ಭಾರತದ ಸರದಿ ಇನ್ನೂ ಯಾವಾಗ ಮೋದಿ ಜೀ?; ರಾಹುಲ್ ಗಾಂಧಿ ಟ್ವೀಟ್
ನವದೆಹಲಿ, ಡಿಸೆಂಬರ್ 23: ಚೀನಾ, ಅಮೆರಿಕ, ಬ್ರಿಟನ್ ಹಾಗೂ ರಷ್ಯಾ ದೇಶಗಳು ಈಗಾಗಲೇ ಕೊರೊನಾ ಲಸಿಕೆ ನೀಡಲು ಆರಂಭಿಸಿವೆ. ಆದರೆ ಭಾರತದಲ್ಲಿ ಏಕೆ ಇನ್ನೂ ಲಸಿಕೆ ನೀಡಲು ಹಿಂದೇಟು ಹಾಕಲಾಗುತ್ತಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿಯವರನ್ನು ಪ್ರಶ್ನಿಸಿದ್ದಾರೆ.
ಲಸಿಕೆ ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, "ವಿಶ್ವದಲ್ಲಿ ಈಗಾಗಲೇ 23 ಲಕ್ಷ ಮಂದಿ ಕೊರೊನಾ ಲಸಿಕೆ ಪಡೆದುಕೊಂಡಿದ್ದಾರೆ. ಚೀನಾ, ಅಮೆರಿಕ, ಬ್ರಿಟನ್, ರಷ್ಯಾ ದೇಶಗಳು ಸಕ್ರಿಯವಾಗಿ ಲಸಿಕೆ ನೀಡಲು ಆರಂಭಿಸಿವೆ. ಆದರೆ ಭಾರತದಲ್ಲಿ ಲಸಿಕೆ ಕುರಿತು ಇನ್ನೂ ಸ್ಪಷ್ಟತೆಯೇ ಸಿಕ್ಕಿಲ್ಲ" ಎಂದು ಕೇಳಿದ್ದಾರೆ.
"ಭಾರತದಲ್ಲಿ ಲಸಿಕೆಯ ಸರದಿ ಬರುವುದಾದರೂ ಯಾವಾಗ ಮೋದಿ ಜೀ? ಎಂದು ಟ್ವೀಟ್ ನಲ್ಲಿ ಪ್ರಶ್ನಿಸಿದ್ದಾರೆ.

ಭಾರತದಲ್ಲಿ ಯಾವುದೇ ಕೊರೊನಾ ಲಸಿಕೆಗೆ ಇನ್ನೂ ಅನುಮತಿ ನೀಡಿಲ್ಲ. ಮುಂದಿನ ವಾರದೊಳಗೆ ಸರ್ಕಾರ ಆಕ್ಸ್ ಫರ್ಡ್ ಆಸ್ಟ್ರಾಜೆನಿಕಾ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡುವ ಸೂಚನೆ ದೊರೆತಿದ್ದು, ಭಾರತ್ ಬಯೋಟೆಕ್, ಫೈಜರ್ ಲಸಿಕೆಗಳಿಗೂ ಅನುಮತಿ ನೀಡುವುದಾಗಿ ತಿಳಿದುಬಂದಿದೆ. ಲಸಿಕೆಗಳು ಸುರಕ್ಷಿತ ಎಂದು ಸಾಬೀತಾದ ನಂತರವಷ್ಟೇ ಲಸಿಕಾ ಕಾರ್ಯಕ್ರಮ ಆರಂಭಿಸಲಾಗುವುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಲಸಿಕೆಗಳ ಶೇಖರಣೆಗೆ ಸೂಕ್ತ ವ್ಯವಸ್ಥೆ ಮಾಡಿರುವುದಾಗಿ ತಿಳಿಸಿರುವ ಆರೋಗ್ಯ ಸಚಿವಾಲಯ, ದಿನಕ್ಕೆ ನೂರು ಮಂದಿಗೆ ಲಸಿಕೆ ನೀಡುವ ಯೋಜನೆಯಿದೆ ಎಂದಿದೆ. ದೇಶದಲ್ಲಿ ಪ್ರತಿಯೊಬ್ಬರಿಗೂ ಕೊರೊನಾ ಲಸಿಕೆ ಸಿಗುವುದಾಗಿ ದೃಢಪಡಿಸಿದೆ.
ಅಮೆರಿಕದಲ್ಲಿ ಫೈಜರ್, ಮಾಡರ್ನಾ ಕೊರೊನಾ ವೈರಸ್ ಲಸಿಕೆಯನ್ನು ಹಲವರಿಗೆ ನೀಡಲಾಗಿದೆ. ಹೊಸ ರೂಪಾಂತರ ಕೊರೊನಾ ವೈರಸ್ ಕಾಣಿಸಿಕೊಂಡಿರುವ ಬ್ರಿಟನ್ ನಲ್ಲೂ 1,30,000 ಮಂದಿಗೆ ಫೈಜರ್ ಲಸಿಕೆ ನೀಡಲಾಗಿದೆ. ಚೀನಾದಲ್ಲಿ ಸಿನೊಫಾರ್ಮಾ ಲಸಿಕೆಯನ್ನು ಸಾರ್ವಜನಿಕರಿಗೆ ನೀಡುತ್ತಿದ್ದು, ರಷ್ಯಾದಲ್ಲಿ ಸ್ಪುಟ್ನಿಕ್ ವಿ ಲಸಿಕೆ ನೀಡಲಾಗುತ್ತದೆ. ಭಾರತದಲ್ಲೂ ಮುಂದಿನ ಜನವರಿ ತಿಂಗಳಿನಲ್ಲಿ ಲಸಿಕೆ ನೀಡುವುದಾಗಿ ತಿಳಿದುಬಂದಿದೆ.












Click it and Unblock the Notifications