ಪ್ರಚಾರದ ವೇಳೆ ಕೋಮು ನಂಜಿನ ಭಾಷಣ; ಸಮಸ್ಯೆಯಲ್ಲಿ ಸಿಧು
ನವದೆಹಲಿ, ಏಪ್ರಿಲ್ 16: ಕಾಂಗ್ರೆಸ್ ನಾಯಕ ಹಾಗೂ ಪಂಜಾಬ್ ಸಚಿವ ನವ್ ಜೋತ್ ಸಿಂಗ್ ಸಿಧು ಮಂಗಳವಾರ ಸಮಸ್ಯೆಗೆ ಸಿಲುಕಿದ್ದಾರೆ. ಬಿಹಾರದಲ್ಲಿ ಚುನಾವಣೆ ಭಾಷಣ ಮಾಡುವ ವೇಳೆ, ಮುಸ್ಲಿಮರೆಲ್ಲ ಒಟ್ಟಾಗಿ ಸೇರಿ ಈ ಬಾರಿ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ಸೋಲಿಸಬೇಕು ಎಂದು ಮನವಿ ಮಾಡಿದ್ದರು.
ಬಿಹಾರದ ಕಟಿಹಾರ್ ನಲ್ಲಿ ಪ್ರಚಾರ ಮಾಡುವ ವೇಳೆ ಸಿಧು ಈ ವಿವಾದಾತ್ಮಕ ಮನವಿ ಮಾಡಿದ್ದರು. ಯೋಗಿ ಆದಿತ್ಯನಾಥ್, ಮಾಯಾವತಿ, ಮೇನಕಾ ಗಾಂಧಿ ಮತ್ತು ಅಜಂ ಖಾನ್ ಇದೇ ರೀತಿಯ ಕೋಮಿಗೆ ಸಂಬಂಧಿಸಿದ ಹೇಳಿಕೆ ನೀಡಿದ್ದರಿಂದ ಅವರ ವಿರುದ್ಧ ಚುನಾವಣೆ ಆಯೋಗ ಒಂದು ದಿನದ ಹಿಂದಷ್ಟೇ ಕ್ರಮ ಕೈಗೊಂಡಿತ್ತು.
ನನ್ನ ಮುಸ್ಲಿಮ್ ಸಹೋದರರಿಗೆ ಎಚ್ಚರಿಸಲು ಬಯಸುತ್ತೇನೆ. ಕೆಲವರು ನಿಮ್ಮನ್ನು ಒಡೆಯಲು ಪ್ರಯತ್ನಿಸುತ್ತಿದ್ದಾರೆ. ಒವೈಸಿಯಂಥವರನ್ನು ಎತ್ತಿ ಕಟ್ಟಿ ನಿಮ್ಮ ಮತಗಳನ್ನು ವಿಭಜನೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ನೀವೆಲ್ಲ ಒಗ್ಗಟ್ಟಾಗಿ ಮತ್ತು ಒಂದಾಗಿ ಮತ ಹಾಕಿದರೆ ಮೋದಿಯನ್ನು ಆಚೆ ಹಾಕಬಹುದು ಎಂದು ಸಿಧು ಹೇಳಿದ್ದರು.

ಚುನಾವಣೆ ಆಯೋಗವು ಸೋಮವಾರದಂದು ಉತ್ತರಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಮೇಲೆ ದೇಶದಾದ್ಯಂತ ಯಾವುದೇ ಭಾಗದಲ್ಲಿ ಎಪ್ಪತ್ತೆರಡು ಗಂಟೆ ಕಾಲ ಪ್ರಚಾರ ಮಾಡುವಂತಿಲ್ಲ ಎಂದು ನಿಷೇಧ ಹೇರಿತ್ತು. ಕೇಂದ್ರ ಸಚಿವೆ ಮೇನಕಾ ಗಾಂಧಿ, ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ ಮೇಲೆ ಮಂಗಳವಾರದಿಂದ ನಲವತ್ತೆಂಟು ಗಂಟೆ ನಿಷೇಧ ಹೇರಿತ್ತು. 'ಪ್ರಚೋದನಾಕಾರಿ' ಕೋಮುವಾದಿ ಹೇಳಿಕೆ ನೀಡಿದ್ದಕ್ಕಾಗಿ ಈ ತೀರ್ಮಾನ ಕೈಗೊಳ್ಳಲಾಗಿತ್ತು.
ನಟಿ- ರಾಜಕಾರಣಿ ಜಯಪ್ರದಾ ಬಗ್ಗೆ ಅವಹೇಳನಾಕಾರಿಯಾಗಿ ಮಾತನಾಡಿದ್ದ ಸಮಾಜವಾದಿ ಪಕ್ಷದ ಅಜಂ ಖಾನ್ ಗೆ ಕೂಡ ಎಪ್ಪತ್ತೆರಡು ಗಂಟೆಗಳ ಕಾಲ ಪ್ರಚಾರಕ್ಕೆ ನಿಷೇಧ ಹೇರಲಾಗಿದೆ. ಇದೇ ಮೊದಲ ಬಾರಿಗೆ ಅಖಿಲ ಭಾರತ ಮಟ್ಟದಲ್ಲಿ ರಾಜಕಾರಣಿಗಳಿಗೆ ಪ್ರಚಾರಕ್ಕೆ ನಿಷೇಧ ಹೇರಲಾಗಿದೆ.












Click it and Unblock the Notifications