ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯಲ್ಲಿ ಭಾರೀ ಹೈಡ್ರಾಮ: ಎಎಪಿ ಶಾಸಕರಿಂದ ಸಿಎಸ್ ಮೇಲೆ ಹಲ್ಲೆ?

By Sachhidananda Acharya
|
Google Oneindia Kannada News

ನವದೆಹಲಿ, ಫೆಬ್ರವರಿ 20: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದು ಭಾರೀ ಹೈಡ್ರಾಮವೇ ನಡೆದಿದೆ.

ವರದಿಗಳ ಪ್ರಕಾರ ಸೋಮವಾರ ರಾತ್ರಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನಿವಾದಲ್ಲಿ ಇಬ್ಬರು ಎಎಪಿ ಶಾಸಕರು ಮುಖ್ಯ ಕಾರ್ಯದರ್ಶಿ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಸರಕಾರದ ಸೌಲಭ್ಯಗಳನ್ನು ಮನೆ ಬಾಗಿಲಿಗೆ ತಲುಪಿಸುವ ಸರಕಾರದ ಯೋಜನೆಯ ಸಂಬಂಧ ಮುಖ್ಯ ಕಾರ್ಯದರ್ಶಿ ಮತ್ತು ಶಾಕಸರ ನಡುವೆ ಕಾವೇರಿದ ವಾಗ್ವಾದ ನಡೆದು ಇದು ಹಲ್ಲೆಯಲ್ಲಿ ಅಂತ್ಯವಾಗಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ.

ಮಂಗಳವಾರ ಬೆಳಗ್ಗೆ ಮುಖ್ಯ ಕಾರ್ಯದರ್ಶಿ ಅಂಶು ಪ್ರಕಾಶ್ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಭೇಟಿಯಾಗಿ ಎಎಪಿ ಶಾಸಕರ ವಿರುದ್ಧ ಪ್ರಕರಣ ದಾಖಲಿಸುತ್ತಿದ್ದಂತೆ ಈ ಘಟನೆ ಬೆಳಕಿಗೆ ಬಂದಿದೆ.

ಅರವಿಂದ ಕೇಜ್ರಿವಾಲ್ ನಿವಾಸದಲ್ಲಿ ಎಎಪಿ ಶಾಸಕರಾದ ಅಜಯ್ ದತ್ ಮತ್ತು ಪ್ರಕಾಶ್ ಝರ್ವಾಲ್ ತಮ್ಮ ಮೇಲೆ ಹಲ್ಲೆ ಮಾಡಿದ್ದಾಗಿ ಅಂಶು ಪ್ರಕಾಶ್ ದೂರಿದ್ದಾರೆ.

ಆರೋಪ ತಳ್ಳಿ ಹಾಕಿದ ಸಿಎಂ ಕಚೇರಿ

ಆರೋಪ ತಳ್ಳಿ ಹಾಕಿದ ಸಿಎಂ ಕಚೇರಿ

ಆದರೆ ಮುಖ್ಯಮಂತ್ರಿ ಕಚೇರಿ ಈ ಆರೋಪವನ್ನು ತಳ್ಳಿ ಹಾಕಿದ್ದು ಈ ರೀತಿಯ ಘಟನೆಯೇ ನಡೆದಿಲ್ಲ ಎಂದು ಹೇಳಿದೆ. ಮುಖ್ಯಕಾರ್ಯದರ್ಶಿ ಬಿಜೆಪಿ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಎಂದು ಎಎಪಿ ದೂರಿದೆ.

"ದೆಹಲಿ ಮುಖ್ಯಮಂತ್ರಿ ಕಾರ್ಯಲಾಯವು ಖಂಡಾತುಂಡವಾಗಿ ಘಟನೆಯನ್ನು ಅಲ್ಲಗಳೆಯುತ್ತದೆ. ಮತ್ತು ಹಲ್ಲೆ ನಡೆಸುವ ಮತ್ತು ಹಲ್ಲೆಗೆ ಯತ್ನ ನಡೆಸುವ ಘಟನೆಗಳೇ ನಡೆದಿಲ್ಲ," ಎಂದು ಕಾರ್ಯಾಲಯ ಸ್ಪಷ್ಟಪಡಿಸಿದೆ.

