ದೆಹಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಅಜಯ್ ಮಕೇನ್ ರಾಜೀನಾಮೆ
ನವದೆಹಲಿ, ಜನವರಿ 04: ದೆಹಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಅಜಯ್ ಮಕೇನ್ ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಅವರ ರಾಜೀನಾಮೆಯನ್ನು ಸ್ವೀಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಲೋಕಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗ ಮಕೇನ್ ರಾಜೀನಾಮೆ ಕುತೂಹಲ ಕೆರಳಿಸಿದೆ. ಆದರೆ ಕೇಂದ್ರದಲ್ಲಿ ಮಕೇನ್ ಅವರಿಗೆ ಮಹತ್ವದ ಜವಾಬ್ದಾರಿಯನ್ನು ಕಾಂಗ್ರೆಸ್ ನೀಡುವ ಸಾಧ್ಯತೆ ಇರುವುದರಿಂದ ಅವರು ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.
54 ವರ್ಷ ವಯಸ್ಸಿನ ಮಕೇನ್ ಕಳೆದ ನಾಲ್ಕು ವರ್ಷಗಳಿಂದ ದೆಹಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಜವಾಬ್ದಾರಿಯನ್ನು ಮಕೇನ್ ಹೊತ್ತಿದ್ದರು.

ಗುರುವಾರ ರಾತ್ರಿ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿದ್ದ ಮಕೇನ್, ನಂತರ ತಮ್ಮ ರಾಜೀನಾಮೆಯನ್ನು ಘೋಷಿಸಿದ್ದಾರೆ. ಕಳೆದ ಮೂರು ತಿಂಗಳ ಹಿಂದೆಯೇ ಮಕೇನ್ ಅವರನ್ನು ಕಾಂಗ್ರೆಸ್ ಹಿರಿಯರೇ ರಾಜೀನಾಮೆ ನೀಡುವಂತೆ ಒತ್ತಾಯಿಸಿದ್ದಾರೆ ಎನ್ನಲಾಗಿತ್ತು. ಆದರೆ ಈ ಸುದ್ದಿಯನ್ನು ಅಲ್ಲಗಳೆದಿದ್ದ ಕಾಂಗ್ರೆಸ್ ವರಿಷ್ಠರು, ಮಕೇನ್ ಕೆಲ ಆರೋಗ್ಯ ಸಮಸ್ಯೆಯಿಂದ ತಾತ್ಕಾಲಿಕವಾಗಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದರು ಎಂದಿತ್ತು.
ಎರಡು ಬಾರಿ ಸಂಸದರಾಗಿದ್ದ ಮತ್ತು ಒಮ್ಮೆ ಕೇಂದ್ರ ಸಚಿವರೂ ಆಗಿ ಸೇವೆ ಸಲ್ಲಿಸಿದ ಅನುಭವವನ್ನು ಮಕೇನ್ ಹೊಂದಿದ್ದಾರೆ.
2017 ರಲ್ಲಿ ನಡೆದ ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿನ ಹೊಣೆ ಹೊತ್ತು ಮಕೇನ್ ರಾಜೀನಾಮೆ ನೀದಿದ್ದರು. ಆದರೆ ಆ ಸಂದರ್ಭದಲ್ಲಿ ಅವರ ರಾಜೀನಾಮೆಯನ್ನು ರಾಹುಲ್ ಗಾಂಧಿ ಸ್ವೀಕರಿಸದೇ, ಮಕೇನ್ ಅವರೇ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಬೇಕು ಎಂದಿದ್ದರು.












Click it and Unblock the Notifications