ಒಂದೇ ದಿನದಲ್ಲಿ 1,59,632 ಕೊರೊನಾ ಕೇಸ್: ದೇಶದಲ್ಲಿ ಹೆಚ್ಚಾದ ಆತಂಕ
ನವದೆಹಲಿ ಜನವರಿ 09: ದಿನ ಕಳೆದಂತೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು ಮತ್ತೊಮ್ಮೆ ಜನರಲ್ಲಿ ಭೀತಿ ಮೂಡಿಸಿದೆ. ಭಾನುವಾರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 1,59,632 ಹೊಸ ಕೊರೋನಾ ಪ್ರಕರಣಗಳು ವರದಿಯಾಗಿವೆ ಮತ್ತು 327 ಜನರು ಸಾವನ್ನಪ್ಪಿದ್ದಾರೆ. ಜೊತೆಗೆ ಕಳೆದ 24 ಗಂಟೆಗಳಲ್ಲಿ 40,863 ಜನರು ಗುಣಮುಖರಾಗಿದ್ದಾರೆ. ಪ್ರಸ್ತುತ ಭಾರತದಲ್ಲಿ ಕೊರೊನಾದ ಒಟ್ಟು ಸಕ್ರಿಯ ಪ್ರಕರಣಗಳು 5,90,611ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಸೋಂಕಿತರ ಸಾವಿನ ಸಂಖ್ಯೆ 4,83,790ಕ್ಕೆ ಏರಿಕೆಯಾಗಿದ್ದು, ದೇಶದಲ್ಲಿ ಇದುವರೆಗೆ 151.58 ಕೋಟಿ ಜನರು ಕೊರೋನಾ ವಿರುದ್ಧ ಲಸಿಕೆ ಹಾಕಿಸಿಕೊಂಡಿದ್ದಾರೆ. ದೇಶದ ಪಾಸಿಟಿವಿಟಿ ರೇಟ್ 10.21% ರಷ್ಟಿದೆ. ಈವರೆಗೆ ಒಟ್ಟು 3,44,53,603 ಜನ ಗುಣಮುಖರಾಗಿದ್ದಾರೆ. ಇಲ್ಲಿಯವರೆಗೆ ದೇಶದಲ್ಲಿ 3,623 ಓಮಿಕ್ರಾನ್ ಪ್ರಕರಣಗಳು ದಾಖಲಾಗಿವೆ. 1,409 ಜನರು ಆಸ್ಪತ್ರೆಯಿಂದ ಚೇತರಿಸಿಕೊಂಡು ಮನೆಗೆ ಮರಳಿದ್ದಾರೆ.

ದೇಶದಲ್ಲಿ ಕೊರೊನಾಘಾತ
ರಾಜ್ಯಗಳ ಬಗ್ಗೆ ಮಾತನಾಡುವುದಾದರೆ, ಕಳೆದ 24 ಗಂಟೆಗಳಲ್ಲಿ ಮಿಜೋರಾಂನಲ್ಲಿ 903 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ, ಜಾರ್ಖಂಡ್‌ನಲ್ಲಿ ಕಳೆದ 24 ಗಂಟೆಗಳಲ್ಲಿ 5,081 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ ಮತ್ತು 3 ಜನರು ಸಾವನ್ನಪ್ಪಿದ್ದಾರೆ. ಕಳೆದ 24 ಗಂಟೆಗಳಲ್ಲಿ ತಮಿಳುನಾಡಿನಲ್ಲಿ 10,978 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ. 1,525 ರೋಗಿಗಳನ್ನು ಬಿಡುಗಡೆ ಮಾಡಲಾಗಿದ್ದು ಕೊರೊನಾಕ್ಕೆ 10 ರೋಗಿಗಳು ಸಾವನ್ನಪ್ಪಿದ್ದಾರೆ.

ಮಕ್ಕಳಿಗೆ ಲಸಿಕೆ
ದೇಶದಲ್ಲಿ ಹೆಚ್ಚುತ್ತಿರುವ ಕೊರೋನಾ ಪ್ರಕರಣಗಳ ಮಧ್ಯೆ, ಲಸಿಕೆ ಹಾಕುವ ಕಾರ್ಯವು ಭರದಿಂದ ಸಾಗುತ್ತಿದೆ. ನಿನ್ನೆಯವರೆಗೆ 15-18 ವರ್ಷ ವಯಸ್ಸಿನವರಿಗೆ 20 ದಶಲಕ್ಷಕ್ಕೂ ಹೆಚ್ಚು ಡೋಸ್ ಲಸಿಕೆಗಳನ್ನು ನೀಡಲಾಗುತ್ತದೆ. ದೇಶದಲ್ಲಿ ಕೋವಿಡ್-19 ಲಸಿಕೆಗಳ ಸಂಖ್ಯೆ 151.58 ಕೋಟಿ ತಲುಪಿದೆ.