ಆಧಾರ್ ಸಮಸ್ಯೆ

ಆಧಾರ್ ಸಮಸ್ಯೆ

ಈ ಬಗ್ಗೆ ವಿವರ ನೀಡಿರುವ ಎಎಪಿ ನಾಯಕ ಆತಿಶಿ ಮರ್ಲೆನಾ, "2.5 ಲಕ್ಷಕ್ಕೂ ಹೆಚ್ಚು ಜನಕ್ಕೆ ರೇಷನ್ ಸಿಗುತ್ತಿಲ್ಲ. ಆಧಾರ್ ಕಾರ್ಡ್ ಕಡ್ಡಾಯ ಮಾಡಿರುವುದನ್ನು ಸರಿಯಾಗಿ ಜಾರಿಗೆ ತರದೇ ಇದ್ದುದರಿಂದ ಈ ಸಮಸ್ಯೆಯಾಗಿದೆ. ಈ ಬಗ್ಗೆ ಶಾಸಕರ ಮೇಲೆ ಸಾರ್ವಜನಿಕರಿಂದ ಭಾರೀ ಒತ್ತಡವಿದೆ. ಈ ಸಂಬಂಧ ಸಿಎಂ ನಿವಾಸದಲ್ಲಿ ಸಭೆ ನಡೆಯುತ್ತಿತ್ತು. ಸಭೆಯಲ್ಲಿ ಪ್ರಶ್ನೆಗಳಿಗೆ ಉತ್ತರಿಸಲು ಸಿಎಸ್ ನಿರಾಕರಿಸಿದರು. ನಾನು ಸಿಎಂ ಮತ್ತು ಶಾಸಕರಿಗೆ ಉತ್ತರದಾಯಿಯಲ್ಲ. ಕೇವಲ ಲೆಫ್ಟಿನೆಂಟ್ ಗವರ್ನರ್ ಗೆ ಮಾತ್ರ ಉತ್ತರದಾಯಿ ಎಂದು ಹೇಳಿದರು,"' ಎಂಬುದಾಗಿ ಹೇಳಿದ್ದಾರೆ.

ಮುಖ್ಯ ಕಾರ್ಯದರ್ಶಿ ಪ್ರಕಾಶ್ ದೆಹಲಿ ಆಡಳಿತವನ್ನೇ ಹದಗೆಡಿಸಲು ಯತ್ನಿಸುತ್ತಿದ್ದಾರೆ ಎಂದೂ ಅವರು ದೂರಿದ್ದಾರೆ.

ಬಿಜೆಪಿ ಕೈವಾಡ

ಬಿಜೆಪಿ ಕೈವಾಡ

"ಇದೀಗ ಅವರು (ಸಿಎಸ್) ಈ ರೀತಿಯ ಆರೋಪಗಳನ್ನು ಮಾಡುತ್ತಿದ್ದಾರೆ. ಬಿಜೆಪಿಯ ಪರವಾಗಿ ಅವರು ಹೀಗೆಲ್ಲಾ ಮಾಡುತ್ತಿದ್ದಾರೆ. ದೆಹಲಿಯಲ್ಲಿ ಸರಕಾರವನ್ನು ಅಲ್ಲಾಡಿಸಬೇಕು ಎಂದು ಅಧಿಕಾರಿಗಳು ಮತ್ತು ಲೆಫ್ಟಿನೆಂಟ್ ಗವರ್ನರ್ ಬಳಸಿಕೊಂಡು ಬಿಜೆಪಿ ಈ ಹಿಂದೆಯೇ ಕೀಳುಮಟ್ಟದ ತಂತ್ರಗಳನ್ನು ಮಾಡಿತ್ತು," ಎಂದು ಎಎಪಿ ತನ್ನ ಪತ್ರಿಕಾ ಹೇಳಿಕೆಯಲ್ಲಿ ಹೇಳಿದೆ.

ಘಟನೆ ಬೆಳಕಿಗೆ ಬರುತ್ತಿದ್ದಂತೆ ತುರ್ತು ಸಭೆ ಕರೆದಿರುವ ಐಎಎಸ್ ಅಧಿಕಾರಿಗಳ ಒಕ್ಕೂಟ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಎಎಪಿ ಶಾಸಕರ ವಿರುದ್ಧ ಪೊಲೀಸ್ ಕೇಸ್ ದಾಖಲಿಸುವಂತೆ ಒತ್ತಾಯಿಸಿದೆ.

ಐಎಎಸ್ ಅಧಿಕಾರಿಗಳ ಪ್ರತಿಭಟನೆ

ಐಎಎಸ್ ಅಧಿಕಾರಿಗಳ ಪ್ರತಿಭಟನೆ

"ನಾವು ತಕ್ಷಣದಿಂದಲೇ ಪ್ರತಿಭಟನೆ ನಡೆಸಲಿದ್ದೇವೆ. ನಾವು ನಮ್ಮ ಮುಖ್ಯ ಕಾರ್ಯದರ್ಶಿ ಜತೆಗೆ ನಿಲ್ಲಲಿದ್ದೇವೆ. ಹಲ್ಲೆ ಮಾಡಿದವರನ್ನು ಬಂಧಿಸುವವರೆಗೂ ನಾವು ಹಿಂಜರಿಯುವುದಿಲ್ಲ," ಎಂದು ದೆಹಲಿ ಅಧಿಕಾರಿಗಳ ಸಂಘದ ಅಧ್ಯಕ್ಷ ಡಿಎನ್ ಸಿಂಗ್ ಹೇಳಿದ್ದಾರೆ.

