ಕೊರೊನಾ ಇಳಿಕೆ ವಾಯುಮಾಲಿನ್ಯ ಏರಿಕೆ: ದೆಹಲಿ ಗಾಳಿಯ ಗುಣಮಟ್ಟ ಅತ್ಯಂತ ಕಳಪೆ
ನವದೆಹಲಿ, ನವೆಂಬರ್ 3: ದೇಶದಲ್ಲಿ ಕೊರೊನಾ ಸೋಂಕಿತ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿ ಎಲ್ಲವೂ ಸಹಜಸ್ಥಿತಿಯತ್ತ ಮರುಕಳಿಸುತ್ತಿದ್ದಂತೆ ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚಾಗುತ್ತಿದೆ. ದೀಪಾವಳಿಗೆ ಮುಂಚಿತವಾಗಿಯೇ ದೆಹಲಿಯಲ್ಲಿ ವಾಯುಮಾಲಿನ್ಯ ಕಳೆಪೆಯಾಗಿರುವ ವರದಿ ಬಂದಿದೆ. ಕೊರೊನಾ ಕಾಲದಿಂದಲೂ ಮೊದಲ ಬಾರಿಗೆ "ಅತ್ಯಂತ ಕಳಪೆ" ವರ್ಗಕ್ಕೆ ಪ್ರವೇಶಿಸುವಷ್ಟು ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಹದಗೆಟ್ಟಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಕಾರ ಮಂಗಳವಾರ ನಗರದ ಒಟ್ಟಾರೆ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) 303 ಆಗಿತ್ತು.
ದೆಹಲಿಯ ನೆರೆಹೊರೆಯ ನಗರಗಳಾದ ಫರಿದಾಬಾದ್ (306), ಘಾಜಿಯಾಬಾದ್ (334) ಮತ್ತು ನೋಯ್ಡಾ (303) ಕೂಡ ಕಳಪೆ ಗಾಳಿಯ ಗುಣಮಟ್ಟವನ್ನು ದಾಖಲಿಸಿದೆ. ಇದಕ್ಕೂ ಮೊದಲು ದೆಹಲಿಯಲ್ಲಿ (ಅಕ್ಟೋಬರ್ 17) ಕಳಪೆ ವಿಭಾಗದಲ್ಲಿ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) 298 ದಾಖಲಾಗಿತ್ತು.
ನಿಷೇಧದ ನಡುವೆ ಮಾರಾಟಕ್ಕೆ ಯತ್ನ, 800 ಕೆಜಿಗೂ ಅಧಿಕ ಪಟಾಕಿ ಜಪ್ತಿ
ಗಾಳಿಯ ಗುಣಮಟ್ಟವನ್ನು ಈ ರೀತಿ ಪರಿಗಣಿಸಲಾಗುತ್ತದೆ- ಸೊನ್ನೆ ಮತ್ತು 50 ರ ನಡುವಿನ (AQI) ಸೂಚ್ಯಂಕವನ್ನು 'ಉತ್ತಮ' ಎಂದು ಪರಿಗಣಿಸಲಾಗುತ್ತದೆ, 51 ಮತ್ತು 100 ನಡುವಿನ (AQI) ಸೂಚ್ಯಂಕವನ್ನು 'ತೃಪ್ತಿಕರ' ಎನ್ನಲಾದರೆ, 101 ಮತ್ತು 200 ನಡುವಿನ (AQI) ಸೂಚ್ಯಂಕವನ್ನು 'ಮಧ್ಯಮ' ಎಂದು ಪರಿಗಣಿಸಲಾಗುತ್ತದೆ. ಇನ್ನೂ 201 ಮತ್ತು 300 'ಕಳಪೆ' ಹಾಗೂ 301 ಮತ್ತು 400 ನಡುವಿನ (AQI) ಸೂಚ್ಯಂಕವನ್ನು 'ಅತ್ಯಂತ ಕಳಪೆ' ಮತ್ತು 401- 500 ನಡುವಿನ (AQI) ಸೂಚ್ಯಂಕವನ್ನು 'ತೀವ್ರ' ಎಂದು ಪರಿಗಣಿಸಲಾಗುತ್ತದೆ.
ಮಂಗಳವಾರ ದೆಹಲಿಯಲ್ಲಿ ಮಾಲಿನ್ಯದ ತೀವ್ರತೆಗೆ ಪಿಎಂ 2.5 ಮಾಲಿನ್ಯದ ಶೇಕಡಾ 6 ರಷ್ಟು ಸ್ಟಬಲ್ ಸುಡುವಿಕೆಯಾಗಿದೆ ಎಂದು ವಾಯು ಗುಣಮಟ್ಟದ ಮುನ್ಸೂಚನೆ ಸಂಸ್ಥೆ SAFAR ಹೇಳಿದೆ. ಉಳಿದ ಮಾಲಿನ್ಯಕ್ಕೆ ಸ್ಥಳೀಯ ಮೂಲಗಳು ಕಾರಣ ಎಂದು ಪಿಟಿಐ ವರದಿ ಮಾಡಿದೆ.