WHO ಮನವಿ
WHO ಮುಖ್ಯ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್ ಅವರು ಓಮಿಕ್ರಾನ್ ಅತ್ಯಂತ ವೇಗವಾಗಿ ಹರಡುತ್ತಿದೆ. ಆದರೆ ಅದರ ಬಗ್ಗೆ ಚಿಂತಿಸಬೇಕಾಗಿಲ್ಲ. ಎಚ್ಚರಿಕೆಯ ಅಗತ್ಯವಿದೆ. ಜಾಗರೂಕರಾಗಿರುವುದು ಕೊರೊನಾವನ್ನು ತಡೆಗಟ್ಟುತ್ತದೆ. ಮನೆಯಿಂದ ಹೊರಗೆ ಕಾಲಿಟ್ಟಾಗಲೆಲ್ಲ ಮಾಸ್ಕ್ ಧರಿಸಿ. ಕೊರೊನಾವೈರಸ್ ಇನ್ನೂ ಮುಗಿದಿಲ್ಲ ಮತ್ತು ಎಲ್ಲರೂ ಜಾಗೃತರಾಗಬೇಕು ಎಂಬುದು ಎಲ್ಲರ ಮನಸ್ಸಿನಲ್ಲಿರಬೇಕು ಎಂದರು.

ಮೋದಿ ಮಾತು
ಪ್ರಧಾನಿ ನರೇಂದ್ರ ಮೋದಿ ಕೂಡ ಓಮಿಕ್ರಾನ್ ಬಗ್ಗೆ ಚಿಂತಿಸಬೇಡಿ, ಎಚ್ಚರಿಕೆಯ ಅಗತ್ಯವಿದೆ ಎಂದು ಹೇಳಿದ್ದಾರೆ. ಜನವರಿ 10 ರಿಂದ ಆರೋಗ್ಯ ಕಾರ್ಯಕರ್ತರು ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟ ಗಂಭೀರ ಅನಾರೋಗ್ಯದಿಂದ ಬಳಲುತ್ತಿರುವ ವೃದ್ಧರಿಗೆ ವೈದ್ಯರ ಸಲಹೆ ಮೇರೆಗೆ ಕೊರೊನಾ ಲಸಿಕೆಯನ್ನು ನೀಡಲಾಗುವುದು ಎಂದು ಅವರು ಘೋಷಿಸಿದರು.

ಕೊರೊನಾ ಮಧ್ಯೆ ಓಮಿಕ್ರಾನ್ ಭೀತಿ
ದೇಶದಲ್ಲಿ ಒಂದೇ ದಿನ 616 ಓಮಿಕ್ರಾನ್ ಪ್ರಕರಣಗಳು ವರದಿಯಾಗಿವೆ. ಭಾರತದಲ್ಲಿ ಈಗ ಒಟ್ಟು 3,623 ಓಮಿಕ್ರಾನ್ ಪ್ರಕರಣಗಳು ದಾಖಲಾಗಿವೆ. ಓಮಿಕ್ರಾನ್ 27 ರಾಜ್ಯಗಳಲ್ಲಿ ವರದಿಯಾಗಿದ್ದು, ಮಹಾರಾಷ್ಟ್ರದಲ್ಲಿ 1,009 ಪ್ರಕರಣಗಳೊಂದಿಗೆ ಹೆಚ್ಚಿನ ಪ್ರಕರಣಗಳುದಾಖಲಾಗಿವೆ. ದೆಹಲಿಯಲ್ಲಿ 513 ಪ್ರಕರಣಗಳು ವರದಿಯಾಗಿವೆ. ಇಲ್ಲಿಯವರೆಗೆ ವರದಿಯಾದ ಒಟ್ಟು ಓಮಿಕ್ರಾನ್ ಪ್ರಕರಣಗಳಲ್ಲಿ, 1,409 ಜನರು ಚೇತರಿಸಿಕೊಂಡಿದ್ದಾರೆ.

ರಾಷ್ಟ್ರ ರಾಜಧಾನಿಯಲ್ಲಿ ಕೊರೊನಾ
ದೆಹಲಿಯಲ್ಲಿ 20,181 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ, ಇದು ಕಳೆದ ವರ್ಷ ಮೇ ನಂತರದ ಅತಿ ಹೆಚ್ಚು ಏಕದಿನ ಏರಿಕೆಯಾಗಿದೆ. ರಾಷ್ಟ್ರ ರಾಜಧಾನಿ ಕಳೆದ 24 ಗಂಟೆಗಳಲ್ಲಿ 7 ಸಾವುಗಳನ್ನು ವರದಿ ಮಾಡಿದೆ. ಪಾಸಿಟಿವಿಟಿ ರೇಟ್ 19.60 ಪ್ರತಿಶತಕ್ಕೆ ಏರಿದೆ.ಕೋವಿಡ್ ಸಾಂಕ್ರಾಮಿಕ ರೋಗದಿಂದ ಹೆಚ್ಚು ಹಾನಿಗೊಳಗಾದ ರಾಜ್ಯಗಳಲ್ಲಿ ಒಂದಾದ ಮಹಾರಾಷ್ಟ್ರ, ಶನಿವಾರ 41,434 ಹೊಸ ಕೋವಿಡ್ ಪ್ರಕರಣಗಳನ್ನು ದಾಖಲಿಸಿರುವುದರಿಂದ ಹೊಸ ನಿರ್ಬಂಧಗಳನ್ನು ಘೋಷಿಸಿದೆ. ಕಳೆದ 24 ಗಂಟೆಗಳಲ್ಲಿ 13 ಜನರು ಸಾವನ್ನಪ್ಪಿದ್ದಾರೆ. ಅವರಲ್ಲಿ ಐದು ಮಂದಿ ಮುಂಬೈನಲ್ಲಿ ಸಾವನ್ನಪ್ಪಿದ್ದಾರೆ.












Click it and Unblock the Notifications