ಇಂಡಿಗೋ ಪ್ರಯಾಣಕ್ಕೆ ಅವಕಾಶವಿಲ್ಲವೇ ಹಾಗಿದ್ರೆ 25 ಲಕ್ಷ ಕೊಡಿ!
ನವದೆಹಲಿ, ಫೆಬ್ರವರಿ.01: ಇಂಡಿಗೋ ವಿಮಾನ ಪ್ರಯಾಣಕ್ಕೆ ನಿರ್ಬಂಧ ವಿಧಿಸಿರುವುದನ್ನು ಪ್ರಶ್ನಿಸಿ ಹಾಸ್ಯ ಕಲಾವಿದ ಕುನಾಲ್ ಕಮ್ರಾ ವಿಮಾನಯಾನ ಸಂಸ್ಥೆಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. 6 ತಿಂಗಳ ಪ್ರಯಾಣ ನಿರ್ಬಂಧವನ್ನು ವಿರೋಧಿಸಿ 25 ಲಕ್ಷ ರುಪಾಯಿ ಪರಿಹಾರ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ.
ಇಂಡಿಗೋ ವಿಮಾನಯಾನ ಸಂಸ್ಥೆ ತಮ್ಮ ವಿರುದ್ಧ ತೆಗೆದುಕೊಂಡಿರುವ ಕ್ರಮದಿಂದ ಮಾನಸಿಕವಾಗಿ ನೊಂದಿದ್ದೇನೆ. ಮನಸಿಗೆ ನೋವು ಉಂಟು ಮಾಡುವಂತಾ ಕ್ರಮಕ್ಕೆ ದಂಡವಾಗಿ ಸಂಸ್ಥೆಯು ತಮಗೆ ಪರಿಹಾರ ನೀಡಬೇಕು ಎಂದು ಕುನಾಲ್ ಕಮ್ರಾ ನೋಟಿಸ್ ನಲ್ಲಿ ತಿಳಿಸಿದ್ದಾರೆ.
ಕಳೆದ ಜನವರಿ.28ರಂದು ಮುಂಬೈ ಟು ಲಕ್ನೋಗೆ ತೆರಳುತ್ತಿದ್ದ 6E 5317 ಇಂಡಿಗೋ ವಿಮಾನದಲ್ಲಿ ಹಾಸ್ಯ ಕಲಾವಿದ ಕುನಾಲ್ ಕಮ್ರಾ ಪ್ರಯಾಣಿಸುತ್ತಿದ್ದರು. ಇದೇ ವೇಳೆ ಸಹ ಪ್ರಯಾಣಿಕರಾಗಿದ್ದ ಖಾಸಗಿ ಸುದ್ದಿ ವಾಹಿನಿಯ ಸಂಪಾದಕರಾದ ಅರ್ನಬ್ ಗೋಸ್ವಾಮಿ ಅವರಿಗೆ ಕಿರಿಕಿರಿ ಉಂಟು ಮಾಡುವ ರೀತಿಯಲ್ಲಿ ವರ್ತಿಸಿದ್ದರು ಎಂದು ಆರೋಪಿಸಲಾಗಿದೆ.

6 ತಿಂಗಳ ನಿರ್ಬಂಧ ವಿಧಿಸಿದ್ದ ಇಂಡಿಗೋ:
ಇಂಡಿಗೋ ವಿಮಾನದಲ್ಲಿ ಪತ್ರಕರ್ತ ಅರ್ನಬ್ ಗೋಸ್ವಾಮಿ ಜೊತೆ ಅತಿರೇಕದ ವರ್ತನೆ ತೋರಿದ ಆರೋಪ ಹಿನ್ನೆಲೆಯಲ್ಲಿ ವಿಮಾನಯಾನ ಸಂಸ್ಥೆಯು ಕುನಾಲ್ ಕಮ್ರಾ ಮೇಲೆ ನಿರ್ಬಂಧ ವಿಧಿಸಿತ್ತು. ಆರು ತಿಂಗಳ ಕಾಲ ಇಂಡಿಗೋ ಸಂಸ್ಥೆಯ ವಿಮಾನಗಳಲ್ಲಿ ಪ್ರಯಾಣಕ್ಕೆ ನಿಷೇಧ ವಿಧಿಸಲಾಗಿತ್ತು. ಇದರ ಬೆನ್ನಲ್ಲೇ ಏರ್ ಇಂಡಿಯಾ ಮತ್ತು ಸ್ಪೈಸ್ ಜೆಟ್ ವಿಮಾನಯಾನ ಸಂಸ್ಥೆಗಳು ಕೂಡಾ ಕುನಾಲ್ ಕಮ್ರಾ ವಿರುದ್ಧ ಕ್ರಮ ತೆಗೆದುಕೊಂಡಿದ್ದವು. ಸಂಸ್ಥೆಯು ಅಧಿಕೃತವಾಗಿ ಆದೇಶಿಸುವವರೆಗೂ ತಮ್ಮ ಸಂಸ್ಥೆಯ ವಿಮಾನಗಳಲ್ಲಿ ಪ್ರಯಾಣಕ್ಕೆ ನಿಷೇಧವನ್ನು ವಿಧಿಸಿದ್ದವು.
ಯಾವ ಅಪರಾಧಕ್ಕೆ ಎಷ್ಟು ಅವಧಿ ನಿರ್ಬಂಧ:
ಭಾರತೀಯ ವಿಮಾನಯಾನ ಪ್ರಾಧಿಕಾರವು ಮೂರು ವಿಭಾಗಗಳಲ್ಲಿ ಅಪರಾಧವನ್ನು ವಿಂಗಡಿಸಿದೆ. ಮೊದಲ ವಿಭಾಗದಲ್ಲಿ ಮೌಖಿಕ ನಿಂದನೆಗೈದ ಪ್ರಯಾಣಿಕರಿಗೆ 3 ತಿಂಗಳವರೆಗೂ ನಿರ್ಬಂಧಿಸಲಾಗುತ್ತದೆ. ಎರಡನೇ ವಿಭಾಗದಲ್ಲಿ ದೈಹಿಕವಾಗಿ ಹಲ್ಲೆ ನಡೆಸಿದ ಅಪರಾಧಕ್ಕೆ 6 ತಿಂಗಳವರೆಗೂ ನಿರ್ಬಂಧ ವಿಧಿಸಲಾಗುತ್ತದೆ. ಪ್ರಾಣ ಬೆದರಿಕೆ ಹಾಗೂ ವಿಮಾನದ ಸುರಕ್ಷತೆಗೆ ಧಕ್ಕೆ ಉಂಟು ಮಾಡುವಂತಾ ನಡುವಳಿಕೆಯನ್ನು ಮೂರನೇ ವಿಭಾಗದಲ್ಲಿ ಸೇರಿಸಿದ್ದು, ಈ ಅಪರಾಧಕ್ಕೆ ಕನಿಷ್ಠ 2 ವರ್ಷಗಳ ಕಾಲ ನಿರ್ಬಂಧ ವಿಧಿಸಲಾಗುತ್ತದೆ.












Click it and Unblock the Notifications