ಶಿಕ್ಷಕರಿಗೂ ಮೊಬೈಲ್ ಟ್ಯಾಬ್ಲೆಟ್‌ಗಳನ್ನು ನೀಡಲಾಗಿದೆ.

English summary
Delhi Government Get Tremendous results in CBSE 12 Chief Minister Arvind Kejriwal gave 10 reason for the good results.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X