ನಾವು ಕಾನೂನು ಕ್ರಮ ಕೈಗೊಳ್ಳುವಂತೆ ಲೆಫ್ಟಿನೆಂಟ್ ಗವರ್ನರ್ ರನ್ನು ಒತ್ತಾಯಿಸುತ್ತಿದ್ದೇವೆ. ಈ ರೀತಿಯ ಸಾಂವಿಧಾನಿಕ ಬಿಕ್ಕಟ್ಟು ಹಿಂದೆಂದೂ ಉದ್ಭವಿಸಿರಲಿಲ್ಲ ಎಂದೈ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಎಪಿಯಿಂದಲೂ ದೂರು

ಎಎಪಿಯಿಂದಲೂ ದೂರು

ಇನ್ನು ಮುಖ್ಯ ಕಾರ್ಯದರ್ಶಿ ಜಾತಿ ಹಿಡಿದು ನಿಂದಿಸಿದ್ದಾರೆ ಎಂದು ಹೇಳಿ ಎಎಪಿ ಶಾಸಕ ಪ್ರಕಾಶ್ ಜರ್ವಾಲ್ ಎಸ್.ಸಿ/ಎಸ್.ಟಿ ಆಯೋಗಕ್ಕೆ ದೂರು ನೀಡಿದ್ದಾರೆ.

ಆಶೀಶ್ ಖೇತನ್ ಮೇಲೆ ಹಲ್ಲೆ?

ಆಶೀಶ್ ಖೇತನ್ ಮೇಲೆ ಹಲ್ಲೆ?

ಇನ್ನು ಇಂದು ಬೆಳಿಗ್ಗೆ ಎಎಪಿ ನಾಯಕ ಆಶೀಶ್ ಖೇತನ್ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ದೆಹಲಿ ಸಚಿವಾಲಯದಲ್ಲಿ ತಮ್ಮನ್ನು ತಳ್ಳಾಡಲಾಯಿತು ಎಂದು ಹೇಳಿದ್ದಾರೆ. ನಂತರ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿದ್ದರು. ಈ ಸಂದರ್ಭ ಸಚಿವಾಲಯದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಖೇತನ್, "ಸಚಿವಾಲಯದಲ್ಲಿ ಗಲಭೆ ರೀತಿಯ ಪರಿಸ್ಥಿತಿ ಇತ್ತು. ಗುಂಪೊಂದು ಸುತ್ತುವರಿದು ಘೋಷಣೆಗಳನ್ನು ಕೂಗುತ್ತಿದ್ದರು. ನಮಗೆ ಅವರು ಯಾರೆಂದೇ ಗೊತ್ತಿಲ್ಲ. ಅಲ್ಲಿಂದ ಪೊಲೀಸರು ಸುಮ್ಮನಿದ್ದರು. ಎಲ್ಲಾ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿದ್ದು ಅದನ್ನು ಕ್ಲಿಯರ್ ಮಾಡಲಾಗಿದೆ," ಎಂದು ಹೇಳಿದ್ದಾರೆ.

ವರದಿ ಕೇಳಿದ ಗೃಹ ಇಲಾಖೆ

ವರದಿ ಕೇಳಿದ ಗೃಹ ಇಲಾಖೆ

ಘಟನೆ ಬಗ್ಗೆ ರಾಷ್ಟ್ರ ಮಟ್ಟದಲ್ಲಿ ಚರ್ಚೆ ಆರಂಭವಾಗಿದ್ದು ಘಟನೆ ಬಗ್ಗೆ ವರದಿ ನೀಡುವಂತೆ ಕೇಂದ್ರ ಗೃಹ ಇಲಾಖೆ ಲೆಫ್ಟಿನೆಂಟ್ ಗವರ್ನರ್ ಗೆ ಕೋರಿಕೆ ಸಲ್ಲಿಸಿದೆ.

ಘಟನೆ ಬಗ್ಗೆ ತಮಗೆ ನೋವಾಗಿದೆ. ಸರಕಾರಿ ಅಧಿಕಾರಿಗಳು ಗೌರವದಿಂದ ಮತ್ತು ಧೈರ್ಯದಿಂದ ಕೆಲವ ಮಾಡುವ ವಾತಾವರಣ ಇರಬೇಕು ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಇನ್ನು ಘಟನೆಯನ್ನು ಕಾಂಗ್ರೆಸ್ ಮತ್ತು ಬಿಜೆಪಿ ಖಂಡಿಸಿದ್ದು ಎಎಪಿ ವಿರುದ್ಧ ಕಿಡಿಕಾರಿವೆ.

English summary
In a shocking incident, two Aam Aadmi Party (AAP) MLAs allegedly assaulted Delhi Chief Secretary at the residence of Chief Minister Arvind Kejriwal on Monday night.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X