ಅಪರಾಧಿ ಸಂಸದರನ್ನು ತಕ್ಷಣ ಅನರ್ಹಗೊಳಿಸಿ
ಶನಿವಾರ ನವದೆಹಲಿಯಲ್ಲಿ ಈ ಕುರಿತು ಆದೇಶ ಹೊರಡಿಸಿರುವ ಅರ್ಟಾನಿ ಜನರಲ್ ಜಿ.ಇ.ವಾಹನ್ವತಿ, ಲಾಲು ಮತ್ತು ಜಗದೀಶ್ ಶರ್ಮಾ, ಪ್ರತಿನಿಧಿಸುತ್ತಿರುವ ಸಂಸದ ಸ್ಥಾನಗಳು ಪ್ರಸ್ತುತ ಖಾಲಿ ಇವೆ ಎಂದು ಅಧಿಸೂಚನೆ ಹೊರಡಿಸುವಂತೆ ಲೋಕಸಭಾ ಇಲಾಖೆಗೆ ಸೂಚನೆ ನೀಡಿದ್ದಾರೆ.
ಸಂಸದರನ್ನು ಅನರ್ಹಗೊಳಿಸುವ ವಿಷಯಕ್ಕೆ ಸಂಬಂಧಿಸಿದಂತೆ ಎರಡನೇ ಬಾರಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಅರ್ಟಾನಿ ಜನರಲ್, ಓರ್ವ ಸಂಸದನನ್ನು ನ್ಯಾಯಾಲಯವು ಅಪರಾಧಿ ಎಂದು ಘೋಷಿಸಿದ ತಕ್ಷಣ, ಅವರ ಸ್ಥಾನ ಖಾಲಿ ಇದೆ ಅಧಿಸೂಚನೆ ಹೊರಡಿಸಬೇಕು ಎಂದು ಹೇಳಿದ್ದಾರೆ.
ನ್ಯಾಯಾಲಯದ ತೀರ್ಪಿನ ನಂತರವೂ ಸಂದಸದರ ಅನರ್ಹತೆ ಕುರಿತು ಆದೇಶ ಹೊರಡಿಸದಿದ್ದರೆ, ಅದು ಸುಪ್ರೀಂ ಕೋರ್ಟ್ ಆದೇಶದ ಉಲ್ಲಂಘನೆಯಾಗುತ್ತದೆ. ಆದ್ದರಿಂದ ತಕ್ಷಣ ಆದೇಶ ಹೊರಡಿಸಬೇಕು ಎಂದು ಇಲಾಖೆಗೆ ನಿರ್ದೇಶಿಸಿದ್ದಾರೆ.
ಇಂಥಾ ಅಧಿಸೂಚನೆಗಳನ್ನು ಸಂಬಂಧಪಟ್ಟ ಇಲಾಖೆಗಳು ತಕ್ಷಣ ಹೊರಡಿಸಬೇಕು ಎಂದು ಹೇಳುವ ಮೂಲಕ ಕ್ರಿಮಿನಲ್ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ಜನಪ್ರತಿನಿಧಿಗಳ ಕಾಯ್ದೆಯನ್ನು ತ್ವರಿತವಾಗಿ ಜಾರಿಗೆ ತತರಲು ಮುಂದಾಗಿದ್ದಾರೆ. (ಲಾಲು ಪ್ರಸಾದ್ ತಪ್ಪಿತಸ್ಥ)
ಈ ಹಿಂದೆ ಸಂಸದರು ಅಪರಾಧಿಗಳೆಂದು ಸಾಬೀತಾದರೆ ಅವರನ್ನು ಕೂಡಲೇ ಅನರ್ಹಗೊಳಿಸಬೇಕೆಂದು ಅರ್ಟಾನಿ ಜನರಲ್ ಹೇಳಿಕೆ ನೀಡಿದ್ದರು. ಆದರೆ, ಈ ಕ್ರಮದ ಬಗ್ಗೆ ಹೆಚ್ಚಿನ ವಿವರಗಳು ಬೇಕು ಎಂದು ಲೋಕಸಭಾ ಇಲಾಖೆ ಅವರ ಬಳಿ ಮಾಹಿತಿ ಕೇಳಿತ್ತು.
ಇದಕ್ಕೆ ಉತ್ತರಿಸಿರುವ ಅರ್ಟಾನಿ ಜನರಲ್ ನ್ಯಾಯಾಲಯದ ತೀರ್ಪು ಪ್ರಕಟಗೊಂಡ ತಕ್ಷಣ, ಜನಪ್ರತಿನಿಧಿಗಳ ಸ್ಥಾನ ಖಾಲಿ ಇದೆ ಎಂದು ಅಧಿಸೂಚನೆ ಹೊರಡಿಸುವಂತೆ ಲೋಕಸಭಾ ಇಲಾಖೆಗೆ ನಿರ್ದೇಶನ ನೀಡಿದ್ದಾರೆ.