ಅಕ್ಟೋಬರ್‌ನಲ್ಲಿ ಭಾರೀ ಮಳೆಯಿಂದಾಗಿ ಈ ಋತುವಿನಲ್ಲಿ ದೆಹಲಿಯ ವಾಯುಮಾಲಿನ್ಯದಲ್ಲಿ ಕೃಷಿ ಬೆಂಕಿಯ ಕೊಡುಗೆ ಕಡಿಮೆಯಿದ್ದರೂ, ದೀಪಾವಳಿಯ ನಂತರ ಸನ್ನಿವೇಶವು ಬದಲಾಗುವ ಸಾಧ್ಯತೆಯಿದೆ. ದೀಪಾವಳಿ ರಾತ್ರಿಯಲ್ಲಿ ದೆಹಲಿಯ ಗಾಳಿಯ ಗುಣಮಟ್ಟವು "ತೀವ್ರ" ವರ್ಗಕ್ಕೆ ಇಳಿಯಬಹುದು. ಅದರ ಪಿಎಂ 2.5 ಮಾಲಿನ್ಯದಲ್ಲಿ ಪಟಾಕಿ ಪಾಲು ಸೇರುತ್ತದೆ. ಇದು ನಂತರದ ದಿನದಲ್ಲಿ ಶೇಕಡಾ 40 ಕ್ಕೆ ಏರಬಹುದು ಎಂದು SAFAR ಭವಿಷ್ಯ ನುಡಿದಿದೆ.

"2019 ರ ಪಟಾಕಿ-ಸಂಬಂಧಿತ ಹೊರಸೂಸುವಿಕೆಯ 50 ಪ್ರತಿಶತವನ್ನು ನಾವು ಪರಿಗಣಿಸಿದ್ದರೂ ಸಹ, AQI ನವೆಂಬರ್ 4 ರಾತ್ರಿಯಿಂದ 'ತೀವ್ರ' ವರ್ಗಕ್ಕೆ ಕುಸಿಯುತ್ತದೆ ಮತ್ತು ನವೆಂಬರ್ 5 ರವರೆಗೆ ಇರುತ್ತದೆ ಎಂದು ಊಹಿಸಲಾಗಿದೆ" ಎಂದು SAFAR ಹೇಳಿದೆ. ಕಳೆದ ವರ್ಷ, ನವೆಂಬರ್ 5 ರಂದು ದೆಹಲಿಯ ಮಾಲಿನ್ಯದಲ್ಲಿ ಪಟಾಕಿ ಪಾಲು ಶೇಕಡಾ 42 ರಷ್ಟಿತ್ತು.
Delhi: Air quality at Jantar Mantar up till 5 am was 'Very
— ANI (@ANI) November 3, 2021
Unhealthy'- 222.28 pic.twitter.com/aIasodHtYd
ಕೊರೊನಾ ಆರಂಭದಲ್ಲಿ ದೆಹಲಿಯ ಗಾಳಿ ಗುಣಮಟ್ಟ ಸುಧಾರಣೆ ಕಂಡಿತ್ತು. ಕೊರೊನಾ ವೈರಸ್ ಭೀತಿಯಿಂದ 2020ರಲ್ಲಿ ಭಾರತ ಸೇರಿ ಜಗತ್ತಿನ ಹಲವು ದೇಶಗಳಲ್ಲಿ ಲಾಕ್‌ಡೌನ್ ಘೋಷಣೆಯಾಗಿತ್ತು. ಇದರ ಪರಿಣಾಮ ರಾಷ್ಟ್ರದ ಸುಮಾರು 90 ನಗರಗಳಲ್ಲಿ ವಾಯುಮಾಲಿನ್ಯ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿತ್ತು. ಇದನ್ನು ಸ್ವಾಗತಿಸಿದ ಪರಿಸರವಾದಿಗಳು ಈಗಲಾದರೂ ಎಚ್ಚೆತ್ತುಕೊಳ್ಳಬೇಕಾಗಿದ್ದು, ಪರಿಸರಕ್ಕೆ ಹಾನಿಮಾಡುವ ಅಭಿವೃದ್ಧಿ ಕಾರ್ಯಗಳನ್ನು ಸ್ಥಗಿತಗೊಳಿಸಲು ಆಗ್ರಹಿಸಿದ್ದರು. ಭಾರತದಲ್ಲಿ 2020ರಲ್ಲಿ ಏಪ್ರಿಲ್ 14 ರವರೆಗೆ 21 ದಿನಗಳ ಕಾಲ ಲಾಕ್‌ಡೌನ್ ಘೋಷಿಸಲಾಗಿತ್ತು. ಜನರು ಅನವಶ್ಯಕವಾಗಿ ಮನೆಯಿಂದ ಹೊರಗೆ ಬರಬಾರದು ಎಂದು ಸೂಚಿಸಲಾಗಿತ್ತು. ಇದರಿಂದ 130 ಕೋಟಿ ಜನಸಂಖ್ಯೆ ಹೊಂದಿರುವ ದೇಶದಲ್ಲಿ ವಾಹನ ಸಂಚಾರ ಗಮನಾರ್ಹ ಪ್ರಮಾಣದಲ್ಲಿ ಕುಸಿದು ವಾತಾವರಣದಲ್ಲಿನ ಮಾಲಿನ್ಯಕಾರಕ ಸೂಕ್ಷ್ಮ ಕಣದ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿತ್ತು. ದೆಹಲಿಯಲ್ಲಿ ಈ ಪ್ರಮಾಣ ಶೇ.30ರಷ್ಟಕ್ಕೆ ಕುಸಿದಿತ್ತು.